Advertisement

ಪೆಡಲ್‌ ಪ್ರಿಯೆ: ನಿತ್ಯವೂ ಕಚೇರಿಗೆ ಸೈಕಲ್‌ ಯಾನ

03:38 PM Nov 17, 2018 | |

ಬೆಂಗಳೂರಿನಲ್ಲಿ ಅನೇಕರಿಗೆ ಸೈಕ್ಲಿಂಗ್‌ ಹವ್ಯಾಸವಿದೆ. ವಾರಾಂತ್ಯಗಳಲ್ಲಿ ಗುಂಪುಗುಂಪಾಗಿ ಸೈಕಲ್‌ ತುಳಿಯುವವರು, ಫಿಟ್‌ನೆಸ್‌ಗಾಗಿ ಸೈಕಲ್‌ ಹೊಡೆಯುವವರು, ಜನಜಾಗೃತಿಗಾಗಿ ಸೈಕಲ್‌ ಜಾಥಾ ಹೊರಡುವವರು ಇದ್ದಾರೆ. ಆದರೆ, ಆಫೀಸಿಗೆ ಹೋಗಲು, ಮಾಲ್‌ ಸುತ್ತಲು, ಮಾರ್ಕೆಟ್‌ಗೆ ಹೋಗಲು ಕಾರು, ಕ್ಯಾಬ್‌, ಬೈಕೇ ಆಗಬೇಕು. ಸೈಕ್ಲಿಂಗ್‌ ಏನಿದ್ದರೂ ಕೇವಲ ವೀಕೆಂಡ್‌ಗಷ್ಟೇ ಸೀಮಿತ. ಆದರೆ, ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯ ಉದ್ಯೋಗಿ ಶಿಲ್ಪಿ ಸಾಹು ಅವರಿಗೆ ಸೈಕಲ್ಲೇ ವಾಹನ. ಮನೆ ಮುಂದೆಯೇ ಆಫೀಸ್‌ ಕ್ಯಾಬ್‌ ಬರುತ್ತದಾದರೂ, ಅವರು ನೆಚ್ಚಿಕೊಂಡಿರುವುದು ಸೈಕಲ್‌ ಅನ್ನೇ. 

Advertisement

ಸಮಯ ಉಳಿಯುತ್ತೆ…
ಕಾರು, ಬೈಕುಗಳಿಗಿಂತ ಸೈಕಲ್‌ ನಿಧಾನ ಅಂತ ಜನ ಭಾವಿಸಿದ್ದಾರೆ. ಆದರೆ, ವಾಸ್ತವ ಹಾಗಿಲ್ಲ ಅಂತಾರೆ ಶಿಲ್ಪಿ. ಅವರು 2011ರಿಂದಲೂ ಪ್ರತಿದಿನ,  ಕೈಕೊಂಡ್ರಹಳ್ಳಿಯಿಂದ, ವೈಟ್‌ಫೀಲ್ಡ್‌ನಲ್ಲಿರುವ ತಮ್ಮ ಆಫೀಸ್‌ಗೆ ಸೈಕಲ್‌ನಲ್ಲೇ ಹೋಗುತ್ತಿದ್ದಾರೆ. ಅಂದರೆ, ದಿನಾ 24 ಕಿಮೀ ಸೈಕಲ್‌ ತುಳಿಯುತ್ತಾರೆ. ಬಸ್‌, ಕಾರು, ಕ್ಯಾಬ್‌ಗಿಂತ ಸೈಕಲ್‌ನಲ್ಲಿ ಬೇಗ ಹೋಗಬಹುದು. ಕ್ಯಾಬ್‌ ಬುಕ್‌ ಮಾಡಿ, ಅದು ಬರುವವರೆಗೆ ಕಾದು, ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡು ಆಫೀಸು ಸೇರುವಷ್ಟರಲ್ಲಿ ಹೈರಾಣಾಗಿರುತ್ತೇವೆ. ಆಟೋದವರು, ಕರೆದಲ್ಲಿಗೆ ಬರುವುದಿಲ್ಲ, ನೀವು ಹೋಗಬೇಕಾದ ಜಾಗ ಬಸ್‌ಸ್ಟಾಪ್‌ನಿಂದ ದೂರ ಇದ್ದರೆ ಬಸ್‌ ಕೂಡ ಅನುಕೂಲಕರವಲ್ಲ. ಇವಕ್ಕೆಲ್ಲಾ ಹೋಲಿಸಿದರೆ ಸೈಕಲ್ಲೇ ಬೆಸ್ಟ್‌ ಅನ್ನುತ್ತಾರೆ ಅವರು. 

