Advertisement

ಅಡುಗೆಮನೆಯಲಿ ಅವರೆ ಮೇಳ

12:30 AM Jan 16, 2019 | |

ಇದು ಅವರೆಯ ಸೀಸನ್‌. ಬಾಯಿಯಲ್ಲಿ ನೀರೂರಿಸುವ ಅವರೆ ಖಾದ್ಯಗಳ ರೆಸಿಪಿಗಳು ಇಲ್ಲಿವೆ. 

Advertisement

1. ಅವರೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿ:
ಎಳೆ ಕಾಯಿ-3 ಲೋಟ, ಈರುಳ್ಳಿ-2, ಟೊಮೇಟೊ-2, ಅಚ್ಚ ಖಾರದ ಪುಡಿ-2 ಚಮಚ, ಹಸಿಮೆಣಸು, ಎಣ್ಣೆ ಸ್ವಲ್ಪ, ಸಾಸಿವೆ- 1 ಚಮಚ, ಜೀರಿಗೆ-1/2 ಚಮಚ, ಎಳ್ಳು-1 ಚಮಚ, ಅರಿಶಿನ ಪುಡಿ-1 ಚಮಚ, ಬೆಳ್ಳುಳ್ಳಿ-2 ಎಸಳು, ಗರಂ ಮಸಾಲೆ-1 ಚಮಚ, ಸಾಂಬಾರ್‌ ಪುಡಿ-1 ಚಮಚ, ಕೊತ್ತಂಬರಿ ಸೊಪ್ಪು-1/2 ಕಟ್ಟು, ಚೂರು ಸಕ್ಕರೆ (ಬೇಕಿದ್ದರೆ)

ಮಾಡುವ ವಿಧಾನ: ಅವರೆಕಾಳನ್ನು ಚೆನ್ನಾಗಿ ತೊಳೆದು ಬೇಯಿಸಿ. ಒಗ್ಗರಣೆಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹಸಿಮೆಣಸು, ಎಳ್ಳು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಈರುಳ್ಳಿಯನ್ನು ಸಹ ಕೆಂಪಗೆ ಹುರಿಯಬೇಕು. ನಂತರ ಟೊಮೇಟೊ ಹಾಕಿ, ಬೇಯಿಸಿಟ್ಟ ಅವರೆ ಕಾಳು ಹಾಕಿ ಬೆರೆಸಿರಿ. ಅಚ್ಚಖಾರದ ಪುಡಿ, ಗರಂ ಮಸಾಲೆ, ಅರಿಶಿನಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊನೆಗೆ ಒಂದು ಚಮಚ ಸಕ್ಕರೆ ಬೆರೆಸಿ. ನಂತರ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. 

2.ಅವರೆಕಾಳಿನ ಕೂರ್ಮ
ಬೇಕಾಗುವ ಸಾಮಗ್ರಿ: ಅವರೆ ಕಾಳು -3 ಕಪ್‌, ಆಲೂಗಡ್ಡೆ-2, ಟೊಮೇಟೊ-2, ಈರುಳ್ಳಿ-2, ಹುಣಸೆ ಹಣ್ಣಿನ ರಸ- 2 ಚಮಚ, ಕೊತ್ತಂಬರಿ ಸೊಪ್ಪು- ಅರ್ಧ ಕಟ್ಟು, ಸಾಸಿವೆ-1/2 ಚಮಚ, ಅರಿಶಿನ ಪುಡಿ-1 ಚಮಚ, ಅಚ್ಚಖಾರದ ಪುಡಿ-2 ಚಮಚ, ಎಣ್ಣೆ-ಒಗ್ಗರಣೆಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಚಟಪಟಿಸಿದ ನಂತರ, ಹೆಚ್ಚಿದ ಈರುಳ್ಳಿ ಹಾಗೂ ಟೊಮೇಟೊ ಹಾಕಿ ಹುರಿಯಿರಿ. ಬೇಯಿಸಿದ ಆಲೂಗಡ್ಡೆಯನ್ನು ತುಂಡು ಮಾಡಿ ಸರಿಯಾಗಿ ಕಲಸಿ. ಅವರೆಕಾಳನ್ನು ಬೇಯಿಸಿ, ಇವೆಲ್ಲವನ್ನು ಸೇರಿಸಿ ಉಪ್ಪು ಹಾಕಿ, ಕೈ ಆಡಿಸುತ್ತಲೇ ಕೊತ್ತಂಬರಿ ಸೊಪ್ಪು ಹಾಕಿ. ಒಂದು ಕುದಿ ಬಂದ ನಂತರ, ಬೇರೆ ಪಾತ್ರೆಗೆ ವರ್ಗಾಯಿಸಿ. ಇದು ರೊಟ್ಟಿ ಜೊತೆಗೆ ತಿನ್ನಲು ರುಚಿಕರವಾಗಿರುತ್ತದೆ. 

