Advertisement

Peace; ಉಗ್ರರ ದಮನದ ವಿನಾ ಜಾಗತಿಕ ಶಾಂತಿ ಅಸಾಧ್ಯ

12:20 AM Oct 31, 2023 | Team Udayavani |

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಣ ಸಮರ ತೀವ್ರ ಸ್ವರೂಪ ಪಡೆದಿರುವಂತೆಯೇ ಇತ್ತಂಡಗಳ ನಡುವೆ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಣೆಗೆ ಒತ್ತು ನೀಡುವ ವಿಶ್ವಸಂಸ್ಥೆಯ ನಿರ್ಣಯದ ವಿಚಾರದಲ್ಲಿ ಭಾರತ ತಟಸ್ಥ ನಿಲುವನ್ನು ತಾಳುವ ಮೂಲಕ ವಿಶ್ವ ರಾಷ್ಟ್ರಗಳನ್ನು ಅಚ್ಚರಿಯ ಮಡುವಿನಲ್ಲಿ ಕೆಡವಿದೆ. ಉಗ್ರರ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಭಾರತ ವಾದಿಸುತ್ತಲೇ ಬಂದಿದೆ. ಇಸ್ರೇಲ್‌ ಸೇನೆ, ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ದಾಳಿಯನ್ನು ಮಾನವೀಯತೆಯ ನೆಲೆಯಲ್ಲಿ ತತ್‌ಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಅರಬ್‌ ರಾಷ್ಟ್ರಗಳು ಜತೆಗೂಡಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದ ನಿರ್ಣಯದ ಕುರಿತ ಮತದಾನದಿಂದ ದೂರವುಳಿಯುವ ಮೂಲಕ ಭಯೋತ್ಪಾದಕರ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯೇ ಮದ್ದು ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳಿದೆ.

Advertisement

ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ಅ.7ರಂದು ಏಕಾಏಕಿ ಇಸ್ರೇಲ್‌ ಮೇಲೆ ನಡೆಸಿದ ದಾಳಿಯ ಬಳಿಕ ಕೆಂಡಾಮಂಡಲವಾಗಿರುವ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಗಾಜಾಪಟ್ಟಿ ಸಂಪೂರ್ಣ ಜರ್ಝರಿತವಾಗಿದೆ. ಯುದ್ಧ ಆರಂಭಗೊಂಡು ಮೂರು ವಾರಗಳು ಕಳೆದಿದ್ದು ಸಹಸ್ರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ಜನರು ಅಗತ್ಯ ವಸ್ತುಗಳ ಕೊರತೆಯಿಂದ ಬಳಲುತ್ತಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ವಿಶ್ವದ ಹಲವಾರು ದೇಶಗಳು ಮಾನವೀಯ ನೆಲೆಯಲ್ಲಿ ಗಾಜಾ ಪಟ್ಟಿಯಲ್ಲಿನ ಯುದ್ಧ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದರೂ ಯುದ್ಧದ ಭೀಕರತೆಯ ಮುಂದೆ ಇದು ನಗಣ್ಯವಾಗಿದೆ. ಇದೇ ವೇಳೆ ಇಸ್ರೇಲ್‌ನ ಬಿಗಿಪಟ್ಟಿನಿಂದಾಗಿ ಗಾಜಾಪಟ್ಟಿಯಲ್ಲಿ ಇಂಧನದ ಅಭಾವ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಕೂಡ ತನ್ನ ಪರಿಹಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಕದನ ವಿರಾಮಕ್ಕೆ ಹೆಚ್ಚಿದ ಒತ್ತಡ
ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಿಯೇ ಸಿದ್ಧ ಎಂದು ಪಣತೊಟ್ಟಿರುವ ಇಸ್ರೇಲ್‌, ಗಾಜಾ ಪಟ್ಟಿಯಲ್ಲಿ ವಾಯು ದಾಳಿಯ ಜತೆಯಲ್ಲಿ ಕಳೆದ ಐದು ದಿನಗಳಿಂದ ಭೂ ದಾಳಿ ನಡೆಸುವ ಮೂಲಕ ಹಮಾಸ್‌ ಉಗ್ರರ ವಿರುದ್ಧ ನೇರ ಕಾರ್ಯಾಚರಣೆಗಿಳಿದಿದೆ. ಗಾಜಾ ಪಟ್ಟಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಾಗರಿಕರು ಸಾವಿಗೀಡಾಗಿರುವುದ ರಿಂದ ಇಸ್ರೇಲ್‌ ಬೆಂಬಲಿತ ರಾಷ್ಟ್ರಗಳು ಕೂಡ ಈಗ ಕದನ ವಿರಾಮದ ಬಗೆಗೆ ದನಿ ಎತ್ತಲಾರಂಭಿಸಿವೆ.

