ಉಡುಪಿ: ಉತ್ತರ ಭಾರತ ಪ್ರವಾಸದಲ್ಲಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಜ್ಜಯಿನಿ ಕ್ಷೇತ್ರಕ್ಕೆ ಭೇಟಿ ನೀಡಿ ಮಹಾಕಾಲೇಶ್ವರನ ದರ್ಶನ ಪಡೆದರು. ಆ ಬಳಿಕ ಚಿತ್ರಕೂಟಕ್ಕೆ ಭೇಟಿ ನೀಡಿರುವ ಅವರು ಶನಿವಾರ ಅಯೋಧ್ಯೆ ರಾಮಜನ್ಮಭೂಮಿಗೆ ಭೇಟಿ ನೀಡುವರು.
ಅಯೋಧ್ಯೆಲ್ಲಿ ನಡೆಯುವ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಸ್ವಾಮೀಜಿ ಪಾಲ್ಗೊಳ್ಳುವರು. ಟ್ರಸ್ಟ್ ರಚನೆಯಾದ ಬಳಿಕ ಅವರು ಇದೇ ಮೊದಲ ಬಾರಿಗೆ ಅಯೋಧ್ಯೆಗೆ ತೆರಳುತ್ತಿದ್ದಾರೆ.
ನ. 10-11ರಂದು ಹೊಸದಿಲ್ಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ತೀರ್ಥ ಕ್ಷೇತ್ರ ಟ್ರಸ್ಟ್‌ನ ಎರಡು ಸಭೆಗಳು ನಡೆಯಲಿದ್ದು ಅದರಲ್ಲೂ ಸ್ವಾಮೀಜಿ ಭಾಗವಹಿಸುವರು. ಅಯೋಧ್ಯೆಯಲ್ಲಿ ನಡೆಯುವ ಸಭೆಯಲ್ಲಿ ಕಾಮಗಾರಿ ಕುರಿತಂತೆ, ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಮಂದಿರ ನಿರ್ಮಾಣ ಕುರಿತು ನಡೆಸಬಹುದಾದ ಆಂದೋಲನದ ಕುರಿತು ಚರ್ಚೆ ನಡೆದು ನಿರ್ಣಯ ತಳೆಯಲಾಗುವುದು.
ಅಯೋಧ್ಯೆಯಲ್ಲಿ 1992ರ ಡಿ. 6ರ ಕರಸೇವೆಯ ಮರುದಿನ ಮುಂಜಾವ ತರಾತುರಿಯಲ್ಲಿ ಪೇಜಾವರ ಹಿರಿಯ ಸ್ವಾಮೀಜಿ ಪ್ರತಿಷ್ಠಾಪಿಸಿದ ರಾಮಲಲ್ಲಾನ ದರ್ಶನ ಮಾಡಿದ ಬಳಿಕ ಸ್ವಾಮೀಜಿ ಹರಿದ್ವಾರ, ಸಾಧ್ಯವಾದರೆ ಬದರಿ ಕ್ಷೇತ್ರಕ್ಕೆ ಭೇಟಿ ನೀಡುವರು. ಮುಂದಿನ ದೀಪಾವಳಿ ತೈಲಾಭ್ಯಂಗವನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಸುವರು. ಹಿಂದೆ ಹಿರಿಯ ಸ್ವಾಮೀಜಿಯವರು ಇರುವಾಗ ಪರ್ಯಾಯದ ಅವಧಿ ಹೊರತುಪಡಿಸಿ ಉಳಿದ ಎಲ್ಲ ದೀಪಾವಳಿಯನ್ನು ವಿದ್ಯಾಪೀಠದ ವಿದ್ಯಾರ್ಥಿಗಳೊಂದಿಗೆ ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ವಿದ್ಯಾರ್ಥಿಗಳು ಇಲ್ಲ. ಕೇವಲ ಹಿರಿಯ 31 ವಿದ್ಯಾರ್ಥಿಗಳು ಮಾತ್ರ ಇದ್ದು ಇವರ ಜತೆಯೇ ಹಬ್ಬದ ಸ್ನಾನವನ್ನು ನಡೆಸುವರು. ಹಿರಿಯ ವಿದ್ಯಾರ್ಥಿಗಳ ಒಂದು ತಂಡ ಸ್ವಾಮೀಜಿಯವರೊಂದಿಗೆ ಇದ್ದು ಅವರಿಗೆ ಶಾಸ್ತ್ರ ಪಾಠಗಳು ಸ್ವಾಮೀಜಿಯವರಿಂದ ನಡೆಯುತ್ತಿವೆ. ಉಳಿದ ಒಂದು ತಂಡ ವಿದ್ಯಾಪೀಠದಲ್ಲಿದೆ. ಗೋಪೂಜೆಯನ್ನು ನೀಲಾವರ ಗೋಶಾಲೆಯಲ್ಲಿ ಸ್ವಾಮೀಜಿ ನಡೆಸಲಿದ್ದಾರೆ.