Advertisement

ಪಂಚ ಪರ್ಯಾಯ ಸಾಧಕ ಮಾಧ್ವ ಯತಿವರೇಣ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹರಿಪಾದ ಲೀನ

09:57 AM Dec 30, 2019 | keerthan |

ಉಡುಪಿ: ಮಧ್ವಮತ ಪ್ರತಿಷ್ಠಾಪನಾಚಾರ್ಯ ಆಚಾರ್ಯ ಮಧ್ವರಿಂದ ಸ್ಥಾಪಿಸಲ್ಪಟ್ಟ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ 32ನೇ ಸ್ವಾಮೀಜಿಗಳಾದ – ಮಹಾಸಂತ, ಮಾಧ್ವಮತಪ್ರಚಾರಕ, ಹಿಂದೂ ಕುಲ ತಿಲಕ, ಅಪ್ರತಿಮ ಜ್ಞಾನಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೆಲದಿನಗಳ ತೀವ್ರ ಅನಾರೋಗ್ಯದ ಬಳಿಕ ಇಂದು ಹರಿಪಾದವನ್ನು ಸೇರಿದರು.

Advertisement

ಅಷ್ಟಮಠಗಳ ಯತಿ ಪರಂಪರೆಯಲ್ಲಿ ಸದ್ಯದ ಮಟ್ಟಿಗೆ ಅತೀ ಹಿರಿಯ ಯತಿಯಾಗಿರುವ ವಿಶ್ವೇಶ ತೀರ್ಥರಿಗೆ 89 ವರ್ಷ ವಯಸ್ಸಾಗಿತ್ತು. ಶ್ರೀಗಳ ನಿರ್ಗಮನದೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಉಡುಪಿ ಅಷ್ಟಮಠಗಳ ಯತಿಪರಂಪರೆಯಲ್ಲಿನ ಮಹಾನ್ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಹಿರಿಯ ಶ್ರೀಗಳನ್ನು ಡಿಸೆಂಬರ್ 20ರಂದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಗಳ ಆರೋಗ್ಯ ಪರಿಸ್ಥಿತಿ ವಿಷಮವಾಗಿದ್ದ ಕಾರಣದಿಂದ ಕೆ.ಎಂ.ಸಿ.ಯ ಉನ್ನತ ವೈದ್ಯರ ತಂಡ ಅವರ ಆರೈಕೆಗೆ ನಿಂತಿತ್ತು. ತಪಾಸಣೆಯಲ್ಲಿ ಪೇಜಾವರ ಹಿರಿಯ ಶ್ರೀಗಳಿಗೆ ನ್ಯುಮೋನಿಯಾ ಸಮಸ್ಯೆ ಪತ್ತೆಯಾಗಿದ್ದ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಹಾಗೂ ಆ್ಯಂಟಿಬಯೋಟಿಕ್ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿತ್ತು.

ಸ್ವಾಮೀಜಿಯವರು ಆಸ್ಪತ್ರೆಗೆ ದಾಖಲುಗೊಂಡ ದಿನದಿಂದ ಇಂದಿನವರೆಗೆ ಕೆ.ಎಂ.ಸಿ. ಆಸ್ಪತ್ರೆಯು ಪ್ರತೀದಿನ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ‘ಹೆಲ್ತ್ ಬುಲೆಟಿನ್’ ಪ್ರಕಟಿಸುತ್ತಿತ್ತು. ಕೆಲ ದಿನಗಳ ಹಿಂದೆಯಷ್ಟೇ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡವು ಪತ್ರಿಕಾಗೋಷ್ಠಿ ನಡೆಸಿ ಶ್ರೀಗಳ ಆರೋಗ್ಯ ಸ್ಥಿತಿ ಮತ್ತು ಅವರಿಗೆ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನದ ಕುರಿತಾಗಿಯೂ ಮಾಹಿತಿ ನೀಡಿದ್ದರು.

ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದ ಹಿನ್ನಲೆಯಲ್ಲಿ ಅವರ ಇಚ್ಛೆಯಂತೆ ಇಂದು ಮುಂಜಾನೆ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು. ವೆಂಟಿಲೇಟರ್ ಸಹಿತವಾಗಿ ಆಂಬ್ಯುಲೆನ್ಸ್ ಮೂಲಕ ಬಿಗು ಭದ್ರತೆಯಲ್ಲಿ ಮಠಕ್ಕೆ ಕರೆತರಲಾಗಿತ್ತು. ಮಠದಲ್ಲಿಯೂ ವೆಂಟಿಲೇಟರ್ ಮೂಲಕ ಚಿಕತ್ಸೆ ಮುಂದುವರಿದಿತ್ತು.

Advertisement

ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಶ್ರೀಗಳಿಗೆ ಸುಮಾರು ಒಂದು ತಿಂಗಳುಗಳ ಕಾಲ ಚಿಕಿತ್ಸೆ ನೀಡಬೇಕಾಗುವ ಸಾಧ್ಯತೆಯ ಕುರಿತಾಗಿಯೂ ಸಹ ಕೆಂ.ಎಂ.ಸಿ. ವೈದ್ಯರ ತಂಡ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿತ್ತು. ಬೆಂಗಳೂರಿನ ತಜ್ಞ ವೈದ್ಯರ ತಂಡವೂ ಚಿಕಿತ್ಸೆ ನೀಡಿದೆ. ಹೊಸದಿಲ್ಲಿಯ ಏಮ್ಸ್ ನ ವೈದ್ಯರ ತಂಡ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ವೈದ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯನ್ನೂ ಸಹ ವೈದ್ಯರು ನೀಡಿದ್ದರು.

ಪೇಜಾವರ ಹಿರಿಯ ಶ್ರೀಗಳು ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆಯೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವಾರು ಗಣ್ಯರು ಕರೆಮಾಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದರು.

ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜೀ ಗೃಹಸಚಿವ ಎಂ.ಬಿ. ಪಾಟೀಲ್, ಶಾಸಕ ಜಮೀರ್ ಅಹಮ್ಮದ್, ಐವನ್ ಡಿಸೋಜಾ, ಯು.ಟಿ, ಖಾದರ್, ಗೋವಿಂದ ಕಾರಜೋಳ, ಆಸ್ಕರ್ ಫೆರ್ನಾಂಡೀಸ್, ಉದ್ಯಮಿ ನೀರಾ ರಾಡಿಯಾ,  ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು, ರಾಜಕಾರಣಿಗಳು ಮತ್ತು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಕುರಿತಾದ ಖುದ್ದು ಮಾಹಿತಿಯನ್ನು ಪಡೆದುಕೊಂಡಿದ್ದರು.

ವಿಶ್ವೇಶತೀರ್ಥರಿಂದ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದ ಮಧ್ಯಪ್ರದೇಶದ ಮಾಜೀ ಮುಖ್ಯಮಂತ್ರಿ, ಮಾಜೀ ಕೇಂದ್ರ ಸಚಿವೆ ಉಮಾಭಾರತಿ ಅವರು ಆಸ್ಪತ್ರೆಯಲ್ಲಿ ಶ್ರೀಗಳನ್ನು ಭೇಟಿಯಾದ ಬಳಿಕ ಉಡುಪಿಯಲ್ಲೇ ಇದ್ದಾರೆ. ಹಾಗೆಯೇ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಉಡುಪಿಯಲ್ಲಿರುವ ತಮ್ಮ ಮಠದಲ್ಲೇ ಮೊಕ್ಕಾ ಹೂಡಿದ್ದು ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ವಿಶೇಷ ಪೂಜೆ ಪ್ರಾರ್ಥನೆಯಲ್ಲಿ ಇವರಿಬ್ಬರೂ ನಿರತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next