ಬಿಸಿಲೇ ಇರಲಿ, ಮಳೆಯೇ ಬರಲಿ…
ಮೊದಮೊದಲು ವಾರದಲ್ಲಿ 2-3 ದಿನ ಮಾತ್ರ ಸೈಕಲ್‌ ಬಳಸುತ್ತಿದ್ದ ಶಿಲ್ಪಿ, ಕ್ರಮೇಣ ವಾರಪೂರ್ತಿ ಸೈಕಲ್‌ನಲ್ಲೇ ಹೋಗಲು ನಿರ್ಧರಿಸಿದರು. ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಟರೆ, 8-50ಕ್ಕೆಲ್ಲಾ ಆಫೀಸ್‌ ತಲುಪುತ್ತಾರೆ. ಸಂಜೆ 5.30ಕ್ಕೆ ಹೊರಟರೆ, 6.30ರ ಒಳಗೇ ಮನೆ. ಮಳೆಯಿದ್ದರೂ, ಬಿಸಿಲೇ ಇದ್ದರೂ ಅವರು ಸೈಕ್ಲಿಂಗ್‌ ಬಿಡುವುದಿಲ್ಲ. ಅವರಷ್ಟೇ ಅಲ್ಲ, ಅವರ ಪತಿ ರಿನಾಝ್ ಮೊಹಮ್ಮದ್‌ ಕೂಡ ಪ್ರತಿದಿನ ಆಫೀಸ್‌ಗೆ ಸೈಕಲ್‌ ಅನ್ನೇ ಬಳಸುತ್ತಾರಂತೆ!

ಕೂಲ್‌ ಕೂಲ್‌ ಹವಾ
ಬೆಂಗಳೂರಿನಲ್ಲಿ ಸೈಕ್ಲಿಸ್ಟ್‌ಗಳಿಗೆ ವರವಾಗಿರುವುದು ಇಲ್ಲಿನ ಹವಾಮಾನ. ಬೆಳಗ್ಗೆ 10 ಗಂಟೆಯಾದರೂ ಕೂಲ್‌ ಹವೆ ಇರುತ್ತದೆ. ಸಂಜೆಯೂ ಅಷ್ಟೆ; ಆರಾಮಾಗಿ ಸೈಕಲ್‌ ತುಳಿಯಬಹುದು. ಮಳೆ ಬಂದಾಗ ಮಾತ್ರ, ರಸ್ತೆ ಗುಂಡಿಗಳಿಂದ ಅಪಾಯವಾಗುತ್ತದೆ ಅನ್ನೋದನ್ನು ಬಿಟ್ಟರೆ, ಬೇರೆ ಎಲ್ಲ ಕಾಲಗಳಲ್ಲೂ ಆರಾಮಾಗಿ ಸೈಕಲ್‌ ಬಳಸಬಹುದು. ಸೈಕ್ಲಿಸ್ಟ್‌ಗೆ ಇರುವ ಇನ್ನೊಂದು ಲಾಭ ಏನು ಗೊತ್ತಾ? ಆತ ಯಾವಾಗ ಬೇಕಾದರೂ ಪಾದಚಾರಿಯಾಗಿ ಬದಲಾಗಬಹುದು. ಟ್ರಾಫಿಕ್‌ ಜಾಸ್ತಿ ಇದ್ದಾಗ, ರಸ್ತೆ ಬ್ಲಾಕ್‌ ಆಗಿದ್ದಾಗ ಸೈಕಲ್‌ನಿಂದು ಇಳಿದು, ರಸ್ತೆ ದಾಟಿ ಹೋಗಬಹುದು. ಆದರೆ ಕಾರು, ಬೈಕ್‌ ಚಾಲಕರಿಗೆ ಹಾಗಾಗದು. ವೇಗದ ವಾಹನಗಳೊಂದಿಗೆ ರಸ್ತೆ ಹಂಚಿಕೊಳ್ಳುವುದರಿಂದ ಹೆಚ್ಚು ಜಾಗ್ರತೆ ಇರಬೇಕಷ್ಟೆ. 

