Advertisement

ನೆಮ್ಮದಿ ಬದುಕಿಗೆ ಮಾನವ ಹಕ್ಕು ಪಾಲನೆ ಅಗತ್ಯ

05:21 PM Dec 21, 2018 | |

ಚಿತ್ರದುರ್ಗ: ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಅಲ್ಲದೆ ಮತ್ತೂಬ್ಬರ ಹಕ್ಕುಗಳನ್ನು ಗೌರವಿಸುವಂತ ಕೆಲಸವೂ ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಕರೆ ನೀಡಿದರು.

Advertisement

ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಭಾರತೀಯ ಮಾನವ ಹಕ್ಕುಗಳ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಮಾನವ ಹಕ್ಕುಗಳ ಹಾಗೂ ಮೂಲ ಕಾನೂನುಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಕ್ಕುಗಳನ್ನು ಹೇಗೆ ಕೇಳುತ್ತೇವೆಯೋ ಅದೇ ರೀತಿ ಮತ್ತೂಬ್ಬರ ಹಕ್ಕುಗಳನ್ನು ಗೌರವಿಸುವ ಗುಣವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಶಾಲಾ- ಕಾಲೇಜುಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಸಂಬಂಧಿಸಿದವರು ಎಚ್ಚರ ವಹಿಸಬೇಕು ಎಂದರು.
 
ಹಿಂದಿನ ಕಾಲದಲ್ಲಿ ಮಾನವ ಕಾಡಿನಲ್ಲಿ ವಾಸ ಮಾಡಿಕೊಂಡು ಹಸಿ ಮಾಂಸ ತಿನ್ನುತ್ತ ಸೊಪ್ಪನ್ನು ಮೈಗೆ ಸುತ್ತಿಕೊಂಡು ಜೀವಿಸುತ್ತಿದ್ದ. ಕ್ರಮೇಣ ನಾಗರಿಕನಾಗಿ ವಾಸಿಸಲು ಆರಂಭಿಸಿದಾಗಿನಿಂದ ಹಕ್ಕುಗಳನ್ನು ಕೇಳಲು ಆರಂಭಿಸಿದ. ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆ. ಹುಟ್ಟಿದ ಪ್ರತಿಯೊಬ್ಬರಿಗೂ ಬದುಕುವ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ ಎಂದು ತಿಳಿಸಿದರು.

ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುವವರ ಮೇಲೆ ಕೆಲವೊಮ್ಮೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಜಲಫಿರಂಗಿ ಬಳಸಿ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ನಂತರ ಗೋಲಿಬಾರ್‌ ಮಾಡಿ ಪ್ರಾಣ ತೆಗೆಯುವುದು ಹಕ್ಕುಗಳ ಉಲ್ಲಂಘನೆಯೇ ಆಗಲಿದೆ.

ಯುದ್ಧಗಳಲ್ಲಿ ಬಾಂಬ್‌ ಹಾಕುವುದು, ಒಬ್ಬರನ್ನು ಕೊಂದು ಮತ್ತೂಬ್ಬರು ಆನಂದಿಸುವುದು ಕೂಡ ಹಕ್ಕುಗಳ ಉಲ್ಲಂಘನೆಯಾಗಲಿದೆ. ಆಗ ನ್ಯಾಯಾಲಯ ವಿಚಾರಣೆ ನಡೆಸಿ ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆ ವಿಧಿಸುತ್ತದೆ. ಮತ್ತೂಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ. ಈಗಂತೂ ಸಣ್ಣ ಸಣ್ಣ ವಿಚಾರಗಳು ಮಾನವ ಹಕ್ಕುಗಳ ಆಯೋಗದ ಮುಂದೆ ಬರುತ್ತಿವೆ. 

Advertisement

ಮೂಲ ಸೌಕರ್ಯಗಳನ್ನು ಕೇಳಿ ಪಡೆಯುವುದು ಜನರ ಹಕ್ಕು. ಮೂಲಭೂತ ಹಕ್ಕುಗಳು ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಂವಿಧಾನದ ಎಲ್ಲ ಹಕ್ಕುಗಳನ್ನೂ ನೀಡಿದೆ. ಅದನ್ನು ಉಪಯೋಗಿಸಿಕೊಂಡು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು. 

ಸರ್ಕಾರಿ ಐಟಿಐ ಕಾಲೇಜಿನ ಪ್ರಭಾರಿ ಪ್ರಾಚಾರ್ಯೆ ಎಸ್‌. ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಆರ್‌. ದಿಂಡಲಕೊಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವು ಯಾದವ್‌, ಭಾರತೀಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎನ್‌.ವಿ. ವೆಂಕಟೇಶಮೂರ್ತಿ, ಕಾರ್ಯದರ್ಶಿ ಎಸ್‌.ಇ. ರವೀಶ್ವರ, ಉಪಾಧ್ಯಕ್ಷ ಬಿ. ಗುರಪ್ಪ, ನ್ಯಾಯವಾದಿ ಎಚ್‌.ಎಸ್‌. ಮಹೇಶ್ವರಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಸಂವಿಧಾನದ ಚೌಕಟು ಮೀರದಿರಿ
ವಿದ್ಯಾರ್ಥಿಗಳಿಗೆ ಯಾರಾದರೂ ತೊಂದರೆ ಮಾಡಿದರೆ ಅವರ ಮೇಲೆ ಹಲ್ಲೆ ನಡೆಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದಕ್ಕೆ ಬದಲಾಗಿ ಪೊಲೀಸರಿಗೆ ದೂರು ಕೊಟ್ಟಾಗ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ಆಗ ತಪ್ಪಿತಸ್ಥರು ಯಾರು ಎಂಬುದನ್ನು ವಿಚಾರಿಸಿ ಕಾನೂನು ಪರಿಮಿತಿಯಲ್ಲಿ ಶಿಕ್ಷೆ ವಿಧಿಸಲಾಗುವುದು. ತಪ್ಪು ಮಾಡಿದ ವ್ಯಕ್ತಿಯನ್ನು ಪೊಲೀಸರು ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದೆ ಸಂವಿಧಾನದ ಚೌಕಟ್ಟಿನಲ್ಲಿಯೇ ಮುನ್ನಡೆಯಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next