Advertisement
ಎನ್ ಎಸ್ ಓ ಗ್ರೂಪ್ ಅಭಿವೃದ್ದಿಪಡಿಸಿದ ಸ್ಪೈವೇರ್ ಅನ್ನು ಮೊಬೈಲ್ ಸೇರಿದಂತೆ ಇತರೆ ಡಿವೈಸ್ ಗಳಲ್ಲಿ ಅಳವಡಿಸಲಾಗುತ್ತದೆ. ಐಓಎಸ್ ಮತ್ತು ಆ್ಯಂಡ್ರಾಯ್ಡ್ ಡಿವೈಸ್ ಗಳಲ್ಲಿ ಇತರ ಕಾರ್ಯನಿರ್ವಹಣೆ ಅಧಿಕವಾಗಿರುತ್ತದೆ. ಪೆಗಾಸಸ್ ಮೂಲಕ ಕರೆಗಳನ್ನು ಕದ್ದಾಲಿಸಬಹುದು, ಪಾಸ್ ವರ್ಡ್ ಗಳನ್ನು ಸಂಗ್ರಹಿಸಬಹುದು. ಎಸ್ ಎಂಎಸ್ ಮಾಹಿತಿ, ಲೊಕೇಶನ್ ಗಳನ್ನು ಪತ್ತೆಹಚ್ಚಬಹುದು. ಇದಲ್ಲದೆ ಮೈಕ್ರೋಫೋನ್, ಕ್ಯಾಮರ ಹಾಗೂ ಆ್ಯಪ್ ಗಳನ್ನು ನಿಯಂತ್ರಿಸುವ ಕೆಲಸವನ್ನು ಕೂಡ ಇದು ಮಾಡುತ್ತದೆ.
Advertisement
ಪೆಗಾಸಸ್ ಎಂಬ ಟೂಲ್ ಬಳಕೆ ಮಾಡಿ ಬೇಹುಗಾರಿಕೆ ಮಾಡಬಹುದು. ಭಾರತದಲ್ಲೇ ಸುಮಾರು 50,000 ಮೊಬೈಲ್ ಗಳಿಗೆ ಪೆಗಾಸಸ್ ಲಿಂಕ್ ಅಗಿದ್ದು ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಇತರ ಗಣ್ಯ ವ್ಯಕ್ತಿಗಳ ಮೊಬೈಲ್ ಗಳ ಮಾಹಿತಿ ಪಡೆಯುತ್ತಿದೆ. ಕದ್ದಾಲಿಕೆಯಲ್ಲಿ ಸುಮಾರು 11 ದೇಶಗಳ ಸರ್ಕಾರಗಳು ಕೂಡ ಭಾಗಿಯಾಗಿದೆ ಎಂಬ ಮಾಹಿತಿಯೂ ಇದೆ. ಭಾರತ ಸರ್ಕಾರ ಕೂಡ ಇದರಲ್ಲಿ ಭಾಗಿಯಾಗಿವೆ ಎನ್ನಲಾಗುತ್ತಿದ್ದು, ಅದರೆ ಯಾವ ರಾಜ್ಯದ ಸರ್ಕಾರ ಎಂದು ಖಚಿತವಾಗಿಲ್ಲ.
ಪೆಗಾಸಸ್ ಕಾರ್ಯನಿರ್ವಹಣೆ:
ಪೆಗಾಸಸ್ ಟೆಕ್ಸ್ಟ್ ಅಥವಾ ಇಮೇಲ್ ಲಿಂಕ್ ಗಳ ಮೂಲಕ ಮತ್ತೊಬ್ಬರ ಡಿವೈಸ್ ಅನ್ನು ಪ್ರವೇಶಿಸುತ್ತದೆ. ಪೆಗಾಸಸ್ ತಂತ್ರಜ್ಞಾನ ಅತ್ಯಾಧುನಿಕವಾಗಿದ್ದು ಕೆಲವೊಮ್ಮೆ ಈ ತೆರೆನಾದ ಅನುಮಾನಸ್ಪದ ಲಿಂಕ್ ಗಳನ್ನು ತೆರೆಯದಿದ್ದರೂ, ಈ ಸ್ಪೈ ವೇರ್ ಇನ್ ಸ್ಟಾಲ್ ಅಗುತ್ತದೆ. ಹಾಗಾಗಿ ಇದನ್ನು ಜೀರೋ ಕ್ಲಿಕ್ ಇನ್ ಸ್ಟಾಲೇಶನ್ ಎಂದು ಕೂಡ ಕರೆಯುತ್ತಾರೆ.
ಇದು ರಹಸ್ಯವಾಗಿ ಮಾಹಿತಿ ಕಲೆಹಾಕುವ ದುರುದ್ದೇಶಪೂರಿತ ಸಾಫ್ಟ್ ವೇರ್ ಅದ್ದರಿಂದ, ಇದು ಬಳಕೆದಾರರನ ಅನುಮತಿ ಪಡೆಯದೆ ಡೇಟಾಗಳನ್ನು ಮೂರನೇಯ ವ್ಯಕ್ತಿಗೆ ಕಳುಹಿಸಿಕೊಡುವುದು. ಇದರಿಂದ ಎಸ್ ಎಂಎಸ್, ಇ-ಮೇಲ್, ಸ್ಕ್ರೀನ್ ಶಾಟ್, ಪಾಸ್ ವರ್ಡ್ ಸೇರಿದಂತೆ ಸಂಪೂರ್ಣ ಮಾಹಿತಿ ಸಂಗ್ರಹಿಸಬಹುದು.
