ಸಕಲೇಶಪುರ: ಸಾಮರಸ್ಯವಿಲ್ಲದ ಸಮಾಜ ನರಕಕ್ಕೆ ಸಮ. ಎಲ್ಲ ಸಮುದಾಯಗಳು ಒಂದಾಗಿ ಬದುಕಿದರೇ ಸಮಾಜದಲ್ಲಿ ಶಾಂತಿ ಸ್ಥಾಪನೆ ಸಾಧ್ಯ ಎಂದು ಚಾಮರಾಜನಗರ ನಳಂದ ವಿವಿ ಬೌದ್ಧ ಭಿಕ್ಷು ಬೋಧಿದತ್ತ ಥೇರಾ ಭಂತೇಜಿ ಹೇಳಿದರು.
ಗುರುವಾರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಲೋಕಾರ್ಪಣೆ ಕಾರ್ಯಕ್ರ ಮ ಸಾನ್ನಿಧ್ಯ ವಹಿಸಿ ಮಾತನಾಡಿ, ಬುದ್ಧ ಬೋಧಿಸಿದ ಮೊದಲ ತತ್ವವೆ ಶಾಂತಿ, ಶಾಂತಿ ಇಲ್ಲದ ಸಮಾಜ ನರಕಕ್ಕೆ ಸಮ. ಪರಸ್ಪರ ಪ್ರೀತಿಸುವ ಸಮಾಜದಲ್ಲಿ ನೆಮ್ಮದಿ ನೆಲೆಸಿರಲಿದೆ. ಪ್ರಾಣಿ ಹಿಂಸೆ ಮಹಾಪಾಪ. ಹಿಂಸೆ ತ್ಯಜಿಸಿ ಮಾನವೀಯ ಗುಣದೊಂದಿಗೆ ಉದಾತ್ತ ಜೀವನ ನಡೆಸ ಬೇಕು. ಅಂಬೇಡ್ಕರ್ ಪ್ರತಿಪಾದಿಸಿದ ಪಂಚಶೀಲ ತತ್ವಗಳನ್ನು ಜೀವನದಲ್ಲಿ ಆಳವಡಿಸಿ ಕೊಂಡಾಗ ಜೀವನ ಪಾವನವಾಗಲಿದೆ ಎಂದರು.
ಸಂಘರ್ಷದ ಬದಲಿಗೆ ಶಿಕ್ಷಣಕ್ಕೆ ಒತ್ತು ಕೊಡಿ: ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ದಲಿತರ ಅಸ್ಮಿತೆಯಾಗಿ ತಲೆ ಎತ್ತಿರುವ ಅಂಬೇಡ್ಕರ್ ಭವನ ಎಲ್ಲ ಸಮುದಾಯವನ್ನು ಒಟ್ಟಾಗಿ ಕರೆದೊಯ್ಯುವ ಕೇಂದ್ರವಾಗಿ ಕೆಲಸ ಮಾಡಲಿ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ದಲಿತ ಸಮಾಜ ಉನ್ನತಿ ಸಾಧಿಸಬಹುದಾಗಿದೆ. ಸಂಘರ್ಷದ ಬದಲಿಗೆ ಶಿಕ್ಷಣಕ್ಕೆ ಒತ್ತು ಕೊಟ್ಟಾಗ ಮಾತ್ರ ನಮ್ಮ ಸಮಾಜ ಉದ್ಧಾರವಾಗಲಿದೆ. ಆದ್ದರಿಂದ, ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಕಟ್ಟಡ, ಸಾರ್ಥಕತೆ ಪಡೆಯುವ ನಿಟ್ಟಿನಲ್ಲಿ ಮುಂದಿನ ದಿನ ಗಳಲ್ಲಿ ಗ್ರಂಥಾಲಯ ಸ್ಥಾಪನೆ ಮಾಡುವ ಉದ್ದೇಶವಿದೆ. ಈ ಮೂಲಕ ಸಮುದಾಯದ ಯುವಕರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಶಿಕ್ಷಿತರಾಗಿ ಉನ್ನತ ಸ್ಥಾನ ಪಡೆಯಿರಿ: ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ಶೋಷಿತ ಸಮಾಜದ ಸಮುದಾಯ ಭವನವೊಂದು ಪಟ್ಟಣದ ಹೃದಯಭಾಗದಲ್ಲಿ ನಿರ್ಮಾಣಗೊಂಡಿರುವುದು ಸಂತಸದ ವಿಚಾರ. ಅಂಬೇಡ್ಕರ್ ಭವನ ನಿರ್ಮಾಣ ಮಾಡಿರುವ ದಲಿತ ನಾಯಕರು ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯವನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ಹೊತ್ತಿದ್ದಾರೆ. ಅಂಬೇಡ್ಕರ್ ಜೀವನವನ್ನು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳುವ ಮೂಲಕ ದಲಿತ ಯುವಕರು ಶಿಕ್ಷಿತರಾಗಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವಂತಾಗಲಿ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಮಿನಿವಿಧಾನಸೌಧದ ಮುಂಭಾಗವಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಶಾಸಕ ಎಚ್. ಕೆ.ಕುಮಾರಸ್ವಾಮಿ ಅವರು ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಪ್ರಮುಖ ಬೀದಿಗಳಲ್ಲಿ ಮಲೆನಾಡಿನ ಕೊಂಬು ಕಹಳೆ ಹಾಗೂ ವಾದ್ಯಗೋಷ್ಠಿಯೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಸಮಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣಕ್ಕೆ ಹಿಂದಿನಿಂದಲೂ ಶ್ರಮ ವಹಿಸಿದ ದಲಿತ ಮುಖಂಡರಿಗೆ ಇದೆ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್, ನಿರ್ಗಮಿತ ಎಸಿ ಪ್ರತೀಕ್ ಬಯಾಲ್, ಎಸಿ ಅನ್ಮೋಲ್ ಜೈನ್, ತಹಶೀಲ್ದಾರ್ ಜೈ ಕುಮಾರ್, ಪುರಸಭಾ ಅಧ್ಯಕ್ಷ ಕಾಡಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಮೂರ್ತಿ, ಬಿಜೆಪಿ ಮುಖಂಡ ಪರ್ವತಯ್ಯ ಹಾಜರಿದ್ದರು.
ಎಲ್ಲ ವರ್ಗಗಳಿಗೂ ಬಳಕೆಯಾಗಲಿ: ಡೀಸಿ ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, ದಲಿತರ ಕನಸಿನ ಕೂಸಾಗಿ ತಲೆ ಎತ್ತಿರುವ ಸಮುದಾಯ ಭವನ ಎಲ್ಲ ಸಮಾಜದವರು ಉಪಯೋಗಿಸುವಂತಾಗಲಿ ಹಾಗೂ ಸದ್ಭಳಕೆಯಾಗಲಿ ಎಂದರು.
ಉನ್ನತ ತರಬೇತಿ ಕೇಂದ್ರವಾಗಲಿ: ಎಸ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಕಟ್ಟಡ ಕೇವಲ ಸಭೆ ಸಮಾರಂಭಗಳಿಗೆ ಸೀಮಿತ ಗೊಳ್ಳದೆ ದಲಿತ ವಿದ್ಯಾವಂತ ಯುವಜನತೆಗೆ ಉನ್ನತ ಮಟ್ಟದ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿ ಈ ನಿಟ್ಟಿನಲ್ಲಿ ನಮ್ಮ ಸಹಕಾರ ಇರಲಿದೆ ಎಂದರು.