ಹುಕ್ಕೇರಿ: ಗ್ರಾಹಕರು ಹಲವಾರು ವರ್ಷಗಳಿಂದ ಮನೆ, ವಾಣಿಜ್ಯ ಮಳಿಗೆಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಬೇಗನೆ ಬಿಲ್ ಸಂದಾಯ ಮಾಡಿ ಸಂಘದ ಏಳಿಗೆಗೆ ಸಹಕಾರ ನೀಡಬೇಕೆಂದು ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವತಿಯಿಂದ ನೂತನ 63 ಕೆವಿಎ ವಿದ್ಯುತ್ ಪರಿರ್ವಕ ಉದ್ಘಾಟಿಸಿ ಮಾತನಾಡಿದರು.
ವಿದ್ಯುತ್ ಬಾಕಿ ಉಳಿಸಿದ 4308 ಗ್ರಾಹಕರಿಗೆ ತಾಲೂಕಾ ಕಾನೂನು ಸೇವಾ ಸಮಿತಿ ಮುಖಾಂತರ ಎರಡು ಬಾರಿ ನೋಟಿಸು ನೀಡಲಾಗಿದೆ. ಆದರೂ ಕೂಡ ಬಿಲ್ ಸಂದಾಯ ಮಾಡಿರುವುದಿಲ್ಲ. ಹುಕ್ಕೇರಿ ನ್ಯಾಯಾಲಯದಲ್ಲಿ ಜೂ. 4ರಿಂದ 25 ರವರೆಗೆ ನಡೆಯಲಿರುವ ಲೋಕ ಅದಾಲತ್‌ದಲ್ಲಿ ಹಾಜರಾಗಿ ವಿದ್ಯುತ್ ಬಿಲ್‌ಗೆ ವಿಧಿಸಿದ ಬಡ್ಡಿ ರಿಯಾಯಿತಿ ಸೌಲಭ್ಯ ಪಡೆದು ಹಣ ಭರಣಾ ಮಾಡುವುದರ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ರೈತರು ಅನಧಿಕೃತವಾಗಿ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳುವುದರಿಂದ ವಿದ್ಯುತ್ ಪೂರೈಸುವ ಟಿಸಿಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಟಿಸಿಗಳು ಹಾನಿಗೀಡಾಗುವುದರ ಜತೆಗೆ ಇನ್ನೂಳಿದ ರೈತರು ತೊಂದರೆ ಅನುಭವಿಸಬೇಕಾಗುತ್ತಿದೆ. ರೈತರು ಅಧಿಕೃತ ಜೋಡಣೆ ಪಡೆದುಕೊಂಡಲ್ಲಿ ವಿದ್ಯುತ್ ಪೂರೈಸುವ ಟಿಸಿ ಸಾಮರ್ಥ್ಯಕ್ಕೆ ಅನುಸಾರವಾಗಿ ಮತ್ತಷ್ಟು ಹೆಚ್ಚು ಹೊಸ ಟಿಸಿಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ ಎಂದು ರೈತರಿಗೆ ಕಿವಿಮಾತು ಹೇಳಿದರು.
ಮುಖಂಡರಾದ ಆನಂದ ದಪ್ಪಾದುಳಿ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಮಾಯಪ್ಪಗೋಳ, ಸದಸ್ಯ ಸಿದ್ದಪ್ಪಾ ಪೂಜೇರಿ, ಪಿ.ಕೆ.ಪಿ.ಎಸ್ ಅಧ್ಯಕ್ಷ ಕೆ.ಬಿ.ಪಾಟೀಲ, ಗ್ರಾಮದ ಹಿರಿಯರಾದ ಪಿ.ಡಿ. ಚೌಗಲಾ, ಮಾಯಪ್ಪಾ ಹೊಳೆಪ್ಪಗೊಳ, ಶಾಂತಿನಾಥ ಚೌಗಲಾ, ಬೀರಪ್ಪಾ ನರಸಗೋಳ, ಜಯಪಾಲ ಚೌಗಲಾ, ಆನಂದ ಚೌಗಲಾ ಮತ್ತು ಬಸವರಾಜ ದೇಸಾಯಿ, ಸಂಘದ ಸ್ಥಾನಿಕ ಅಭಿಯಂತರ ನೇಮಿನಾಥ ಖೇಮಲಾಪುರೆ, ಶಾಖಾಧಿಕಾರಿ ಮನೋಜಕುಮಾರ ಕಾರಾಡೆ, ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.