Advertisement

ವೇತನ ವಿಳಂಬ; ಸಾರಿಗೆ ಸಿಬ್ಬಂದಿ ಪರದಾಟ

05:14 PM Jun 12, 2020 | Suhan S |

ಚಿಕ್ಕೋಡಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಮರ್ಪಕ ವೇತನ ಸಿಗದೆ ಸಂಸ್ಥೆ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಲಾಕ್‌ಡೌನ್‌ ಸಡಿಲಿಕೆಯಾದರೂ ಅಂತಾರಾಜ್ಯ ಕಾರ್ಯಾಚರಣೆಗೆ ಅನುಮತಿ ದೊರೆಯದ ಕಾರಣ ವಾಕರಸಾ ಸಂಸ್ಥೆ ಚಿಕ್ಕೋಡಿ ವಿಭಾಗವು ನಿತ್ಯ 50 ಲಕ್ಷ ರೂ. ನಷ್ಟ ಅನುಭವಿಸುತ್ತಿದೆ. ಸಂಸ್ಥೆಯು ಆರ್ಥಿಕವಾಗಿ ಸುಧಾರಿಸುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಲಾಕ್‌ ಡೌನ್‌ ಸಡಿಲಿಕೆಗೊಂಡು ಎರಡು ವಾರ ಕಳೆಯುತ್ತಾ ಬಂದರೂ ಪ್ರಯಾಣಿಕರ ಹೆಚ್ಚಿನ ಪ್ರತಿಕ್ರಿಯೆ ಕಂಡುಬರುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಎರಡು ತಿಂಗಳು ಬಸ್‌ ಸಂಚಾರ ಬಂದ್‌ ಮಾಡಲಾಗಿತ್ತು. ಮತ್ತೆ ಬಸ್‌ ಸಂಚಾರ ಆರಂಭ ಮಾಡಲಾಗಿದೆ. ಲಾಕ್‌ಡೌನ್‌ ಮುಂಚೆ ಸಂಸ್ಥೆಗೆ ನಿತ್ಯ ಸುಮಾರು 65 ಲಕ್ಷ ರೂ. ವರಮಾನ ಬರುತ್ತಿತ್ತು. ಈಗ 12ರಿಂದ 13 ಲಕ್ಷದವರೆಗೆ ಆದಾಯ ಬರುತ್ತಿದೆ. ಇದರಿಂದಾಗಿ ವಿಭಾಗವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪ್ರಸ್ತುತ ಬರುತ್ತಿರುವ ಆದಾಯ ಡೀಸೆಲ್‌ ವೆಚ್ಚಕ್ಕೂ ಸಾಲುತ್ತಿಲ್ಲ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.

ವೇತನ ಇಲ್ಲದೆ ಪರದಾಟ :  ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಸಿಬ್ಬಂದಿಗೆ ಸಮರ್ಪಕ ವೇತನ ಲಭಿಸುತ್ತಿಲ್ಲ. ಕಳೆದ ತಿಂಗಳು ತಡವಾಗಿ ವೇತನವಾಗಿದೆ. ಈಗ ತಿಂಗಳ ಮೂರನೇ ವಾರ ಆರಂಭವಾಗುತ್ತ ಬಂದರೂ ವೇತನ ಕೈಗೆ ಸಿಗುತ್ತಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುವ ನಮಗೆ ತೀವ್ರ ಕಷ್ಟವಾಗುತ್ತಿದೆ. ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಜನಪ್ರತಿನಿಧಿ ಗಳು ಗಮನ ಹರಿಸಿ ಶೀಘ್ರವಾಗಿ ವೇತನ ಜಮೆ ಮಾಡಬೇಕೆಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