ಅತ್ತ ಹಮಾಸ್‌ ಉಗ್ರರ ಬೆಂಬಲಕ್ಕೆ ನಿಂತಿರುವ ಇರಾನ್‌, ಲೆಬನಾನ್‌, ಟರ್ಕಿ ಸಹಿತ ಅರಬ್‌ ರಾಷ್ಟ್ರಗಳು ಈಗ ಬಹಿರಂಗವಾಗಿಯೇ ಇಸ್ರೇಲ್‌ ವಿರುದ್ಧ ಕಿಡಿಕಾರ ಲಾರಂಭಿಸಿದ್ದು ಉಗ್ರರ ದಮನವನ್ನು ನೆಪವಾಗಿರಿಸಿ ಇಸ್ರೇಲ್‌ ಸೇನೆ, ಪ್ಯಾಲೆಸ್ತೀನ್‌ನ ಅಮಾಯಕ ನಾಗರಿಕರನ್ನು ಹತ್ಯೆಗೈಯ್ಯುತ್ತಿದೆ ಎಂದು ಆರೋಪಿಸಿವೆ. ಇಸ್ರೇಲ್‌ನ ಇಂತಹ ಧೋರಣೆಯೇ ಮಧ್ಯಪ್ರಾಚ್ಯದಲ್ಲಿ ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದೂ ದೂರಿವೆ. ಹಮಾಸ್‌-ಇಸ್ರೇಲ್‌ ನಡುವಣ ಯುದ್ಧ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ವಿಶ್ವ ಸಮುದಾಯ ಎಚ್ಚೆತ್ತುಕೊಂಡು ಮಾನವೀಯ ನೆಲೆಯಲ್ಲಿ ತತ್‌ಕ್ಷಣ ತಾತ್ಕಾಲಿಕ ನೆಲೆಯಲ್ಲಾದರೂ ಕದನ ವಿರಾಮ ಘೋಷಿಸಬೇಕೆಂದು ಆಗ್ರಹಿಸಿವೆ.
ಶನಿವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸುವ ಸಂಬಂಧ 22 ಅರಬ್‌ ದೇಶಗಳು ಸಿದ್ದಪಡಿಸಿದ ಕರಡು ನಿರ್ಣಯವನ್ನು ಜೋರ್ಡಾನ್‌ ಸಭೆಯ ಮುಂದೆ ಮಂಡಿಸಿತ್ತು. ನಿರ್ಣಯದ ಪರವಾಗಿ 120 ದೇಶಗಳು ಮತ ಚಲಾಯಿಸಿದರೆ, 14 ರಾಷ್ಟ್ರಗಳು ವಿರುದ್ಧವಾಗಿ ಮತ್ತು 44 ರಾಷ್ಟ್ರಗಳು ಗೈರಾದವು. ಭಾರತ ಸಹಿತ ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್‌, ಉಕ್ರೇನ್‌ ಮತ್ತು ಯುಕೆ ತಟಸ್ಥ ನಿಲುವನ್ನು ತಾಳಿದ ರಾಷ್ಟ್ರಗಳಲ್ಲಿ ಸೇರಿವೆ. ಜೋರ್ಡಾನ್‌ ಮಂಡಿಸಿದ ನಿರ್ಣಯ ವಿಶ್ವಸಂಸ್ಥೆಯಲ್ಲಿ ಅಂಗೀಕೃತವಾದರೂ ಇದನ್ನು ಪಾಲಿಸಲು ಇಸ್ರೇಲ್‌ ಸಿದ್ಧವಿದೆಯೇ? ಅಥವಾ ಈ ದಿಸೆಯಲ್ಲಿ ಇಸ್ರೇಲ್‌ನ ಮನವೊಲಿಸಲು ಮುಂದಾಗುವವರಾರು? ಎಂಬುದೇ ಸದ್ಯದ ಕುತೂಹಲ.

