Advertisement

 ನಗರ ಠಾಣೆಯಲ್ಲಿ ಶಾಂತಿ ಸಭೆ

02:02 PM Nov 29, 2017 | Team Udayavani |

ಪುತ್ತೂರು: ಡಿಸೆಂಬರ್‌ 1ರಂದು ಈದ್‌ಮಿಲಾದ್‌, ಡಿಸೆಂಬರ್‌ 2ರಂದು ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಮಂಗಳವಾರ ಪುತ್ತೂರು ನಗರ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಮಾತನಾಡಿ, ಪ್ರತಿ ವರ್ಷ ಶಾಂತಿ ಸಭೆಗೆ ಮೊದಲೇ ಈದ್‌ ಮಿಲಾದ್‌ನ ಅನುಮತಿಗೆ ಮನವಿ ಬರುತ್ತದೆ. ಆದರೆ ಈ ಬಾರಿ ಅನುಮತಿ ಕೇಳಿ ಮನವಿ ಬಂದೇ ಇಲ್ಲ. ಈದ್‌ಮಿಲಾದ್‌ ರ‍್ಯಾಲಿಗೆ ಪೊಲೀಸರ ಅಗತ್ಯ ಇಲ್ಲ ಎಂದು ಭಾವಿಸಿದಂತಿದೆ. ಕಬಕದಲ್ಲಿ ರ‍್ಯಾಲಿ  ನಡೆಸುವ ಬಗ್ಗೆ ಬ್ಯಾನರ್‌ ಹಾಕಲಾಗಿದೆ. ಆದರೆ ಈ ಬಗ್ಗೆ ಠಾಣೆಗೆ ಯಾವುದೇ ಮಾಹಿತಿ ನೀಡಿಲ್ಲ. ಏಕಾಏಕಿ ನೀವೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.

ಅಶ್ರಫ್‌ ಕಲ್ಲೇಗ ಮಾತನಾಡಿ, ಡಿಸೆಂಬರ್‌ 1ರಂದು ದ.ಕ. ಮುಸ್ಲಿಂ ಯುವಜನ ಪರಿಷತ್‌, ಪುತ್ತೂರು ಈದ್‌ ಇಲಾದ್‌ ಸಮಿತಿ ವತಿಯಿಂದ ಈದ್‌ ಮಿಲಾದ್‌ ರ‍್ಯಾಲಿ ನಡೆಸಲು ನಿರ್ಧರಿಸಿದ್ದೇವೆ. ಕಬಕ ದಿಂದ ಹೊರಡುವ ರ್ಯಾಲಿ ಪುತ್ತೂರಿಗೆ ಬಂದು ದರ್ಬೆ ತಲುಪಿ, ಅಲ್ಲಿಂದ ಕಿಲ್ಲೆ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿದ ಮಹೇಶ್‌ ಪ್ರಸಾದ್‌, ಕಬಕದಿಂದ ರ‍್ಯಾಲಿ ನಡೆಸುವುದು ಕಷ್ಟ. ದ್ವಿಚಕ್ರ ಹಾಗೂ ಕಾಲ್ನಡಿಗೆ ಜಾಥಾವನ್ನು ಕೈಬಿಟ್ಟು, ಕಾರು ರ‍್ಯಾಲಿ ಮಾಡುತ್ತಿರುವುದು ಒಳ್ಳೆಯದೇ. ಆದರೆ ಕಬಕದಿಂದ ಪುತ್ತೂರಿಗೆ 5 ಕಿ.ಮೀ. ಅಂತರವಿದೆ. ಇಷ್ಟು ದೂರ ರ‍್ಯಾಲಿ ನಡೆಸುವುದರಿಂದ ವಾಹನ ದಟ್ಟಣೆಗೆ ಸಮಸ್ಯೆಯಾಗಲಿದೆ. ವಾಹನ ಸಂಖ್ಯೆ ಹೆಚ್ಚುತ್ತಿದೆ. ಇದಲ್ಲದೇ, ರ‍್ಯಾಲಿ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಜನಜಂಗುಳಿ ಸೇರುತ್ತದೆ. ಈ ಸಂದರ್ಭ ಕಬಕಕ್ಕೆ ಮಿತ್ತೂರು ಹಾಗೂ ವಿಟ್ಲ ಕಡೆಯಿಂದ ಬರುವ ವಾಹನಗಳನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ಕಬಕದಲ್ಲಿ ಸಾಕಷ್ಟು ಜಾಗವೂ ಇಲ್ಲ. ಇದರ ಬದಲು ಮುರದಿಂದ ರ‍್ಯಾಲಿ ನಡೆಸುವುದು ಉತ್ತಮ. ಮುರದಿಂದ ಒಳಗಿನ ರಸ್ತೆಯಲ್ಲಿ ರ‍್ಯಾಲಿಯಲ್ಲಿ ಬರುವ ವಾಹನಗಳನ್ನು ನಿಲ್ಲಿಸಬಹುದು. ಈ ಬಗ್ಗೆ ನಿಮ್ಮೊಳಗೆ ಒಂದು ಸಭೆ ನಡೆಸಿ, ನಿರ್ಧಾರಕ್ಕೆ ಬನ್ನಿ. ಬಳಿಕ ಠಾಣೆಗೆ ಮಾಹಿತಿ ನೀಡಿ ಎಂದು ಸೂಚಿಸಿದರು.

