Advertisement

ಪೇಜಾವರ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ ಮೋದಿ

07:55 PM Nov 08, 2021 | Team Udayavani |

ನವದೆಹಲಿ : ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನವದೆಹಲಿಯಲ್ಲಿ ಸೋಮವಾರ ಸಂಜೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

Advertisement

ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿ ಯನ್ನು ಸ್ವೀಕರಿಸಲು ನವದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಭೇಟಿ ನಡೆಯಿತು .

ಈ ಸಂದರ್ಭದಲ್ಲಿ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಮೋದಿಯವರು ಶ್ರೀ ವಿಶ್ವೇಶತೀರ್ಥರನ್ನು ವಿಶೇಷವಾಗಿ ಸ್ಮರಿಸಿದರು .
ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತೂ ಈರ್ವರೂ ಸಮಾಲೋಚನೆಗೈದರು.

ನರೇಂದ್ರ ಮೋದಿಯವರಿಗೆ ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ ಜರತಾರಿ ಶಾಲು, ಬೆಳ್ಳಿಯ ತಟ್ಟೆಯಲ್ಲಿ ಉಡುಪಿ ಶ್ರೀ ಕೃಷ್ಣನ ಗಂಧ , ನಿರ್ಮಾಲ್ಯ ತುಳಸಿ ನೀಡಿ ಆಶೀರ್ವದಿಸಿದರು . ಉಡುಪಿಯ ಚಿತ್ರಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ಅವರು ರಚಿಸಿದ ಮೋದಿಯವರು ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದವಾದ ತೈಲಚಿತ್ರ ಹಾಗೂ ಸಂಸ್ಕೃತ , ಕನ್ನಡ , ತುಳು ಲಿಪಿಗಳಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನೂ ಶ್ರೀಗಳು ಪ್ರಧಾನಮಂತ್ರಿಯವರಿಗೆ ನೀಡಿದರು. ಈ ಭೇಟಿಯ ಬಗ್ಗೆ ಶ್ರೀಗಳು ಮತ್ತು ಪ್ರಧಾನಮಂತ್ರಿಗಳು ಅತೀವ ಸಂತಸ ವ್ತಕ್ತಪಡಿಸಿದರು.

Advertisement

ಶೀಘ್ರ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳ ಆಹ್ವಾನ

ಈ ( ಪ್ರಧಾನ ಮಂತ್ರಿ ಅಧಿಕಾರದ) ಅವಧಿಯಲ್ಲೇ ಉಡುಪಿ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಆಹ್ವಾನಿಸಿದರು .‌ ಖಂಡಿತ ಬಂದೇ ಬರ್ತೇನೆ ಚಿಂತೆ ಬೇಡ ಎಂದು ಮೋದಿಯವರು ತುಂಬ ಹರ್ಷದಿಂದಲೇ ತಿಳಿಸಿದರು .

ಇದೇ ಸಂದರ್ಭದಲ್ಲಿ , 1 . ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸುವುದು , 2 ದೇಶಾದ್ಯಂತ ಹಿಂದೂ ಶ್ರದ್ಧಾಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು , 3 . ಮಹರ್ಷಿ ವೇದವ್ಯಾಸರ ಜಯಂತಿಯನ್ನು (ಆಷಾಢ ಪೂರ್ಣಿಮಾ ಅಥವಾ ಒಂದು ನಿರ್ದಿಷ್ಟ ದಿನಾಂಕವನ್ನು ) ” ತತ್ತ್ವಜ್ಞಾನ ದಿನ ” ಅಥವಾ ” ಅಧ್ಯಾತ್ಮ ದಿನ ” ಎಂದು ಘೋಷಿಸಿ ಸರ್ಕಾರಿ ಆಚರಣೆಗೆ ವ್ಯವಸ್ಥೆಗೊಳಿಸುವುದು , ಹಾಗೂ ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದು ಎಂಬ ನಾಲ್ಕು ಅಪೇಕ್ಷೆಗಳನ್ನು ಲಿಖಿತವಾಗಿ ನೀಡಿದರು . ಈ ಬಗ್ಗೆಯೂ ಗಮನಹರಿಸುವುದಾಗಿ ಮೋದಿಯವರು ತಿಳಿಸಿದರು .‌

ಶ್ರೀ ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಡಿ ಪಿ ಅನಂತ್ , ಸಾಮಾಜಿಕ ಕಾರ್ಯಕರ್ತ ಶ್ರೀಗಳ ಆಪ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next