ಭಯೋತ್ಪಾದನೆ ಸಹಿಸಲಸಾಧ್ಯ
ಹಮಾಸ್‌ ಉಗ್ರರು ಅ.7ರಂದು ಇಸ್ರೇಲ್‌ ಮೇಲೆ ನಡೆಸಿದ ವಾಯುದಾಳಿಗಳು ತೀರಾ ಆಘಾತಕಾರಿ ಮತ್ತು ಖಂಡನೀಯ. ಹಮಾಸ್‌ ಉಗ್ರರು ಒತ್ತೆಯಾಳಾಗಿರಿಸಿಕೊಂಡಿರುವವರನ್ನು ಯಾವುದೇ ಷರತ್ತುಗಳಿಲ್ಲದೆ ತತ್‌ಕ್ಷಣ ಬಿಡುಗಡೆ ಮಾಡಬೇಕು. ಭಯೋತ್ಪಾದನೆ ಮಾರಣಾಂತಿಕವಾಗಿದ್ದು, ಇದಕ್ಕೆ ಯಾವುದೇ ಗಡಿ, ರಾಷ್ಟ್ರೀಯತೆ, ಜನಾಂಗ ಎಂಬುದಿಲ್ಲ. ಭಯೋತ್ಪಾದನೆ ಕೃತ್ಯಗಳನ್ನು ಯಾವೊಂದೂ ರಾಷ್ಟ್ರವೂ ಸಮರ್ಥಿಸ ಬಾರದು. ಎಲ್ಲ ರಾಷ್ಟ್ರಗಳೂ ಭಿನ್ನಾಭಿಪ್ರಾಯ ಗಳನ್ನು ಬದಿಗಿಟ್ಟು ಇಡೀ ಜಗತ್ತು ಒಗ್ಗೂಡಿ ಭಯೋತ್ಪಾದನೆಯ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯ ನಿಲುವನ್ನು ತಾಳಬೇಕು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ. ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗೆಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ ಭಾರತ, ಎಲ್ಲ ದೇಶಗಳು ಒಂದಿಷ್ಟು ಸಂಯಮದಿಂದ ವರ್ತಿಸುವ ಅಗತ್ಯವಿದೆ ಎಂದು ಕಿವಿಮಾತು ಕೂಡ ಹೇಳಿದೆ.
ಇದೇ ವೇಳೆ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಯನ್ನು ಖಂಡಿಸುವ ಮತ್ತು ಉಗ್ರರು ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲ್‌ ನಾಗರಿಕರನ್ನು ಅಂತಾರಾಷ್ಟ್ರೀಯ ನಿಯಮಾವಳಿಗಳಿಗನುಸಾರವಾಗಿ ಮಾನವೀಯ ನೆಲೆಯಲ್ಲಿ ನಡೆಸಿಕೊಳ್ಳಬೇಕು ಮತ್ತು ಆದಷ್ಟು ಶೀಘ್ರವೇ ಎಲ್ಲ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು ಎಂದು ಕೆನಡಾ ಮಂಡಿಸಿದ್ದ ತಿದ್ದುಪಡಿಗೆ ಭಾರತ ತನ್ನ ಬೆಂಬಲ ನೀಡಿತ್ತು ಎಂಬುದನ್ನು ಇಲ್ಲಿ ಉಲ್ಲೇಖೀಸಲೇಬೇಕು.

