ಈ ಹಿಂದೆ ಶುದ್ಧಿ ಎಂಬ ಸಿನೆಮಾ ಮಾಡಿದ್ದ ಆದರ್ಶ್ ಈಶ್ವರಪ್ಪ , ಕೆಲವು ತಿಂಗಳ ಹಿಂದೆ ಭಿನ್ನ ಎಂಬ ಚಿತ್ರ ಮಾಡುವುದಕ್ಕೆ ಆಡಿಷನ್ ಇಟ್ಟುಕೊಂಡಿದ್ದರು. ಅದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದಕ್ಕೆ ಹಲವು ಹುಡುಗಿಯರನ್ನು ಆಡಿಷನ್‌ಗೆ ಕರೆದಿದ್ದರು. ಆ ಆಡಿಷನ್‌ನಲ್ಲಿ ಆಯ್ಕೆಯಾದವರೇ ಪಾಯಲ್ ರಾಧಾಕೃಷ್ಣ. ಈ ಹೆಸರು ಎಲ್ಲೋ ಕೇಳಿದ ಹಾಗಿದೆ ಅಂದನಿಸಬಹುದು. ಅದು ಸಹಜ. ಒಂದೆರಡು ವರ್ಷಗಳ ಹಿಂದೆ, ಇದೇ ಪಾಯಲ್, ಆದಿತ್ಯ ಅಭಿನಯದ ಬೆಂಗಳೂರು ಅಂಡರ್‌ವರ್ಲ್ಡ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದೊಂದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನೆಮಾ. ಹಾಗಾಗಿ, ಪಾಯಲ್ ನಟನೆಗೆ ಅಲ್ಲಿ ಹೇಳಿಕೊಳ್ಳುವಂತಹ ಅವಕಾಶವಿರಲಿಲ್ಲ. ಅಷ್ಟೇ ಅಲ್ಲ, ಆ ಚಿತ್ರದ ನಂತರ ಬೇರೆ ಯಾವ ಚಿತ್ರಗಳಲ್ಲೂ ಪಾಯಲ್ ಕಾಣಿಸಿಕೊಳ್ಳಲಿಲ್ಲ. ಈಗ ಭಿನ್ನ ಚಿತ್ರದ ಮೂಲಕ ಪಾಯಲ್ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.
ಸಾಮಾನ್ಯವಾಗಿ ನಟೀಮಣಿಯರು ನಾಯಕಿ ಪ್ರಧಾನ ಚಿತ್ರ ಮಾಡೋದು ಚಿತ್ರರಂಗಕ್ಕೆ ಬಂದು ಐದಾರು ವರ್ಷವಾದ ಮೇಲೆ ಎಂಬ ಮಾತು ಚಿತ್ರರಂಗದಲ್ಲಿದೆ. ಆದರೆ, ಪಾಯಲ್ ಮಾತ್ರ ಅದಕ್ಕೆ ತದ್ವಿರುದ್ಧ. ತಮ್ಮ ಎರಡನೆಯ ಚಿತ್ರಕ್ಕೇ ಅವರು ಮಹಿಳಾ ಪ್ರಧಾನ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾತನಾಡುವ ಅವರು, “ನಾನು ಕಥೆ ಹಾಗೂ ಪಾತ್ರವನ್ನಷ್ಟೇ ನೋಡುತ್ತೇನೆ. ನನಗೆ ಯಾವುದೇ ಒಂದು ಜಾನರ್‌ನಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಅದೇ ಕಾರಣದಿಂದ ಮೊದಲ ಸಿನೆಮಾ ಕಮರ್ಷಿಯಲ್ ಆದರೆ, ಎರಡನೆಯದಾಗಿ ಬ್ರಿಡ್ಜ್ ಸಿನಿಮಾ ಆಯ್ಕೆ ಮಾಡಿಕೊಂಡೆ. ಹಾಗಂತ ಮುಂದೆ ನಾನು ಈ ತರಹದ್ದೇ ಸಿನೆಮಾ ಮಾಡುವುದಿಲ್ಲ. ಇನ್ನೊಂದು ಕಮರ್ಷಿಯಲ್ ಸಿನೆಮಾದಲ್ಲಿ ನಟಿಸುತ್ತೇನೆ. ನನಗೆ ಗ್ಲಾಮರಸ್ ಆಗಿ, ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ. ಆದರೆ, ಮಾಡುವ ಪಾತ್ರ ಭಿನ್ನವಾಗಿರಬೇಕು. ಅದು ಜನರಿಗೆ ಕನೆಕ್ಟ್ ಆಗಬೇಕೆಂದಷ್ಟೇ ನೋಡುತ್ತೇನೆ’ ಎನ್ನುತ್ತಾರೆ ಪಾಯಲ್.
