ಇಸ್ಲಾಮಾಬಾದ್: ಬೆದರಿಕೆ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡ ಕೊನೆ ಕ್ಷಣದಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ (ಏಕದಿನ ಕ್ರಿಕೆಟ್ ಮತ್ತು ಐದು ಪಂದ್ಯಗಳ ಟಿ 20 ಕ್ರಿಕೆಟ್ ಸರಣಿ) ಪ್ರವಾಸವನ್ನು ಏಕಾಏಕಿ ರದ್ದುಗೊಳಿಸಿದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಭಾರೀ ಆರ್ಥಿಕ ನಷ್ಟಕ್ಕೆ ಗುರಿಯಾಗುವಂತಾಗಿದೆ!
ಇದನ್ನೂ ಓದಿ:ನಾಗಾಲೋಟ: ಸಾರ್ವಕಾಲಿಕ ದಾಖಲೆ – 60 ಸಾವಿರ ಸನಿಹಕ್ಕೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್
ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನ ಬಿಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿತ್ತು. ಏತನ್ಮಧ್ಯೆ ಸರಣಿ ದಿಢೀರ್ ರದ್ದಾದ ಪರಿಣಾಮ ಭದ್ರತೆಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಪೊಲೀಸರಿಗೆ ನೀಡಿದ್ದ ಬಿರಿಯಾನಿ ಬಿಲ್ ಮೊತ್ತ 27 ಲಕ್ಷ ರೂಪಾಯಿ ಆಗಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಭಾರೀ ಮೊತ್ತದ ಬಿರಿಯಾನಿ ಬಿಲ್ ದೊಡ್ಡ ಶಾಕ್ ನೀಡಿದೆ. ಆನಂದ್ ಬಜಾರ್ ಪತ್ರಿಕೆಯ ವರದಿ ಪ್ರಕಾರ, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಸೇನೆಯ ಜತೆಗೆ ಐವರು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ 500 ಪೊಲೀಸ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ತಿಳಿಸಿದೆ.
ಭದ್ರತಾ ಅಧಿಕಾರಿಗಳಿಗೆ ದಿನಕ್ಕೆ ಎರಡು ಬಿರಿಯಾನಿ ನೀಡಲಾಗಿದ್ದು, ಇದರ ಒಟ್ಟು ಮೊತ್ತವೇ 27 ಲಕ್ಷ ರೂಪಾಯಿ ಆಗಿರುವುದಾಗಿ ಆನಂದ್ ಬಜಾರ್ ಪತ್ರಿಕೆ ತಿಳಿಸಿದೆ. ನಿಗದಿಯಂತೆ ಸೆಪ್ಟೆಂಬರ್ 17ರಂದು ಏಕದಿನ ಕ್ರಿಕೆಟ್ ಸರಣಿಯ ಪಂದ್ಯ ರಾವಲ್ಪಿಂಡಿಯಲ್ಲಿ ಆರಂಭವಾಗಬೇಕಿತ್ತು. ಆದರೆ ನ್ಯೂಜಿಲೆಂಡ್ ತಂಡಕ್ಕೆ ಇ ಮೇಲ್ ಮೂಲಕ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪಂದ್ಯವನ್ನು ರದ್ದುಗೊಳಿಸಿತ್ತು.