ಬಂಟ್ವಾಳ: ವಿಶ್ವಕ್ಕೆ ಶಾಂತಿ- ಸಹಬಾಳ್ವೆ- ಅಹಿಂಸಾ ತತ್ತ್ವವನ್ನು ಸಾರಿದ ಜೈನ ಧರ್ಮವು ಭಗವಾನ್ ಶ್ರೀ ಮಹಾವೀರರ ಪುಣ್ಯ ಜನ್ಮದಿನ ಆಚರಣೆ ಮೂಲಕ ಸಮಾಜಕ್ಕೆ ಶಾಂತಿಯ ಸಾಮರಸ್ಯದ ಸಂದೇಶವನ್ನು ಪುನರಪಿ ಸ್ಮರಿಸುವ ಕೆಲಸ ಮಾಡುತ್ತಿದೆ ಎಂದು ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಎ. 17ರಂದು ಬಿ.ಸಿ. ರೋಡ್ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ತಾ| ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ಕಂದಾಯ ಇಲಾಖೆ ಬಂಟ್ವಾಳ ಮತ್ತು ಭಾರತೀಯ ಜೈನ್ ಮಿಲನ್ ಬಂಟ್ವಾಳ ಶಾಖೆ ಸಂಯುಕ್ತ ಆಶ್ರಯದಲ್ಲಿ ಆಚರಿಸಿದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ್ ಮಿಲನ್ ಘಟಕದ ಅಧ್ಯಕ್ಷ ಬ್ರಿಜೇಶ್ ಜೈನ್ ಮಾತನಾಡಿ, ಮಹಾವೀರರು ಮಾನವ ಜನಾಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಶಾಂತಿ-ಸಹಬಾಳ್ವೆ, ಪ್ರೀತಿ-ವಿಶ್ವಾಸದ ನಮ್ಮ ನಡೆಯು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಮಹತ್ವದ್ದು ಎಂದರು.
ದ.ಕ. ಜಿ.ಪಂ. ಉಪಕಾರ್ಯದರ್ಶಿ ಮತ್ತು ಬಂಟ್ವಾಳ ತಾ| ಸಹಾಯಕ ಚುನಾ ವಣಾಧಿಕಾರಿ ಎಸ್.ಸಿ. ಮಹೇಶ್, ಉಪ ತಹಶೀಲ್ದಾರ್ ರಾಜೇಶ್, ರಾಷ್ಟ್ರೀಯ ಹಬ್ಬ ಗಳ ಆಚರಣ ಸಮಿತಿ ವಿಷಯ ನಿರ್ವಾಹಕ ಎನ್. ವಿಶುಕುಮಾರ್, ಭಾರತೀಯ ಜೈನ್ ಮಿಲನ್-8ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಜೈನ ಸಮಾಜದ ಹಿರಿಯರಾದ ಪಿ. ಜಿನರಾಜ ಆರಿಗ, ಕಾರ್ಯದರ್ಶಿ ಗೀತಾ ಜಿನಚಂದ್ರ, ಕೋಶಾಧಿಕಾರಿ ಚಂದ್ರಕಾಂತ್ ಜೈನ್ ಪೆರಿಯಾರ್, ಬಂಟ್ವಾಳ ನಿಯೋಜಿತ ಅಧ್ಯಕ್ಷ ಡಾ| ಸುದೀಪ್, ಕಾರ್ಯದರ್ಶಿ ಜಯಕೀರ್ತಿ, ಕೋಶಾಧಿಕಾರಿ ಅಜಿತ್ ಕುಮಾರ್ ಜೈನ್, ಉಪಾಧ್ಯಕ್ಷ ರಾಜಪ್ರಸಾದ್ ಆರಿಗ, ಜೈನ್ ಮಿಲನ್ ಸದಸ್ಯರಾದ ಸ್ವಪ್ನಾ ಚಂದ್ರಪ್ರಭ, ಭರತ್‌ರಾಜ್ ಜೈನ್, ಮಹಾವೀರ್ ಜೈನ್, ಧನಂಜಯ ಹೆಗಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅನಂತರ ಜೈನ್ ಮಿಲನ್ ಎಲ್ಲ ಪದಾಧಿಕಾರಿಗಳು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲು ವಿತರಿಸಿದರು. ತಾಲೂಕಿನ ಜಿನ ಚೈತ್ಯಾಲಯಗಳಲ್ಲಿ ಇಡೀ ದಿನ ಮಹಾವೀರ ಜಯಂತಿ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಿಲನ್ ಪದಾಧಿಕಾರಿಗಳು ಬಸದಿಗಳಿಗೆ ತೆರಳಿ ಮಹಾವೀರರ ಸಂದೇಶವನ್ನು ಜೈನ ಶ್ರಾವಕರಿಗೆ ಪ್ರಸ್ತುತಪಡಿಸುವ ಕಾರ್ಯಕ್ರಮ ನಡೆಯಿತು.
ಅಹಿಂಸಾ ತತ್ತ್ವ
ತಾಲೂಕು ತಹಶೀಲ್ದಾರ್ ಸಣ್ಣರಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ, ಮಹಾವೀರರ ಸಂದೇಶ ಆಧುನಿಕ ಜಗತ್ತಿಗೆ ಹಿಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ. ಅಹಿಂಸಾ ತತ್ತ್ವವನ್ನು ನಾವೆಲ್ಲ ಪಾಲಿಸುವುದು ಇಂದಿನ ಔಚಿತ್ಯವೂ ಆಗಿದೆ ಎಂದರು.