Advertisement

ಪೆಸಿಫಿಕ್‌ ದ್ವೀಪಗಳಲ್ಲಿ ಇಲ್ಲ ಕೋವಿಡ್‌ ಕಾಟ

05:01 PM May 21, 2020 | sudhir |

ಮಣಿಪಾಲ : ಕೋವಿಡ್‌ ವೈರಸ್‌ ಜಗತ್ತಿನ ಪ್ರತಿ ಮೂಲೆ ಗೂ ಕ್ಷಿಪ್ರವಾಗಿ ಹರಡಿದೆ. ಆದರೆ ಕೆಲವು ದೇಶಗಳು ಮಾತ್ರ ಆಶ್ಚರ್ಯಕರ ಎಂಬಂತೆ ಕೋವಿಡ್‌ ಕಾಟದಿಂದ ಮುಕ್ತವಾಗಿವೆ. ಫೆಸಿಫಿಕ್‌ ಸಾಗರದಲ್ಲಿರುವ ಕೆಲವು ಪುಟ್ಟ ದ್ವೀಪ ದೇಶಗಳಿಗೆ ಕಾಲಿಡಲು ಕೋವಿಡ್‌ಗೆ ಇನ್ನೂ ಸಾಧ್ಯವಾಗಿಲ್ಲ.

Advertisement

ಹಿಂದಿನ ಕೆಲವು ವೈರಸ್‌ ಹಾವಳಿಯಿಂದ ಪಾಠ ಕಲಿತಿರುವ ಈ ದ್ವೀಪ ರಾಷ್ಟ್ರಗಳು ಜಗತ್ತಿನ ಇತರೆಡೆ ಕೋವಿಡ್‌ ಸೋಂಕು ಹರಡುವುದು ಪ್ರಾರಂಭವಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಕಾರಣ ಬಚಾವಾಗಿವೆ.

ಈ ದ್ವೀಪ ರಾಷ್ಟ್ರಗಳಿಗೆ ಅವುಗಳ ಭೌಗೋಳಿಕ ಸ್ಥಾನವೇ ಕೋವಿಡ್‌ ವಿರುದ್ಧ ರಕ್ಷಣಾ ಕವಚವಾಗಿ ಕಾರ್ಯವೆಸಗಿವೆ. ಪಾಲವು, ಟುವಲು, ಮಾರ್ಶಲ್‌ ಐಲ್ಯಾಂಡ್ಸ್‌, ಫೆಡರೇಟೆಡ್‌ ಸ್ಟೇಟ್ಸ್‌ ಆಫ್ ಮೈಕ್ರೋನೇಷ್ಯಾ, ಕಿರಿಬಟಿ, ನೌರು, ಸೋಲೊಮನ್‌ ಐಲ್ಯಾಂಡ್ಸ್‌, ಟೋಂಗ, ವನವುಟು ಮುಂತಾದ ದ್ವೀಪಗಳಿಗೆ ಕೋವಿಡ್‌ ಪ್ರವೇಶಿಸಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವುಗಳ ನಡುವಿನ ಭೌಗೋಳಿಕ ಅಂತರ. ಮುಖ್ಯ ಭೂಖಂಡಗಳಿಂದ ದೂರವಾಗಿ ಸಾಗರದ ಮಧ್ಯೆ ತಮ್ಮಷ್ಟಕ್ಕೆ ತಾವಿರುವ ಈ ದ್ವೀಪ ದೇಶಗಳಿಗೆ ಒಂದೋ ವಾಯುಮಾರ್ಗವಾಗಿ ಅಥವಾ ಜಲಮಾರ್ಗವಾಗಿ ಮಾತ್ರ ತಲಪಲು ಸಾಧ್ಯ. ವೈರಸ್‌ ಹಾವಳಿ ಶುರುವಾದ ಕೂಡಲೇ ಬಹುತೇಕ ದ್ವೀಪ ದೇಶಗಳು ಈ ಎರಡೂ ಮಾರ್ಗಗಳನ್ನು ಮುಚ್ಚಿದ ಕಾರಣ ಸುರಕ್ಷಿತವಾಗಿ ಉಳಿದಿವೆ ಎನ್ನುತ್ತಾರೆ ಪೆಸಿಫಿಕ್‌ ಸಾಗರದ ದ್ವೀಪಗಳಿಗೆ ಯುನಿಸೆಫ್ ನ ಪ್ರತಿನಿಧಿಯಾಗಿರುವ ಶೆಲ್ಡನ್‌ ಯೆಟ್‌.

