Advertisement
ನೀರು ಕುಡಿದು ದುಡ್ಡು ಕೊಡದ ಜನರಿಂದಾಗಿ ಪುರಸಭೆ ಸಾಲದ ಕಂತು ಕಟ್ಟಲು ಪರದಾಡುವ ಸ್ಥಿತಿ ಬಂದಿದೆ.
Related Articles
Advertisement
ಪುರಸಭೆ ವ್ಯಾಪ್ತಿಯಲ್ಲಿ 3,675 ಮನೆಗಳ ಸಂಪರ್ಕದಲ್ಲಿ 47.99 ಲಕ್ಷ ರೂ., 43 ಗೃಹಬಳಕೆಯಲ್ಲದ ಸಂಪರ್ಕದಲ್ಲಿ 75 ಸಾವಿರ ರೂ., 209 ವಾಣಿಜ್ಯ ಸಂಪರ್ಕಗಳಿಂದ 11.96 ಲಕ್ಷ ರೂ. ನೀರಿನ ಬಿಲ್ ಬಾಕಿ ಇದೆ. ಆನಗಳ್ಳಿ 1 ಲಕ್ಷ ರೂ., ಬಸ್ರೂರು 74 ಸಾವಿರ ರೂ., ಬಳ್ಕೂರು 2 ಲಕ್ಷ ರೂ., ಕೋಣಿ 51 ಸಾವಿರ ರೂ., ಹಂಗಳೂರು 40 ಸಾವಿರ ರೂ., ಕಂದಾವರ 4.6 ಲಕ್ಷ ರೂ. ಬಾಕಿ ಇರಿಸಿಕೊಂಡಿವೆ. ಒಟ್ಟು ಪುರಸಭೆಗೆ 71.6 ಲಕ್ಷ ರೂ. ಬಾಕಿಯಿದ್ದು ಎಪ್ರಿಲ್‌ನಿಂದ ಸೆ.15ರವರೆಗೆ 72.4 ಲಕ್ಷ ರೂ. ನೀರಿನ ಬಿಲ್ ಸಂಗ್ರಹವಾಗಿದೆ. 74 ಕೋ.ಲೀ. ನೀರು ಖರ್ಚಾಗಿದೆ. ಪಂಚಾಯತ್ ಗಳಿಗೆ 1 ಸಾವಿರ ಲೀ.ಗೆ 7 ರೂ.ಗಳಂತೆ ದರ ವಿಧಿಸಲಾಗುತ್ತದೆ.
ಸಮಸ್ಯೆಗಳು
ಜಲಸಿರಿ ಯೋಜನೆ ರಾಜ್ಯದಲ್ಲೇ ಮೊದಲ ಬಾರಿ ಕುಂದಾಪುರದಲ್ಲಿ ಪೂರ್ಣವಾದುದೇನೋ ಹೌದು. ಯೋಜನೆ ಜತೆಗೆ ಹೊದ್ದುಕೊಂಡ, ಹೊತ್ತುಕೊಂಡ ಸಮಸ್ಯೆಗಳು ಹಾಗೆಯೇ ಇವೆ. ನೀರಿನ ಬಿಲ್ ಪೂರ್ಣ ವಸೂಲಿಯಾಗದ ಹೊರತು ವಾರ್ಷಿಕ 1.5 ಕೋ.ರೂ.ಗಳನ್ನು ನಿರ್ವಹಣೆಗೆ ನೀಡಲು ಕಷ್ಟವಾಗಲಿದೆ. ಪಂಚಾಯತ್‌ಗಳು ವಸೂಲಿ ಮಾಡಿದ ಬಿಲ್ ಪುರಸಭೆಗೆ ಪಾವತಿಸುವಲ್ಲಿ ಹಿಂದೇಟು ಹಾಕಿದರೂ ಕಷ್ಟ. ಪುರಸಭೆ ವ್ಯಾಪ್ತಿಯಲ್ಲೇ ವಾಣಿಜ್ಯ ಬಳಕೆಯ ಬಿಲ್ ದೊಡ್ಡ ಪ್ರಮಾಣದಲ್ಲಿ ಇರುವುದು ಸಲ್ಲಕ್ಷಣವಲ್ಲ. ಯೋಜನೆ ಆರಂಭದಲ್ಲಿ ಹೇಳಿಕೊಂಡಂತೆ 6 ಸಾವಿರ ನಳ್ಳಿಗಳ ಸಂಪರ್ಕ ಆಗಿಲ್ಲ. 4 ಸಾವಿರವಷ್ಟೇ ಆಗಿದೆ. ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ದುರಸ್ತಿ ಮಾಡಿಲ್ಲ. ನಳ್ಳಿ ಸಂಪರ್ಕ ಕೇಳಿ ತಿಂಗಳು ಕಳೆದರೂ ಕೆಲವೆಡೆ ನೀಡಿಲ್ಲ.