Advertisement

ಚಾಣಾಕ್ಷ ನಡೆ
ಮೇಲ್ನೋಟಕ್ಕೆ ಇಸ್ರೇಲ್‌-ಪ್ಯಾಲೆಸ್ತೀನ್‌ ವಿಚಾರದಲ್ಲಿ ಭಾರತ ಇಬ್ಬಗೆಯ ನೀತಿಯನ್ನು ಅನುಸರಿಸಿದಂತೆ ಕಂಡುಬಂದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ರಾಜತಾಂತ್ರಿಕ ನೆಲೆಯಲ್ಲಿ ಅತ್ಯಂತ ವಿವೇಚಾನಾತ್ಮಕ ನಡೆಯನ್ನು ಇರಿಸಿರುವುದು ಸ್ಪಷ್ಟ. ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ನಡೆಸುತ್ತಿರುವ ದಾಳಿಯಿಂದಾಗಿ ಅಮಾಯಕ ನಾಗರಿಕರು ಸಾವನ್ನಪ್ಪುತ್ತಿರುವ ಸಂಬಂಧ ಕಳವಳ ವ್ಯಕ್ತಪಡಿಸುತ್ತಲೇ ಕದನವಿರಾಮ ನಿರ್ಣಯದ ಕುರಿತ ಮತದಾನದಿಂದ ದೂರವುಳಿದಿದೆ. ಇಡೀ ಸಂಘರ್ಷಕ್ಕೆ ನಾಂದಿ ಹಾಡಿದ ಹಮಾಸ್‌ ಉಗ್ರರ ಅಟ್ಟಹಾಸವನ್ನು ಪ್ರಬಲವಾಗಿ ಖಂಡಿಸುವ ಮೂಲಕ ಭಯೋತ್ಪಾದಕರ ವಿಷಯದಲ್ಲಿ ಮಾನವೀಯತೆಯ ಮಾತಾದರೂ ಎಲ್ಲಿಂದ ಎಂದು ವಿಶ್ವ ಸಮುದಾಯವನ್ನು ಪ್ರಶ್ನಿಸಿದೆ. ಅಷ್ಟು ಮಾತ್ರವಲ್ಲದೆ ಈ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಕಿವಿಮಾತು ಹೇಳುವ ಮೂಲಕ ಸಂಭಾವ್ಯ ಅಪಾಯಗಳ ಬಗೆಗೆ ಮುನ್ನೆಚ್ಚರಿಕೆ ನೀಡಿ, ಜಾಗತಿಕ ಶಾಂತಿಗೆ ಭಂಗ ತರುವ ಯಾವುದೇ ದುಸ್ಸಾಹಸಕ್ಕೆ ಕೈಹಾಕದಿರುವಂತೆಯೂ ತಿಳಿ ಹೇಳಿದೆ. ಇಲ್ಲಿ ಇನ್ನೊಂದು ಅತ್ಯಂತ ಗಮನಾರ್ಹ ಅಂಶ ಎಂದರೆ ಗಾಜಾ ಪಟ್ಟಿಯಲ್ಲಿನ ಯುದ್ಧ ಸಂತ್ರಸ್ತರಿಗೆ ಭಾರತ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಇದೇ ವೇಳೆ ಹಮಾಸ್‌ ಉಗ್ರರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ಕಾರ್ಯಾಚರಣೆಯ ಕುರಿತಂತೆ ಮೌನಕ್ಕೆ ಶರಣಾಗಿದೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡೇ ಭಾರತ ಈ ಜಾಗರೂಕ ಹೆಜ್ಜೆ ಇರಿಸಿದೆ.

ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ವಿಶ್ವಸಂಸ್ಥೆಯಲ್ಲಿ ಕೈಗೊಳ್ಳಲಾದ ನಿರ್ಣಯದ ವಿಷಯದಲ್ಲಿ ತಟಸ್ಥ ನಿಲುವನ್ನು ತಳೆದು, ಭಾರತ ರಾಜತಾಂತ್ರಿಕವಾಗಿ ತನ್ನ ಮುತ್ಸದ್ಧಿತನ ಮೆರೆದಿದೆ. ಭಯೋತ್ಪಾದನೆಯ ವಿರುದ್ಧದ ತನ್ನ ಕಠಿನ ನಿಲುವನ್ನು ಪುನರುತ್ಛರಿಸುತ್ತಲೇ, ಇಸ್ರೇಲ್‌-ಪ್ಯಾಲೆಸ್ತೀನ್‌ ಎರಡು ರಾಷ್ಟ್ರಗಳ ನೀತಿಗೆ ತನ್ನ ಬೆಂಬಲವನ್ನು ಸಾರಿದೆ. ಜತೆಯಲ್ಲಿ ಮಧ್ಯಪ್ರಾಚ್ಯ ಅದರಲ್ಲೂ ಮುಖ್ಯವಾಗಿ ಅರಬ್‌ ದೇಶಗಳಿಗೆ ಮುನ್ನೆಚ್ಚರಿಕೆಯ ಕಿವಿಮಾತು ಹೇಳುವ ಮೂಲಕ ಶಾಂತಿ ಮಂತ್ರವನ್ನು ಕೂಡ ಜಪಿಸಿದೆ. ದಶಕಗಳಿಂದಲೂ ಜಾಗತಿಕ ವಾಗಿ ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದಾಗಲೆಲ್ಲ ಅಲಿಪ್ತ ನೀತಿಯನ್ನು ಅನುಸರಿಸುತ್ತ ಬಂದಿರುವ ಭಾರತ ಇದೀಗ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಮಧ್ಯಪ್ರಾಚ್ಯ ಬಿಕ್ಕಟ್ಟಿನ ವಿಷಯದಲ್ಲೂ ಇದೇ ನಿಲುವನ್ನು ಅನುಸರಿಸಿದೆ. ರಷ್ಯಾ-ಉಕ್ರೇನ್‌ ಸಮರದ ವಿಷಯದಲ್ಲೂ ಭಾರತ ತಟಸ್ಥ ಧೋರಣೆಯನ್ನು ತನ್ನದಾಗಿಸಿಕೊಂಡಿದ್ದು ಇತ್ತಂಡಗಳೂ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿದೆ. ತನ್ಮೂಲಕ ಉಭಯ ದೇಶಗಳೊಂದಿಗಿನ ತನ್ನ ಸೌಹಾರ್ದ ಸಂಬಂಧಕ್ಕೆ ಧಕ್ಕೆ ಬಾರದಂತೆ ಬಲು ಎಚ್ಚರಿಕೆಯ ಮತ್ತು ಚಾಣಾಕ್ಷ ನಡೆಯನ್ನು ಇರಿಸಿದೆ. ವಿಶ್ವ ರಾಷ್ಟ್ರಗಳ ನಡುವೆ ಸಂಘರ್ಷದ ವಾತಾವರಣ ತಲೆದೋರಿದಾಗ ಇತ್ತಂಡಗಳಿಂದ ಅಂತರ ಕಾಯ್ದುಕೊಳ್ಳುತ್ತಲೇ ಶಾಂತಿ ಮಂತ್ರವನ್ನು ಬೋಧಿಸುತ್ತಲೇ ಬಂದಿರುವ ಭಾರತ ಈ ಬಾರಿಯ ಅದೇ ನಿಲುವನ್ನು ತಾಳಿದೆ. ಇದರ ಜತೆಯಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸದ ಹೊರತು ವಿಶ್ವಶಾಂತಿ, ಮಾನವೀಯತೆಯಂತಹ ಶಬ್ದಗಳಿಗೆ ಅರ್ಥವೇ ಇರಲಾರದು ಎಂದು ಗಟ್ಟಿದನಿಯಲ್ಲಿ ಇಡೀ ಜಗತ್ತಿಗೆ ಸಾರಿ ಹೇಳಿದೆ.

ಹರೀಶ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next