ಉತ್ತರಿಸಿದ ನೂರುದ್ದೀನ್‌, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಬಕ ಶಾಲಾ ಆವರಣದಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭ ಆಗುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.

Advertisement

ಇದಕ್ಕೆ ಆಕ್ಷೇಪಿಸಿದ ಪೊಲೀಸ್‌ ನಿರೀಕ್ಷಕ, ಸಮಯಕ್ಕೆ ಸರಿಯಾಗಿ ರ‍್ಯಾಲಿ ಆರಂಭ ಆಗುವುದು ಕಷ್ಟವೇ. ಅಲ್ಲದೇ ಸವಣೂರು, ಕುಂಬ್ರ ಭಾಗದಿಂದ ಕಾರ್ಯಕರ್ತರು ಆಗಮಿಸುತ್ತಾರೆ. ಇವರ ನಿಯಂತ್ರಣವನ್ನು ಆಯಾ ಭಾಗದವರೇ ನೋಡಿಕೊಳ್ಳಬೇಕು.

ಬಳಿಕ ಪೊಲೀಸರು ಮಧ್ಯಪ್ರವೇಶಿಸುವಂತೆ ಆಗಬಾರದು. ಹಿಂದಿನ ಸಲ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ವಾತಾವರಣ ಈ ಬಾರಿ ನಿರ್ಮಾಣ ಆಗಬಾರದು. ಹೊರಗಿನಿಂದ ಪೊಲೀಸರನ್ನು ತರಿಸುವುದು ಕಷ್ಟಕರ. ಆದ್ದರಿಂದ ರ‍್ಯಾಲಿಯನ್ನು ಮುರದಿಂದಲೇ ಆರಂಭಿಸಿ. ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಅನುಮತಿ ಪಡೆದುಕೊಂಡಿಲ್ಲ
ಕಬಕದಲ್ಲಿ ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದು ರ‍್ಯಾಲಿ ನಡೆಸಲಾಗಿತ್ತು. ಇದಕ್ಕೆ ಅನುಮತಿಯನ್ನೇ ಪಡೆದುಕೊಂಡಿರಲಿಲ್ಲ. ಪೊಲೀಸರ ಅಗತ್ಯ ಇಲ್ಲ ಎಂದು ಭಾವಿಸಿದಂತಿದೆ. ಇದು ಸರಿಯಲ್ಲ. ಇವು ನಮ್ಮ ವಿಶ್ವಾಸವನ್ನು ಕಳೆದುಕೊಳ್ಳುವ ಪ್ರಯತ್ನಗಳು. ಯಾವುದೇ ರೀತಿಯ ಅನುಮತಿಗಳಿಗೆ ಪೊಲೀಸರಿಂದ ತೊಂದರೆ ಆಗಿಲ್ಲ. ಅಂತಹ ಒಂದು ಸಂದರ್ಭ ಬರಲಿ, ನೋಡುವ ಎಂದು ಕಾಯುತ್ತಿರುವ ಹಾಗಿದೆ. ಆದ್ದರಿಂದ ಮುಂದೆ ಅನುಮತಿ ಪಡೆದುಕೊಂಡೇ ಕಾರ್ಯಕ್ರಮ ಮಾಡಿ ಎಂದು ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ತಿಳಿಸಿದರು.

ಡಿ. 2ಕೆ ದತ್ತಮಾಲಾ
ಮುರಳೀಕೃಷ್ಣ ಹಸಂತ್ತಡ್ಕ ಮಾತ ನಾಡಿ, ಡಿಸೆಂಬರ್‌ 2ರಂದು ದರ್ಬೆಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ದತ್ತಮಾಲಾ ಭಜನೆ ಸಂಕೀರ್ತನೆ ನಡೆಯಲಿದೆ. ಬಳಿಕ ಪುತ್ತೂರಿನಿಂದು ಸುಮಾರು 250 ಮಂದಿ ದತ್ತಮಾಲಾಧಾರಿಗಳು ಹೊರಡಲಿದ್ದಾರೆ. ಕಾರ್ಯಕ್ರಮ ಹಿಂದಿನ ವರ್ಷದಂತೆ ಈ ಬಾರಿಯೂ ನಡೆಯಲಿದೆ. ಯಾವುದೇ ಬದಲಾವಣೆ ಇಲ್ಲ ಎಂದು ವಿವರಿಸಿದರು. ಪ್ರತಿಕ್ರಿಯಿಸಿದ ಮಹೇಶ್‌ ಪ್ರಸಾದ್‌, ಪುತ್ತೂರಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯಕ್ರಮ ನಡೆಸುತ್ತಿದ್ದೀರಿ. ಎಲ್ಲರಿಂದಲೂ ಉತ್ತಮ ಸಹಕಾರ ಸಿಕ್ಕಿದೆ ಎಂದು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next