Advertisement
1970ರ ದಶಕದಲ್ಲಿ ದಲಿತರ ಕೇರಿಗೆ ತಾವು ಹೋದಾಗಲೂ ಭಾರೀ ಕೋಲಾಹಲ ಉಂಟಾಯಿತು. ಇದಕ್ಕೂ ಮೂರ್‍ನಾಲ್ಕು ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಮಾಧ್ಯಮದವರು ಕುರುಬರಿಗೆ ಮಂತ್ರ ದೀಕ್ಷೆ ಕೊಡುತ್ತೀರಾ ಎಂದು ಕೇಳಿದರು. ಕೊಡುವುದಿಲ್ಲ ಎನ್ನುವುದು ಸರಿಯೆ? ನಾವು ಅಪೇಕ್ಷೆಪಟ್ಟ ಎಲ್ಲರಿಗೂ ಕೊಡುತ್ತೇವೆ. ಕುರುಬರಿಗೂ ಕೊಡುತ್ತೇವೆ ಎಂದೆ. ಹಿಂದೆಯೂ ಕೊಟ್ಟಿದ್ದೆವು, ಈಗಲೂ ಕೊಡುತ್ತಿದ್ದೇವೆ. ಆಗ ಭಾರೀ ಚರ್ಚೆಯಾಯಿತು. ಹೀಗಾಗಿ ವಿವಾದಗಳನ್ನು ನಾವಾಗಿ ತಂದುಕೊಳ್ಳುವುದಿಲ್ಲ. ಅದಾಗಿ ಆಗುತ್ತವೆ. ಈಗ ಈದ್ ಉಪಾಹಾರದ ಘಟನೆಯೂ ಹೀಗೆಯೇ. ಮತೀಯ ಸೌಹಾರ್ದತೆಗಾಗಿ ಕಾರ್ಯಕ್ರಮ ಏರ್ಪಡಿಸಿದೆ. ಅದೇ ದಿನ ಹಲವಾರು ದೂರವಾಣಿ ಕರೆಗಳು ಬಂದು ವಿರೋಧ ವ್ಯಕ್ತವಾಯಿತು. ಆಹ್ವಾನ ಕೊಟ್ಟ ಅನಂತರ ಆಗುವುದಿಲ್ಲ ಎನ್ನುವುದು ಸರಿಯಲ್ಲ. ಅದೂ ಕೂಡ ಭೋಜನ ಮಾಡುವ ಹಾಲ್‌ನ ಉಪ್ಪರಿಗೆಯಲ್ಲಿ ನಡೆದದ್ದು. ಕೃಷ್ಣಮಠದಲ್ಲಿ ಅನೇಕ ಕ್ರೈಸ್ತ ವಿದ್ಯಾರ್ಥಿಗಳೂ ಊಟ ಮಾಡಿಕೊಂಡು ಹೋಗುತ್ತಾರೆಂದು ಸಮಾಧಾನಪಡಿಸಿದ್ದೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು.
ಹಿಂದೆ ಮೂರನೆಯ ಪರ್ಯಾಯದಲ್ಲಿ (1984-85) ಈದ್ ಸೌಹಾರ್ದ ಕೂಟ ಏರ್ಪಡಿಸಿದ್ದರು. ಆಗ ಇಷ್ಟು ವಿವಾದಗಳು ಆಗಲಿಲ್ಲ. ಅಂದು ಜನತಾದಳ ನಾಯಕ ಅಮರನಾಥ ಶೆಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಯಿತು. 2017ರಲ್ಲಿ ನಡೆದ ಕಾರ್ಯಕ್ರಮಕ್ಕಿಂತ ದೊಡ್ಡ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆದಿತ್ತು. ಹಿಂದುಗಳು, ಮುಸ್ಲಿಮರು ಸೇರಿ ಸುಮಾರು 500-1000 ಜನರು ಸೇರಿದ್ದರು. ಆಗಲೂ ಕೆಲವರು ಸಿಟ್ಟುಕೊಂಡು ಮಾತನಾಡಿ ಹೋಗಿದ್ದರು. ಪತ್ರಿಕೆಗಳಲ್ಲಿ ವಾದ ವಿವಾದಗಳು ಆಗಿರಲಿಲ್ಲ. ಪರ-ವಿರೋಧ-ತಟಸ್ಥ
2017ರ ಈದ್ ಉಪಾಹಾರ ಕೂಟಕ್ಕೆ ಸಚಿವರಾಗಿದ್ದ ಯು.ಟಿ.ಖಾದರ್, ರಮಾನಾಥ ರೈ, ಆಂಜನೇಯ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರತಾಪಸಿಂಹ, ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಬೆಂಬಲ, ಸಚಿವ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ವಿರೋಧ ಸೂಚಿಸಿದ್ದರು. ಸಿ.ಟಿ.ರವಿ ಮಧ್ಯಮಮಾರ್ಗದಲ್ಲಿ ಮಾತನಾಡಿದ್ದರು.
Related Articles
ತಮಾಷೆ ಎಂದರೆ ಸ್ವಾಮೀಜಿಯವರನ್ನು ಸದಾಕಾಲ ಮೂಲಭೂತವಾದಿಗಳೆಂದು ಕರೆಯುವವರು ಈದ್ ಕೂಟಕ್ಕೆ ಬೆಂಬಲ ಕೊಟ್ಟಿದ್ದರು. ಜಾತ್ಯತೀತವಾದಿಗಳು, ಸಾಹಿತಿಗಳು, ಪ್ರಗತಿಪರರು ಬೆಂಬಲ ನೀಡಿದ್ದರು. ಸಾಹಿತಿಗಳಾದ ಡಾ|ಸಿದ್ದಲಿಂಗಯ್ಯ, ಸಿದ್ದಯ್ಯನವರು ದೂರವಾಣಿ ನೀಡಿ ಬೆಂಬಲ ಸೂಚಿಸಿದ್ದರು. ಯುವಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಹಿಂದೂ ಜಾಗರಣ ವೇದಿಕೆಯವರು ಭೇಟಿಯಾಗಿ ಬೆಂಬಲ ಸೂಚಿಸಿದ್ದರೆ, ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ವಿರೋಧ ಸೂಚಿಸಿದ್ದರು. ಆರೆಸ್ಸೆಸ್‌ನವರು ತಟಸ್ಥರಾಗಿದ್ದರು. ಮುಸ್ಲಿಮರಲ್ಲಿ ಅನೇಕರು ಸಂತಸ ವ್ಯಕ್ತಪಡಿಸಿದ್ದರು. ಬಿಜಾಪುರದಿಂದ ಒಬ್ಬರು ಧರ್ಮಗುರು ದೂರವಾಣಿ ಕರೆ ನೀಡಿ ಸಂತೋಷ ವ್ಯಕ್ತಪಡಿಸಿದ್ದರು.
Advertisement
ಹಿಂದು ಮತ್ತು ಮುಸ್ಲಿಮರಲ್ಲಿ ಸೌಹಾರ್ದ ಬೆಳೆದರೆ ಗೋಹತ್ಯೆಯಂತಹ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಇದುವೇ ನಾವು ಮುಸ್ಲಿಮರಿಂದ ನಿರೀಕ್ಷಿಸುವುದು ಎಂದು ಸ್ವಾಮೀಜಿ ಹೇಳಿದ್ದರು. ಸ್ವಾಮೀಜಿ ಅಂತರಂಗದ ಉದ್ದೇಶ ಹೀಗಿತ್ತು.