ಪೆಗಾಸಸ್ ಮೂಲಕ ‘ಹೈ ಪ್ರೊಪೈಲ್’ ವ್ಯಕ್ತಿಗಳ ಮೇಲೆ ಬೇಹುಗಾರಿಕೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಅವರ ಖಾಸಗಿತನವನ್ನು ಕಾಪಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಈ ಪೆಗಾಸಸ್ ನಂತಹ ಮಾರಕವನ್ನು ವಿಶ್ವಮಾರುಕಟ್ಟೆಗೆ ಒದಗಿಸುತ್ತಿರುವುದು ಇಸ್ರೇಲ್ ಮತ್ತು ಬ್ರಿಟನ್ ನಂತಹ ಪ್ರಜಾಪ್ರಭುತ್ವ ರಾಷ್ಟ್ರಗಳು.
ಪೆಗಾಸಸ್ ಮೂಲ: ಜಗತ್ತಿನಲ್ಲಿ ಸ್ಪೈವೇರ್ ಗಳನ್ನು ಈ ಹಿಂದೆಯೂ ಬೇಹುಗಾರಿಕೆ ಮಾಡಲು ಬಳಸಲಾಗುತ್ತಿತ್ತು. ಪ್ರಮುಖವಾಗಿ ಶತ್ರುರಾಷ್ಟ್ರಗಳ ಬಲಾಬಲವನ್ನು ತಿಳಿಯಲು ಸರ್ಕಾರಿ ಸಂಸ್ಥೆಗಳು ಇದನ್ನು ಬಳಸುತ್ತಿದ್ದವು. ಎನ್ ಎಸ್ ಓ ಗ್ರೂಪ್ (ಕಾರ್ಪೋರೇಟ್ ಕಂಪೆನಿ) ಈ ತೆರೆನಾದ ಸಾಕಷ್ಟು ಸ್ಪೈವೇರ್ ಗಳನ್ನು ಸೃಷ್ಟಿಸಿ ವಿಶ್ವದ 60ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಮಾರಾಟ ಮಾಡಿದೆ. ಇದನ್ನು ಇಸ್ರೇಲ್ ಸರ್ಕಾರದ ಒಪ್ಪಿಗೆ ಇಲ್ಲದೆ ಯಾರಿಗೂ ಕೊಡುವಂತಿಲ್ಲ. ಹಾಗೂ ಸರ್ಕಾರಕ್ಕೆ, ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಬೇಕು. ಖಾಸಗಿಯವರೆಗೆ ಮಾರಾಟ ಇಲ್ಲ ಎಂಬ ನಿಯಮವಿದೆ.
ಈ ಸಾಫ್ಟ್ ವೇರ್ ದೇಶದ ರಕ್ಷಣೆಗೆ, ಭಯೋತ್ಪಾದಕ ಕೃತ್ಯಗಳ ಕುರಿತು ಮಾಹಿತಿ ಸಂಗ್ರಹಣೆ ಮುಂತಾದ ಉತ್ತಮ ವಿಷಯಗಳಿಗೆ ಬಳಕೆಯಾಗಬೇಕು. ಖಾಸಗಿಯವರಿಗೆ ನೀಡಿದರೆ ದುಷ್ಟ ಮತ್ತು ವೈಯಕ್ತಿಕ ಕೆಲಸಗಳಿಗೆ ಬಳಕೆ ಮಾಡಲಾಗುತ್ತದೆ ಎಂಬುದು ತಿಳಿದಿದ್ದರೂ ಸರ್ಕಾರಗಳೇ ಇದರ ಬಳಕೆಯಲ್ಲಿ ಎಡವಿದೆ. ಇದೇ ಇಂದಿನ ಜಾಗತಿಕ ಚರ್ಚೆಗೆ ಕಾರಣ.
ಕೋಟಿ ಕೋಟಿ ವಹಿವಾಟು: ಇಂದು ಪೆಗಾಸಸ್ ಸ್ಪೈವೇರ್ ಇನ್ ಸ್ಟಾಲ್ ಮಾಡಲು ಹಲವು ದೇಶಗಳು/ವ್ಯಕ್ತಿಗಳು ದಾಂಗುಡಿಯಿಡುತ್ತಿದ್ದಾರೆ. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ವ್ಯಯಮಾಡುತ್ತಿದ್ದಾರೆ. ಪೆಗಾಸಸ್ ಇನ್ ಸ್ಟಾಲ್ ಮಾಡಲು ವಿವಿಧ ಡಿವೈಸ್ ಗಳಿಗೆ ಇಂತಿಷ್ಟೆ ಪ್ರಮಾಣದ ಹಣ ನಿಗದಿಮಾಡಲಾಗಿದೆ. ಕೆಲವೊಮ್ಮೆವ್ಯಕ್ತಿಗಳ ಜನಪ್ರಿಯತೆಯ ಮೇಲೆ ಬೆಲೆ ನಿರ್ಧರಿಸಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.
*ಮಿಥುನ್ ಪಿ.ಜಿ.