ಬೆಂಗಳೂರೆಷ್ಟು ಬ್ಯೂಟಿಫ‌ುಲ್‌ ಗೊತ್ತಾ?
ಶಿಲ್ಪಿಗೆ, ಇಲ್ಲಿನ ಹವಾಮಾನವಷ್ಟೇ ಅಲ್ಲ. ಈ ನಗರವೂ ಅಷ್ಟೇ ಇಷ್ಟವಂತೆ. ಕದಂಬ ಮರ, ಆಕಾಶ ಮಲ್ಲಿಗೆ, ಬೂರುಗ, ಹಳದಿ ಗುಲ್‌ಮೊಹರ್‌, ಹೊಂಗೆ… ಹೀಗೆ ಯಾವ ಮರ, ಯಾವ ಕಾಲಕ್ಕೆ ಹೂ ಬಿಡುತ್ತೆ ಅಂತ ನನಗೆ ಗೊತ್ತು. ಇಲ್ಲಿ ಅರಳುವ ಪ್ರತಿ ಹೂವಿನ ಘಮವನ್ನೂ ನಾನು ಆಸ್ವಾದಿಸುತ್ತೇನೆ. ಹಾಗೆಯೇ, ಯಾವ ಚರಂಡಿ ಎಷ್ಟು ಗಬ್ಬುನಾತ ಬೀರುತ್ತದೆ ಅಂತಲೂ ಗೊತ್ತು! ಇಂಥ ವೈರುಧ್ಯಗಳೇ ಬೆಂಗಳೂರಿನ ಸೌಂದರ್ಯ. ಎಸಿ ಕಾರಿನಲ್ಲಿ ಕಿಟಕಿ ಏರಿಸಿಕೊಂಡು ಕುಳಿತವರಿಗೆ, ನಮ್ಮ ನಗರದ ಈ ಸೌಂದರ್ಯದ ಪರಿಚಯವಿದೆಯೇ? ಕುಂದನಹಳ್ಳಿ ಕೆರೆ ಹಾದು ಹೋಗುವಾಗ, ನಿಂತು ಅಲ್ಲಿನ ಸೂರ್ಯಾಸ್ತ ನೋಡಿ ಖುಷಿಪಡುವುದು ನನ್ನ ಮೆಚ್ಚಿನ ಹವ್ಯಾಸ. ಅಲ್ಲಿಗೆ ವಲಸೆ ಬರುವ ಹಕ್ಕಿಗಳೂ ಈಗ ನನಗೆ ಪರಿಚಿತ. ಸರ್ಜಾಪುರ, ಔಟರ್‌ ರಿಂಗ್‌ ರೋಡ್‌, ಕುಂದನಹಳ್ಳಿಯ ರಸ್ತೆಗಳಲ್ಲೂ ಪ್ರಕೃತಿ ಸೌಂದರ್ಯ ಸವಿಯಲು ಸೈಕ್ಲಿಂಗ್‌ನಿಂದ ಸಾಧ್ಯವಾಗಿದೆ ಎನ್ನುತ್ತಾರೆ ಶಿಲ್ಪಿ.

Advertisement

ಕಚೇರಿಗೆ ಸ್ಕೈಕ್ಲಿಂಗ್‌! ಏನುಪಯೋಗ?
– ಸಮಯ ಉಳಿಸಬಹುದು
– ಟ್ರಾಫಿಕ್‌ ಜಾಂ ಕಿರಿಕಿರಿ ಇಲ್ಲ
– ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದು 
– ಆರೋಗ್ಯಕ್ಕೂ ಒಳ್ಳೆಯದು

ಸೈಕ್ಲಿಂಗ್‌ ಟಿಪ್ಸ್‌
*ಸಡಿಲವಾದ ಬಟ್ಟೆ ಧರಿಸಬೇಡಿ
*ಮಾಸ್ಕ್, ಹೆಲ್ಮೆಟ್‌ ಧರಿಸಿ
*ಸೈಕ್ಲಿಂಗ್‌ ಬಟ್ಟೆಗಳನ್ನು ಧರಿಸಿದರೆ ಉತ್ತಮ
* ಹೊಂಡ- ಗುಂಡಿ ಇರುವ ರಸ್ತೇಲಿ ಹೋಗಬೇಡಿ
* ಮಳೆ ಬಂದಾಗ ಜಾಗ್ರತೆ ಇರಲಿ

ಏನೇನು ಕೊರತೆಗಳಿವೆ?
* ಸೈಕ್ಲಿಸ್ಟ್‌ಗಳಿಗೆ ಪ್ರತ್ಯೇಕ ರಸ್ತೆ ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.
*ದೊಡ್ಡ ವಾಹನಗಳ ಜೊತೆಗೆ ರಸ್ತೆ ಹಂಚಿಕೊಳ್ಳಬೇಕು.
* ಸೈಕ್ಲಿಸ್ಟ್‌ಗಳನ್ನು ಕೇವಲವಾಗಿ ನೋಡುವ ಕಾರು, ಬೈಕಿನವರ ವರ್ತನೆ.  
* ರಸ್ತೆಯ ಬದಿಗಳೂ ಕಿಕ್ಕಿರಿದುಕೊಂಡಿರುವುದು.

ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next