Advertisement

ಅಹಿತಕರ ಸನ್ನಿವೇಶವಿಲ್ಲದೆ ಸಂಜೆಯ ತನಕ ಶಾಂತಿಯುತ ಮತದಾನ

11:22 AM Sep 01, 2018 | Team Udayavani |

ಪುತ್ತೂರು : ನಗರ ಸ್ಥಳೀಯಾಡಳಿತ ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ 31 ವಾರ್ಡ್‌ಗಳ 41 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 5 ಗಂಟೆಯ ತನಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಿದರು.

Advertisement

ಬೆಳಗ್ಗೆ ಬಿರುಸಿನ ಮತದಾನವಾಗಿ ಅನಂತರ ವೇಗ ಕಡಿಮೆಯಾದರೂ ಸಂಜೆಯ ಹೊತ್ತಿಗೆ ಮತ್ತೆ ಬಿರುಸಿನ ಮತದಾನ ನಡೆಯಿತು. ಬೆಳಗ್ಗೆ 9 ಗಂಟೆಗೆ 14.98 ಶೇ., 11 ಗಂಟೆಗೆ 38 ಶೇ., ಮಧ್ಯಾಹ್ನ 1 ಗಂಟೆಗೆ 45.02 ಶೇ. ಮತದಾನವಾದರೆ, 5 ಗಂಟೆಗೆ 68.69 ಶೇ. ಮತಚಲಾವಣೆಯಾಗಿದೆ. ಒಟ್ಟು 39,745 ಮತದಾರ ರಲ್ಲಿ 27,299 ಮಂದಿ ಮತಚ ಲಾಯಿಸಿದ್ದಾರೆ. ಅಪರಾಹ್ನದ ಬಳಿಕ ಮತದಾನದ ಪ್ರಕ್ರಿಯೆ ಒಂದಷ್ಟು ಬಿರುಸು ಪಡೆದುಕೊಂಡಿತು.

ಮಚ್ಚಿಮಲೆ, ಹಾರಾಡಿ, ಸಂಪ್ಯ ಶಾಲಾ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತ ದಾನ ಪ್ರಕ್ರಿಯೆ ನಡೆಯಿತು. ಸಂತ ಫಿಲೋಮಿನಾ ಮತದಾನ ಕೇಂದ್ರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಮತದಾರರಿಲ್ಲದೆ ಬಿಕೋ ಎನ್ನುತ್ತಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಈ ಮತದಾನ ಕೇಂದ್ರದಲ್ಲಿ ಕನಿಷ್ಠ ಮತ ಚಲಾವಣೆಯಾಗಿತ್ತು. ಸಾಲ್ಮರ ಶಾಲೆಯ ಮತದಾನ ಕೇಂದ್ರದಲ್ಲೂ ನಿಧಾನ ಗತಿಯ ಮತದಾನ ನಡೆಯಿತು. ಪಟ್ನೂರು ವ್ಯಾಪ್ತಿಯ ವಿವೇಕಾನಂದ ಪಾಲಿಟೆಕ್ನಿಕ್‌ ಮತದಾನ ಕೇಂದ್ರದಲ್ಲಿ ಮಧ್ಯಾಹ್ನವೇ ಸುಮಾರು 70 ಶೇ. ಮತದಾನವಾಗುವ ಮೂಲಕ ಬಿರುಸಿನ ಮತಚಲಾವಣೆಯಲ್ಲಿ ಮತದಾರರು ಭಾಗಿಯಾದರು.

ಪರ್ಲಡ್ಕದಲ್ಲಿ ಗೊಂದಲ: ದೂರು
ನಗರಸಭೆಯ 19ನೇ ವಾರ್ಡ್‌ ಪುತ್ತೂರು ಕಸಬಾ -10ರಲ್ಲಿ ಬೆಳಗ್ಗೆ ಪ್ರಾಯೋಗಿಕ ಮತ ಚಲಾವಣೆಯ ಹಂತದಲ್ಲೇ ದೋಷ ಪೂರಿತ ಮತಚಲಾವಣೆಯಾಗಿ ಒಂದಷ್ಟು ಗೊಂದಲಕ್ಕೆ ಕಾರಣವಾಯಿತು. ಮತ ದಾನ ಆರಂಭಕ್ಕೆ ಮೊದಲು ಪರೀಕ್ಷಾ ಮತ ಚಲಾವಣೆಯ ಸಂದರ್ಭ ಪ್ರಥಮ ಹಂತದಲ್ಲಿ ಬಿಜೆಪಿ ಏಜೆಂಟ್‌ ಮೂಲಕ 16, ಕಾಂಗ್ರೆಸ್‌ ಏಜೆಂಟ್‌ ಮೂಲಕ 16 ಹಾಗೂ ಅಧಿಕಾರಿಯ ಮೂಲಕ ನೋಟಾ 18 ಸೇರಿ ಒಟ್ಟು 50 ಮತ ಚಲಾವಣೆ ನಡೆಸಲಾಯಿತು. ಚಲಾವಣೆಯಾದ ಮತಗಳನ್ನು ಪರಿಶೀಲಿಸಿದ ಸಂದರ್ಭ ರಿಸಲ್ಟ್ನಲ್ಲಿ ಕಾಂಗ್ರೆಸ್‌ಗೆ 12, ಬಿಜೆಪಿಗೆ 17, ನೋಟಾಕ್ಕೆ 21 ಮತಚಲಾವಣೆಯಾಗಿರುವುದನ್ನು ತೋರಿಸಿತ್ತು.

ರಸ್ತೆಗಳು ಬಿಕೋ…
ಚುನಾವಣೆಯ ಹಿನ್ನೆಲೆಯಲ್ಲಿ ನಗರಸಭಾ ಚುನಾ ವಣೆ ನಡೆಯುವ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆ – ಕಾಲೇಜು, ಸರಕಾರಿ ಕಚೇರಿಗಳಿಗೆ ರಜೆ ನೀಡಲಾಗಿತ್ತು. ರಜೆ ಘೋಷಣೆಯಾಗಿದ್ದರೂ ಕೆಲವೊಂದು ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸಿದವು. ಚುನಾವಣೆಯ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ವಾಹನಗಳು, ಜನರ ಓಡಾಟ ಕಡಿಮೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next