ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮಂಗಳವಾರ ಹೊಸದಿಲ್ಲಿಯ ಪ್ರಧಾನಿ ನಿವಾಸದಲ್ಲಿ ನಡೆಯಿತು. ಶ್ರೀಗಳನ್ನು ಪ್ರಧಾನಿ ಮೋದಿ ಸ್ವತಃ ಕೈಹಿಡಿದು ನಿವಾಸದೊಳಕ್ಕೆ ಕರೆದೊಯ್ದು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ಅಪರಾಹ್ನ 4.30ರಿಂದ ಸುಮಾರು 5 ಗಂಟೆವರೆಗೆ ಮಾತುಕತೆ ನಡೆಯಿತು. “ಪ್ರಧಾನಿ ನಮ್ಮನ್ನು ತುಂಬಾ ಸಂತೋಷದಿಂದ ಸ್ವಾಗತಿಸಿದರು. ಐದು ವರ್ಷಗಳಲ್ಲಿ ಅವರು ಮಾಡಿದ ಸಾಧನೆ, ಅದಕ್ಕೆ ಜನತೆ ನೀಡಿದ ಅದ್ಭುತ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದರು. ದೇಶದ ಅಭಿವೃದ್ಧಿಗಾಗಿ ನಮ್ಮ ಪ್ರಾರ್ಥನೆಯನ್ನು ಕೂಡ ಪ್ರಧಾನಿಯವರಿಗೆ ತಿಳಿಸಿದೆ’ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
“ರಾಮಜನ್ಮಭೂಮಿ ಮತ್ತು ಗಂಗಾ ಶುದ್ಧೀಕರಣ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಅವರು ಸ್ವಾಗತಿಸಿ ಪ್ರತಿಕ್ರಿಯಿಸಿದರು. ಬೆಂಗಳೂರಿಗೆ ಆಗಮಿಸಿದ ಅನಂತರ ಹೆಚ್ಚಿನ ಮಾಹಿತಿ ನೀಡುತ್ತೇನೆ’ ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಕೈ ಹಿಡಿದು ಕರೆದೊಯ್ದ ಪ್ರಧಾನಿ: ದಿಲ್ಲಿಯಲ್ಲಿ ಪೇಜಾವರ ಶ್ರೀಗಳು ತಮ್ಮ ಊರುಗೋಲನ್ನು ಪ್ರಧಾನಿ ನಿವಾಸದ ಹೊರಗೆ ಬಿಟ್ಟಿದ್ದರು. ಅಲ್ಲಿ ಅವರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ಶ್ರೀಗಳನ್ನು ಕೈ ಹಿಡಿದು ನಿವಾಸದೊಳಗೆ ಕರೆದೊಯ್ದರು. ಪ್ರಭಾವಳಿ ಸಹಿತವಾದ ಶ್ರೀಕೃಷ್ಣನ ವಿಗ್ರಹವನ್ನು ಶ್ರೀಗಳು ಪ್ರಧಾನಿಗೆ ನೀಡಿ ಆಶೀರ್ವದಿಸಿದರು ಎಂದು ಶ್ರೀಗಳ ಆಪ್ತ ಸಹಾಯಕರು ತಿಳಿಸಿದ್ದಾರೆ.
ಗುರುಪೂರ್ಣಿಮೆ ಆಚರಣೆ: ಹಲವು ವರ್ಷಗಳಿಂದ ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಹೊಸದಿಲ್ಲಿಯ ಅವರ ನಿವಾಸದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಪೇಜಾವರ ಶ್ರೀಗಳು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.