ಮೂಡಬಿದಿರೆ: ಕೇಂದ್ರ ಸರಕಾರದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೂ ಅನ್ವಯಿಸಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಮೂಡಬಿದಿರೆ ತಹಶೀಲ್ದಾರ್ ಕಚೇರಿ ಎದುರು ಬುಧವಾರ ರಾಜ್ಯ
ಸರಕಾರಿ ನೌಕರರು ಪ್ರತಿಭಟನೆ ನಡೆಸಿದರು.
ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ನಾಗೇಶ್ ಎಸ್. ಮಾತನಾಡಿ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಸರಕಾರಿ ನೌಕರರ ವೇತನ ಬಹಳ ಕಡಿಮೆ ಇದೆ. ಈ ತಾರತಮ್ಯ ಹೋಗಲಾಡಿಸಬೇಕಾದರೆ ಕೇಂದ್ರ ಸರಕಾರದ 7ನೇ ವೇತನ ಆಯೋಗದ ವರದಿ ಶೀಘ್ರ ಅನುಷ್ಠಾನವಾಗಬೇಕು. ಜನವರಿಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿರುವುದರಿಂದ ಅದಕ್ಕೂ ಮುಂಚಿತವಾಗಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶೀರೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಬಿದಿರೆ ವಲಯದ ಪ್ರಧಾನ ಕಾರ್ಯದರ್ಶಿ ಮೆಲ್ವಿನ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಾದೇವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜೀವ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಪ್ರಫುಲ್ಲಾ ಎಂ. ಶೆಟ್ಟಿ, ಬಿ.ಆರ್. ಪಿ. ಗೀತಾ ಮತ್ತಿತರರು ಭಾಗವಹಿಸಿದ್ದರು. ತಹಶೀಲ್ದಾರ್ ಮುಹಮ್ಮದ್ ಇಸಾಕ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.