Advertisement

ಅಯೋಧ್ಯೆ ರಾಮನ ಗರ್ಭಗುಡಿಗೆ ಶಿಲಾನ್ಯಾಸ : ಪೇಜಾವರ ಶ್ರೀ ಭಾಗಿ

01:31 PM Jun 01, 2022 | Team Udayavani |

ಅಯೋಧ್ಯೆ: ಅಯೋಧ್ಯೆ ಯ ರಾಮಜನ್ಮಭೂಮಿಯಲ್ಲಿ ಬುಧವಾರ ಜ್ಯೇಷ್ಠ ಶುದ್ಧ ಬಿದಿಗೆಯ ಪರ್ವ ದಿನದಂದು ಶ್ರೀ ರಾಮನ‌ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಡಿಗಲ್ಲು ಹಾಕುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಧಾರ್ಮಿಕ ಸಮಾರಂಭದಲ್ಲಿ ಪೇಜಾವರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾದರು.

Advertisement

ಶ್ರೀಗಳು ವಿಷ್ಣು ಸಹಸ್ರನಾಮ ಪಾರಾಯಣಗೈದು ಉಡುಪಿ ಕೃಷ್ಣನ ಪ್ರಸಾದ , ಸಾಲಿಗ್ರಾಮ ಶಿಲೆಗಳು ಮತ್ತು ನವರತ್ನ , ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು .ಅಲ್ಲದೇ ಶ್ರೀಗಳು ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸಮ್ಮಾನಿಸಿದರು.

ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಬೃಹತ್ ಶಿಲೆಗಳಿಗೆ ವಿಧ್ಯುಕ್ತ ಪೂಜೆ ನೆರವೇರಿಸಿದರು.

ಕಳೆದ ಮೂರು ದಿನಗಳಿಂದ ಈ ಸ್ಥಳದಲ್ಲಿ ವೈದಿಕರಿಂದ ಚತುರ್ವೇದ ಮತ್ತು ರಾಮಾಯಣಗಳ ಸಾಮೂಹಿಕ ಪಾರಾಯಣ ಹಾಗೂ ಯಜ್ಞಗಳನ್ನು ನೆರವೇರಿಸಲಾಗಿದೆ.‌ ಸಮಾರಂಭದಲ್ಲಿ ನೂರಾರು ಸಂತರು ಭಕ್ತರು ಪಾಲ್ಗೊಂಡಿದ್ದರು. ಟ್ರಸ್ಟ್ ವತಿಯಿಂದ ಎಲ್ಲರಿಗೂ ಸಿಹಿ ವಿತರಿಸಲಾಯಿತು.

Advertisement

ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ , ಕಾರ್ಯದರ್ಶಿ ಚಂಪತ್ ರಾಯ್ , ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್ , ಎಲ್ ಆಂಡ್ ಟಿ ಕಂಪೆನಿಯ ಪ್ರಮುಖರು , ನೃಪೇಂದ್ರ ಮಿಶ್ರಾ , ವಿಹಿಂಪದ ಕರ್ನಾಟಕದ ಪ್ರಮುಖರಲ್ಲಿ ಒಬ್ಬರಾದ ಗೋಪಾಲ್ ಜಿ ಇತರರು ಉಪಸ್ಥಿತರಿದ್ದರು ,

ಇದೇ ಸಂದರ್ಭ ಮಂದಿರ ನಿರ್ಮಾಣದ ಆಂದೋಲನ ಮತ್ತು ನ್ಯಾಯಾಲಯದ ತೀರ್ಪು ಮತ್ತು ಆ ಬಳಿಕ ಈ ಹಂತದ ವರೆಗಿನ ಎಲ್ಲ ಬೆಳವಣಿಗೆಗಳ ಸಚಿತ್ರ ವರದಿಯನ್ನೊಳಗೊಂಡ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನಿರ್ವಹಿಸಿದ ಪಾತ್ರವನ್ನೂ ವಿಶೇಷವಾಗಿ ಉಲ್ಲೇಖಿಸಲಾಗಿದೆ.

ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯ: ಯೋಗಿ

ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ. ಈ ದಿನಕ್ಕಾಗಿ ಜನರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ರಾಮಮಂದಿರ ಭಾರತದ ಏಕತೆಯ ಸಂಕೇತವಾಗಲಿದೆ ಎಂದು ಸಿಎಂ ಯೋಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next