ಗ್ರಾಮೀಣ ಜನ ಬರ್ತಿಲ್ಲ :  ಸಾರಿಗೆ ಬಸ್‌ ಮೂಲಕ ಗ್ರಾಮೀಣ ಪ್ರದೇಶದ ಜನ ನಗರ ಪ್ರದೇಶ ಕಡೆ ಬಂದರೆ ಮಾತ್ರ ಸಂಸ್ಥೆಗೆ ಆದಾಯ ಹೆಚ್ಚುತ್ತದೆ. ಕೋವಿಡ್ ಸೋಂಕಿನ ಭಯಯಿಂದ ಜನ ಹೊರಬರುವುದು ಕಡಿಮೆ ಮಾಡಿದ್ದಾರೆ. ಪ್ರಸ್ತುತ 632 ಟ್ರಿಪ್‌ಗ್ಳ ಪೈಕಿ ಪ್ರಸ್ತುತ 292 ಟ್ರಿಪ್‌ ಕಾರ್ಯಾಚರಣೆ ನಡೆಯುತ್ತಿದೆ. ನೆರೆಯ ಮಹಾರಾಷ್ಟ್ರಕ್ಕೆ ಸಾಮಾನ್ಯ ದಿನಗಳಲ್ಲಿ 178 ಟ್ರಿಪ್‌ಗ್ಳ ಬಸ್‌ ಓಡಾಟ ನಡೆಸಿ ಪ್ರತಿನಿತ್ಯ 21 ಲಕ್ಷ ಆದಾಯ ಬರುತ್ತಿತ್ತು. ಈಗ ಅಂತಾರಾಜ್ಯ ನಿರ್ಬಂಧ ಇರುವುದರಿಂದ ಬಸ್‌ ಓಡಾಟ ನಿಲ್ಲಿಸಲಾಗಿದೆ. ಅಂತಾರಾಜ್ಯಗಳಿಗೆ ಬಸ್‌ಗಳ ಓಡಾಟ ಆರಂಭವಾದರೆ ಆದಾಯದಲ್ಲಿ ಚೇತರಿಕೆ ಕಂಡು ಬರುತ್ತದೆ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿಗಳು.

ನೀರಸ ಪ್ರತಿಕ್ರಿಯೆ :  ವಾಕರಸಾ ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿ ಚಿಕ್ಕೋಡಿ, ಅಥಣಿ, ಗೋಕಾಕ, ಸಂಕೇಶ್ವರ, ನಿಪ್ಪಾಣಿ ಮತ್ತು ರಾಯಬಾಗ ಘಟಕಗಳು ಬರುತ್ತಿದ್ದು, ಇದರದಲ್ಲಿ ಗೋಕಾಕ ಮತ್ತು ಅಥಣಿ ಘಟಕ ವ್ಯಾಪ್ತಿಯಲ್ಲಿ ಬಸ್‌ ಗಳ ಓಡಾಟ ಸ್ವಲ್ಪಮಟ್ಟಿಗೆ ಪರವಾಗಿಲ್ಲ. ಅದೇ ನಿಪ್ಪಾಣಿ ಮತ್ತು ರಾಯಬಾಗ ಘಟಕಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ನೀರಸವಾಗಿದೆ.

Advertisement

ಕಳೆದ ವಾರಕ್ಕಿಂತ ಈ ವಾರ ಸ್ವಲ್ಪ ಚೇತರಿಕೆ ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶದ ಜನ ಹೊರಬಂದರೆ ಮಾತ್ರ ಹೆಚ್ಚಿನ ಬಸ್‌ ಬಿಡಲು ಅನುಕೂಲವಾಗುತ್ತದೆ. ಅಂತಾರಾಜ್ಯಗೆ ಬಸ್‌ ಸಂಚಾರ ಆರಂಭವಾದರೆ ಸಂಸ್ಥೆಗೆ ಹೆಚ್ಚಿನ ವರಮಾನ ಬರುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಜ್ಯಗಳಿಗೆ ನಿರ್ಬಂಧ ಹೇರಲಾಗಿದೆ. ಮುಂದಿನ ವಾರ ಸಿಬ್ಬಂದಿಗೆ ವೇತನ ಜಮೆ ಮಾಡಲಾಗುತ್ತದೆ. ಶಶಿಧರ, ವಿಭಾಗೀಯ ನಿಯಂತ್ರಣಾಧಿಕಾರಿ, ಚಿಕ್ಕೋಡಿ ವಿಭಾಗ

ಇಲಾಖೆ ಅಧಿಕಾರಿಗಳ ಆದೇಶದ ಅನುಸಾರ ಕರ್ತವ್ಯಕ್ಕೆ ಹಾಜರಾಗಿದ್ದು, ಸಮರ್ಪಕ ವೇತನ ಇಲ್ಲದೆ ಕುಟುಂಬ ನಡೆಸಲು ಹೆಣಗಾಡಬೇಕಿದೆ. ಸಾಲಸೋಲ ಮಾಡಿ ಜೀವನ ನಡೆಸಲಾಗುತ್ತಿದೆ. ಸಂಬಂಧಿ ಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಶೀಘ್ರವಾಗಿ ವೇತನ ಸಿಗುವ ಹಾಗೆ ಕ್ರಮ ಕೈಗೊಳ್ಳಬೇಕು. ಹೆಸರು ಹೇಳಲಿಚ್ಛಿಸದ ಸಾರಿಗೆ ಸಂಸ್ಥೆ ಸಿಬ್ಬಂದಿ

 

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next