Advertisement

3. ಅವರೆಕಾಳು ಉಸಲಿ
ಬೇಕಾಗುವ ಸಾಮಗ್ರಿ:
ಅವರೆಕಾಳು-3 ಕಪ್‌, ಹಸಿಮೆಣಸು-4, ತೆಂಗಿನ ತುರಿ-1/2 ಕಪ್‌, ಲಿಂಬೆ ಹಣ್ಣು-1, ಅರಿಶಿನ-1/2 ಚಮಚ, ಕೊತ್ತಂಬರಿ ಸೊಪ್ಪು-1/2 ಕಟ್ಟು, ಜೀರಿಗೆ- 1 ಚಮಚ, ಮೆಂತ್ಯೆ- 1ಚಮಚ, ಚಕ್ಕೆ ಪುಡಿ-1 ಚಮಚ, ಈರುಳ್ಳಿ-2, ಎಣ್ಣೆ-ಒಗ್ಗರಣೆಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ. ನಂತರ ಈರುಳ್ಳಿ ಹಾಕಿ, ಕೆಂಪಗೆ ಹುರಿಯಿರಿ. ತೆಂಗಿನ ತುರಿ, ಹಸಿಮೆಣಸು ಹಾಕಿ ರುಬ್ಬಿ, ಆ ಮಿಶ್ರಣಕ್ಕೆ ಅವರೆಕಾಳನ್ನು ಸೇರಿಸಿ, ಬಾಣಲೆಯಲ್ಲಿ ಸ್ವಲ್ಪ ಹೊತ್ತು ಬಾಡಿಸಿ. ಜೀರಿಗೆ, ಮೆಂತ್ಯೆ, ಚಕ್ಕೆ ಪುಡಿ ಹಾಕಿ ಬೆರೆಸಿ. ನಂತರ ಅರಿಶಿನ ಪುಡಿ, ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದರೆ, ಸ್ವಾದಿಷ್ಟಕರ ಉಸಲಿ ರೆಡಿ.

4. ಅವರೆಕಾಳಿನ ಇಡ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು-1 ಕಪ್‌, ಉದ್ದಿನ ಬೇಳೆ-1 ಕಪ್‌, ಅಕ್ಕಿ- 2 ಕಪ್‌, ಮೊಸರು-1/2 ಕಪ್‌, ಉಪ್ಪು ರುಚಿಗೆ  ತಕ್ಕಷ್ಟು.

ಮಾಡುವ ವಿಧಾನ: ನೆನಸಿದ ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ರುಬ್ಬಿ, 8 ಗಂಟೆ ಕಾಲ ಇಡಿ. ಅವರೆಕಾಳನ್ನು ಬೇಯಿಸಿಕೊಳ್ಳಿ. ಹಿಟ್ಟನ್ನು, ಇಡ್ಲಿ ಪಾತ್ರೆಗೆ ಸುರಿಯುವಾಗ ಬೇಯಿಸಿದ ಅವರೆಕಾಳು ಸೇರಿಸಿ, ಹಬೆಯಲ್ಲಿ ಬೇಯಿಸಿ. ಇಪ್ಪತ್ತು ನಿಮಿಷದ ನಂತರ  ಗಮಗಮ ಅವರೆಕಾಳು ಇಡ್ಲಿ ತಯಾರು.

5. ಮಸಾಲೆ ಇಡ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್‌, ನೆನೆಸಿದ ಕಡಲೆಬೇಳೆ-2 ಕಪ್‌, ಮೊಸರು- ಸ್ವಲ್ಪ, ತೆಂಗಿತುರಿ-1/2 ಕಪ್‌, ಕೊತ್ತಂಬರಿ ಸೊಪ್ಪು, ಶುಂಠಿ- 1 ತುಣುಕು, ಒಗ್ಗರಣೆಗೆ ಎಣ್ಣೆ,  ಸಾಸಿವೆ, ಜೀರಿಗೆ ಹಾಗೂ ಅಚ್ಚಖಾರದ ಪುಡಿ-ತಲಾ 1/2 ಚಮಚ, ಒಣಮೆಣಸು-6, ಹಸಿಮೆಣಸಿನಕಾಯಿ-2, ಕರಿಬೇವು-10. 

ಮಾಡುವ ವಿಧಾನ: ಹಿಂದಿನ ರಾತ್ರಿ ಕಡಲೆಬೇಳೆ ನೆನೆಸಿ ರುಬ್ಬಿಕೊಂಡು, ಅದಕ್ಕೆ ಮೊಸರು ಸೇರಿಸಿ ಇಡಿ. ಮಾರನೆಯ ದಿನ, ಶುಂಠಿ ಹಾಗೂ ಹಸಿಮೆಣಸನ್ನು ತರಿತರಿಯಾಗಿ ರುಬ್ಬಿ. ನಂತರ ಅವರೆಕಾಳು ಸೇರಿಸಿ, ಇಡ್ಲಿ ಹಿಟ್ಟನ್ನು ಕುಕ್ಕರ್‌ ಪಾತ್ರೆಯಲ್ಲಿ ಹಾಕಿ, ಸಾಸಿವೆ ಒಗ್ಗರಣೆ ಹಾಕಿ. ಇಪ್ಪತ್ತು ನಿಮಿಷ ಹಬೆಯಲ್ಲಿ ಬೇಯಿಸಿದರೆ ಅವರೆ ಕಾಳು ಇಡ್ಲಿ ರೆಡಿ.

ಹೀರಾ ರಮಾನಂದ್‌, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next