ರಾಜ್ಯದಲ್ಲೇ ಮೊದಲು
4 ವರ್ಷಗಳಲ್ಲಿ ಪೂರ್ಣವಾದ ದೊಡ್ಡ ಮೊತ್ತದ ಈ ಕಾಮಗಾರಿ ರಾಜ್ಯದಲ್ಲಿ ಸ್ಥಳೀಯಾಡಳಿತದ ಮೊದಲ ಯಶಸ್ವಿ ಕಾಮಗಾರಿ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿಶೇಷ ಪ್ರಯತ್ನದಿಂದ ಮಂಜೂರಾದ ಯೋಜನೆಗೆ ಹೆಚ್ಚುವರಿ 7 ಕೋ.ರೂ. ನಗರೋತ್ಥಾನ ಯೋಜನೆಯಿಂದ ಮಂಜೂರಾಗುವಲ್ಲಿಯೂ ಅವರ ಪ್ರಯತ್ನವಿದೆ. ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಮುಖ್ಯಾಧಿಕಾರಿ ಹಾಗೂ ಆಡಳಿತ ಮಂಡಳಿ ಒತ್ತಡ ಹೇರಿದ್ದೇ ಕಾರಣ. ಟ್ರಯಲ್ ರನ್ ಅವಧಿ ಮುಗಿದಿದ್ದು ಕಾಮಗಾರಿಯ ನಿರ್ವಹಣೆಗಾಗಿ ಗುತ್ತಿಗೆದಾರ ಸಂಸ್ಥೆಗೆ ಹಸ್ತಾಂತರವಾಗಲಿದೆ. ಪಂಚಾಯತ್ ಗಳಿಗೆ ನೀಡುವ ನೀರಿಗೆ ಬಲ್ಕ್ಮೀಟರ್ ಅಳವಡಿಸಿದ್ದರಿಂದ ಸೋರಿಕೆ ಪ್ರಮಾಣ ಶೇ.35ರಿಂದ ಶೇ.24ಕ್ಕೆ ಇಳಿಕೆಯಾಗಿದೆ. ಇದು ಆದಾಯ ರೂಪದಲ್ಲಿ ಪ್ರತಿಫಲಿಸಲಿದೆ.ನಿರಂತರ ನೀರು ದೊರೆಯುವ ಕಾರಣ ಸಂಪಿನಲ್ಲಿ ಸಂಗ್ರಹಿಸಿಡಬೇಕಾದ ಅವಶ್ಯವಿಲ್ಲ.
ಪಾವತಿಸಬೇಕು: ಮೊಬೈಲ್ ರೀಚಾರ್ಜ್, ವಿದ್ಯುತ್ ಬಿಲ್, ಟಿವಿ ರಿಚಾರ್ಜ್ ಸಕಾಲದಲ್ಲಿ ಮಾಡುವ ಜನ ನೀರಿನ ಬಿಲ್ 300 ರೂ. ಬಾಕಿ ಇಡುತ್ತಾರೆ ಎಂದರೆ ಆಶ್ಚರ್ಯ. ಸಕಾಲದಲ್ಲಿ ನೀರಿನ ಬಿಲ್ ಪಾವತಿಸಿದರೆ ಅನಿಯತ ನೀರು ನೀಡಲು ಸುಲಭವಾಗುತ್ತದೆ. ಆದ್ದರಿಂದ ಬಾಕಿ ಇರುವವರು ಕಾನೂನು ಕ್ರಮಕ್ಕೆ ಮುಂದಾಗುವ ಮುನ್ನ ಪಾವತಿಸಿದರೆ ಉತ್ತಮ. –ಮೋಹನದಾಸ ಶೆಣೈ ಹಿರಿಯ ಸದದ್ಯರು, ಪುರಸಭೆ
ಪೂರ್ಣವಾಗಿದೆ: ಶಾಸಕರ ಹಾಗೂ ಆಡಳಿತ ಮಂಡಳಿಯ ಪ್ರಯತ್ನದಿಂದ ಜಲಸಿರಿ ಯೋಜನೆ ರಾಜ್ಯದಲ್ಲಿ ಮೊದಲು ಪೂರ್ಣವಾದುದು ಕುಂದಾಪುರದಲ್ಲಿ. ಬಾಕಿ ಬಿಲ್ ವಸೂಲಿಗೆ ಕ್ರಮ ವಹಿಸಲಾಗಿದ್ದು ಈಗಾಗಲೇ 72 ಲಕ್ಷ ರೂ. ಬಿಲ್ ವಸೂಲಾಗಿದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ
-ಲಕ್ಷ್ಮೀ ಮಚ್ಚಿನ