ಭಿನ್ನ ಚಿತ್ರದಲ್ಲಿ ಪಾಯಲ್, ಕಾವೇರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಹಂಬಲ ಹೊಂದಿರುವ ನಟಿಯೊಬ್ಬಳು ಹೊಸ ಚಿತ್ರವನ್ನು ಒಪ್ಪಿಕೊಳ್ಳುತ್ತಾಳೆ. ಆ ಚಿತ್ರದ ಕಥೆಯನ್ನು ಓದಲು ಊರಾಚೆಯ ಮನೆಯೊಂದನ್ನು ಸೇರುತ್ತಾಳೆ. ಆ ಕಥೆಯಲ್ಲಿರುವ ಘಟನೆಗಳು ಕ್ರಮೇಣ ಆಕೆಯ ಸುತ್ತ ನಡೆಯಲಾರಂಭವಾಗುತ್ತದೆ. ಜೊತೆಗೆ ಆಕೆಯ ನಿಜಜೀವನಕ್ಕೂ ಸಿನೆಮಾದ ಕಥೆಗೂ ಸಾಮ್ಯ ಇರುವುದು ಅವಳ ಅರಿವಿಗೆ ಬರುತ್ತಾ ಹೋಗುತ್ತದೆ. ಈ ಅಂಶದೊಂದಿಗೆ ಭಿನ್ನ ಸಾಗುತ್ತದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಮೂಲತಃ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಯಲ್, ಬೆಂಗಳೂರು, ಮುಂಬೈ, ಚೆನ್ನೈನಲ್ಲಿ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡವರು. ಪಿಯುಸಿ ಓದುತ್ತಿದ್ದಾಗಲೇ ಮಾಡೆಲಿಂಗ್‌ನಲ್ಲಿ ಬಿಝಿಯಾದ ಕಾರಣ ಪಾಯಲ್, ಇಂಜಿನಿಯರಿಂಗ್ ಮಾಡುವ ಕನಸನ್ನು ಬದಿಗೊತ್ತಿದರಂತೆ. ಮಾಡೆಲಿಂಗ್‌ನಲ್ಲಿ ಬಿಝಿಯಾದ ಅವರಿಗೆ ಬೆಂಗಳೂರು ಅಂಡರ್‌ವರ್ಲ್ಡ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ನಂತರದ ದಿನಗಳಲ್ಲಿ ನಟನೆಯನ್ನು ಕೆರಿಯರ್ ಆಗಿ ಸ್ವೀಕರಿಸಲು ನಿರ್ಧರಿಸಿದ ನಂತರ, ಅವರು ಮುಂಬೈಗೆ ಹೋಗಿ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಒಂದು ಕಡೆ ತರಬೇತಿ, ಇನ್ನೊಂದು ಕಡೆ ಮಾಡಲಿಂಗ್ ಅಂತ ಬಿಝಿ ಇದ್ದ ಪಾಯಲ್, ಈಗ ಬಿಂಬ ಮುಗಿಸಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಅವರು, “ಅದೊಂದು ಹೊಸ ಹೊಸ ಶೈಲಿಯ ಸಿನೆಮಾ. ಈಗಷ್ಟೇ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿಗೆ ಈ ತರಹದ ಪಾತ್ರಗಳು ಸಿಗೋದು ಅಪರೂಪ. ಆದರೆ ನನಗೆ ಸಿಕ್ಕಿದ್ದು ಅದೃಷ್ಟ ಎನ್ನಬಹುದು. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿರುವ ವಿಶ್ವಾಸವಿದೆ’ ಎನ್ನುತ್ತಾರೆ.