ಲಿಂಗಸುಗೂರು: ದೆಹಲಿ ಮೂಲದ ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸಿಎಲ್) ಕಂಪನಿಯೊಂದು ಹೆಚ್ಚಿನ ಬಡ್ಡಿ ದರದ ಆಸೆ ತೋರಿಸಿ ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿ ಮೂಲದ ಪಿಎಸಿಎಲ್ ಕಂಪನಿ ಬಾಗಲಕೋಟೆಯಲ್ಲಿ ಶಾಖೆ ತೆರೆದು ಸ್ಥಳೀಯವಾಗಿ ಏಜೆಂಟ್‌ರ ಮೂಲಕ ಲಿಂಗಸುಗೂರು ತಾಲೂಕಿನ ಕಳ್ಳಿಲಿಂಗಸುಗೂರು ಗ್ರಾಮದ ಹಲವರಿಗೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಹಣ ಕಟ್ಟಿಸಿಕೊಂಡಿದೆ. ಗ್ರಾಮದ ಹಲವರು 2010ರಿಂದ 2016ರವರೆಗೆ ತಿಂಗಳು, ಆರು ತಿಂಗಳು, ವರ್ಷದ ಕಂತಿನಂತೆ ಹಣ ಕಟ್ಟುತ್ತ ಬಂದಿದ್ದಾರೆ. ಕೆಲವರು 2500 ರಿಂದ 20 ಸಾವಿರಕ್ಕೂ ಅ ಧಿಕ ಹಣವನ್ನು ಕಂತುಗಳ ಮೂಲಕ ಕಟ್ಟಿದ್ದಾರೆ. ಗ್ರಾಮದ 30ಕ್ಕೂ ಹೆಚ್ಚು ಜನ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲೆಂದು 2010ರಿಂದ ಕಷ್ಟಪಟ್ಟು ದುಡಿದ ಹಣವನ್ನು ಕಟ್ಟಿದ್ದಾರೆ. ಅದು ಈಗ ಲಕ್ಷಾಂತರ ರೂ. ಆಗಿದೆ.
2016ರಲ್ಲಿ ಕಂಪನಿ ಹಣ ವಾಪಸ್ ನೀಡಬೇಕಾಗಿತ್ತು. ಆದರೆ ಹಣ ನೀಡುತ್ತಿಲ್ಲ. ಸ್ಥಳೀಯ ಏಜೆಂಟರನ್ನು ಸಂಪರ್ಕಿಸಿದರೆ ತಮಗೆ ಸಂಬಂಧವಿಲ್ಲವೆಂದು ಕೈ ಚೆಲ್ಲುತ್ತಿದ್ದಾರೆ. ಬಾಗಲಕೋಟೆ ಶಾಖೆಗೆ ತೆರಳಿ ವಿಚಾರಿಸಿದರೆ ಗ್ರಾಹಕರಿಗೆ ನೀಡಿದ ಹಣ ತುಂಬಿದ ರಸೀದಿಯಲ್ಲಿರುವ ದೆಹಲಿ ಮೂಲದ ವಿಳಾಸಕ್ಕೆ ಸಂಪರ್ಕಿಸಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಹಣ ತುಂಬಿದವರು ಕೈಕೈ ಹೊಸಕಿಕೊಳ್ಳುವಂತಾಗಿದೆ.
ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂಬ ಆಸೆಯಿಂದ ಪ್ರತಿ ಆರು ತಿಂಗಳೊಮ್ಮೆ ಹಣ ಕಟ್ಟಿದ್ದೇನೆ. ಆದರೆ ಹಣ ನೀಡದೇ ಕಂಪನಿ ಹಾಗೂ ಏಜೆಂಟರು ಸತಾಯಿಸುತ್ತಿದ್ದಾರೆ. ನಾವೇನು ಮಾಡಬೇಕು ಎಂದು ತಿಳಿಯದಾಗಿದೆ.
– ಬಸಮ್ಮ ನಾಗನಗೌಡ, ವಂಚನೆಗೊಳಗಾದ ಮಹಿಳೆ
ಪಿಎಸಿಎಲ್ ಸಂಸ್ಥೆ ವಂಚನೆ ಮಾಡಿರುವ ಬಗ್ಗೆ ಕಳ್ಳಿಲಿಂಗಸುಗೂರು ಗ್ರಾಮದ ಯಾರೊಬ್ಬರೂ ದೂರು ನೀಡಿಲ್ಲ. ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳುವೆ.
– ದಾದಾವಲಿ, ಪಿಎಸ್‌ಐ, ಲಿಂಗಸುಗೂರು