ದೊಡ್ಡ ನಗರಗಳಲ್ಲಿ ಏನಾಗುತ್ತಿದೆ ಎಂಬುದನ್ನು ಈ ದ್ವೀಪಗಳು ಟಿವಿ ವಾಹಿನಿಯಲ್ಲಿ ನೋಡುತ್ತಿದ್ದವು. ಜತೆಗೆ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಿದ ಹಿಂದಿನ ಅನುಭವವೂ ಇಲ್ಲಿನ ಆಡಳಿತಗಳಿಗೆ ಇತ್ತು. ಹೀಗಾಗಿ ಕ್ಷಿಪ್ರ ನಿರ್ಧಾರಗಳನ್ನು ಕೈಗೊಂಡು ಮೊದಲು ಎರಡೂ ಸಾರಿಗೆ ಮಾಧ್ಯಮವನ್ನು ಮುಚ್ಚಿದವು. ಹೀಗಾಗಿ ವೈರಸ್‌ಗೆ ದ್ವೀಪಗಳಿಗೆ ತಲಪಲು ಸಾಧ್ಯವಾಗಿಲ್ಲ ಎಂದು ವಿವರಿಸುತ್ತಾರೆ ಯೆಟ್‌.

ಎಲ್ಲ ದ್ವೀಪಗಳಿಗೆ ವೈರಸನ್ನು ದೂರವಿರಿಸಲು ಸಾಧ್ಯವಾಗಿಲ್ಲ. ಫಿಜಿ ಐಲ್ಯಾಂಡ್‌, ಗ್ವಾಮ್‌ ದ್ವೀಪ ಸೇರಿ ಕೆಲವು ದ್ವೀಪಗಳಲ್ಲಿ ಕೋವಿಡ್‌ ಹಾಟ್‌ಸ್ಪಾಟ್‌ಗಳಿವೆ. ಈ ದ್ವೀಪಗಳಿಗೆ ವೈರಸ್‌ ಬಂದಿರುವುದು ಹೊರದೇಶಗಳಿಂದ. ಪಪುವಾ ನ್ಯೂಗಿನಿಯದಂಥ ಕೆಲವು ದ್ವೀಪ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಿದ ಧಾರಾಳ ಅನುಭವ ಇದೆ. ಪಪುವಾ ನ್ಯೂಗಿನಿಯಾ ಕಳೆದ ವರ್ಷವಷ್ಟೇ ಮಲೇರಿಯದ ವಿರುದ್ಧ ಭಾರೀ ಸೆಣಸಾಟ ನಡೆಸಿತ್ತು. ಸಮೋವ ದ್ವೀಪ ದಡಾರದ ವಿರುದ್ಧ ಯಶಸ್ವಿ ಹೋರಾಟ ನಡೆಸಿದ ಅನುಭವ ಹೊಂದಿದೆ. ಸಾಮಾಜಿಕ ಅಂತರ ಪಾಲನೆ, ಕ್ವಾರಂಟೈನ್‌ ಇವೆಲ್ಲ ಈ ದ್ವೀಪ ವಾಸಿಗಳಿಗೆ ಹೊಸತಲ್ಲ.

Advertisement

ಸಮೋವ ಜ.20ರಂದೇ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಫಿಜಿ ಮತ್ತು ಅಮೆರಿಕದ ಪ್ರವಾಸಿಗಳಿಗೆ ನಿರ್ಬಂಧ ಹೇರಿತ್ತು. ಸಮೋವ ಸರಕಾರ ಸೋಷಿಯಲ್‌ ಮೀಡಿಯಾ ಮೂಲಕ ಜನರಲ್ಲಿ ಆರಂಭದಲ್ಲೇ ಜಾಗೃತಿ ಮೂಡಿಸಿತು. ಇದಕ್ಕಾಗಿ ಸಮುದಾಯ ಕೇಂದ್ರಗಳು, ಚರ್ಚ್‌ ಸೇರಿದಂತೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲಾಯಿತು. ಪರಿಣಾಮವಾಗಿ ಈ ದ್ವೀಪಕ್ಕೆ ವೈರಸ್‌ ಪ್ರವೇಶಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next