Advertisement

ಅಪ್ಪು ಅಂತಿಮಯಾತ್ರೆ ಶಾಂತಿಯುತ : ಗೃಹ ಸಚಿವರ ಧನ್ಯವಾದ

10:31 AM Oct 31, 2021 | Vishnudas Patil |

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ, ಯಾತ್ರೆ ಮತ್ತು ಅಂತ್ಯಕ್ರಿಯೆಯ ವೇಳೆ ಶಾಂತಿ ಕಾಪಾಡಿದ ಸಾರ್ವಜನಿಕರು ಮತ್ತು ಶಾಂತಿ ಕಾಪಾಡಲು ಸಹಕರಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾನುವಾರ ಧನ್ಯವಾದಗಳನ್ನು ತಿಳಿಸಿದ್ದಾರೆ.

Advertisement

ಪತ್ರಿಕಾ ಪ್ರಕಟಣೆ ನೀಡಿರುವ ಸಚಿವ ಆರಗ ಜ್ಞಾನೇಂದ್ರ, ”ನಮ್ಮೆಲ್ಲರ ನೆಚ್ಚಿನ ನಟರೂ, ಕನ್ನಡ ಚಿತ್ರರಂಗದ ಮುಕುಟ ಮಣಿಯೂ ಆಗಿದ್ದ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು, ಅತ್ಯಂತ ಶಾಂತಿಯುತವಾಗಿ, ಸಕಲ ಸರಕಾರಿ ಗೌರವಳೊಂದಿಗೆ ನೆರವೇರಿದೆ.ನೆಚ್ಚಿನ ನಟನ ಅಕಾಲಿಕ ನಿಧನದ ದುಃಖದ ಸಂದರ್ಭದಲ್ಲಿ, ಸಾರ್ವಜನಿಕರು, ಅತ್ಯಂತ, ಶಾಂತಿ ಹಾಗೂ ತಾಳ್ಮೆಯನ್ನು, ಪ್ರದರ್ಶಿಸಿ ಅಗಲಿದ ಚೈತನ್ಯಕ್ಕೆ ಲಕ್ಷಾಂತರ ಜನರು ಗೌರವ ಸಲ್ಲಿಸಿದ್ದಾರೆ. ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟ ಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ನಿಭಾಯಿಸಿದ, ನಮ್ಮ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಬರೆದಿದ್ದಾರೆ.

‘ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರದ ವೇಳೆ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ, ಭದ್ರತೆಗಾಗಿ ಬೆಂಗಳೂರು ನಗರದಲ್ಲಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ 1,500 ಪೊಲೀಸರನ್ನು ಬೇರೆ ಜಿಲ್ಲೆಗಳಿಂದ ಕರೆಸಿ ನಿಯೋಜಿಸಲಾಗಿತ್ತು’ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಅಭಿಮಾನಿಗಳ ಸಾಗರ

ಅಪ್ಪು ಅಂತಿಮ ದರ್ಶನಕ್ಕೆ ಲಕ್ಷಾಂತರ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದಿದ್ದರು. ಅಭಿಮಾನಿಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿತ್ತು. ಪೊಲೀಸರು ಸರ್ವ ಸಿದ್ಧತೆಗಳೊಂದಿಗೆ ಅಚ್ಚುಕಟ್ಟಾಗಿ ಬಂದೋಬಸ್ತ್ ನಡೆಸಿ ಅಭಿಮಾನಿಗಳಿಗೆ, ಗಣ್ಯಾತಿಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Advertisement

ಶಿವರಾಜ್ ಕುಮಾರ್ ಧನ್ಯವಾದ

ಶಾಂತಿಯುತ ಅಂತಿಮ ಯಾತ್ರೆಗೆ ಸಹಕಾರ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ಎಲ್ಲರಿಗೂ ಶಿವರಾಜ್ ಕುಮಾರ್ ಅವರು ಧನ್ಯವಾದ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next