Advertisement

ಸಾಮಾಜಿಕ ಕೊಡುಗೆಯತ್ತ ಗಮನ ನೀಡಿ

02:49 PM Jul 20, 2018 | Team Udayavani |

ದಾವಣಗೆರೆ: ಸರ್ಕಾರಿ ನೌಕರರು ಇಲಾಖಾ ಕೆಲಸ-ಕಾರ್ಯಗಳ ಜೊತೆಗೆ ಸಾಮಾಜಿಕ ಕೊಡುಗೆಯತ್ತ ಗಮನ ನೀಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಸಲಹೆ ನೀಡಿದ್ದಾರೆ.

Advertisement

ಗುರುವಾರ, ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಿಪಿಕ ನೌಕರರ ಸಂಘದಿಂದ ಏರ್ಪಡಿಸಿದ್ದ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸವಲತ್ತು ಪಡೆಯುವಂತಹ ನೌಕರರು ಸಮಾಜಕ್ಕೆ ಏನಾದರೂ ಕಾಣಿಕೆ ನೀಡುವಂತಾಗಬೇಕು ಎಂದು ಆಶಿಸಿದರು. 

ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಅಧಿಕಾರಿಗಳು ಮಾಡಿಕೊಂಡಿರುವ ಸಂಘಗಳು ಸರ್ಕಾರದ ಒಂದು ಭಾಗವೇ ಆಗಿವೆ. ಯಾವ ಉದ್ದೇಶಕ್ಕಾಗಿ ಸಂಘಗಳ ರಚನೆ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಪದಾಧಿಕಾರಿಗಳು, ನೌಕರರು ತಿಳಿದು, ಸಂಘದ ಮೂಲ ಧ್ಯೇಯೋದ್ದೇಶ, ಆಶಯದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು. 

ಸರ್ಕಾರಿ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳು, ನೌಕರರಿಗೆ ಸಂಬಂಧಿಸಿದಂತೆ ನಿಗದಿತ ಕಾಲಾವಧಿಯಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣ ಹಮ್ಮಿಕೊಳ್ಳುವುದರಿಂದ ಇಲಾಖಾ ಕೆಲಸ-ಕಾರ್ಯಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಜಾಗೃತಿ ಮೂಡುತ್ತದೆ. ನೌಕರರು ಸಮಾಜದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಲಿಪಿಕ ನೌಕರರು ಹಾಗೂ ಇತರೆ ನೌಕರರು ಒಟ್ಟಾಗಿ ಜನತೆಗೆ ಸುರಕ್ಷಿತ ಆರೋಗ್ಯ ಸೇವೆ ನೀಡಬೇಕು. ಆರೋಗ್ಯ ಇಲಾಖೆ ನೌಕರರದ್ದು ಒಂದು ರೀತಿಯ ತುರ್ತು ಸೇವೆ ಇದ್ದಂತೆ. ಲಿಪಿಕ ನೌಕರರು ದಿನದ 24 ಗಂಟೆ ಕಾರ್ಯನಿರ್ವಹಿಸದೆ ಇರಬಹುದು. ಆದರೆ, 24 ಗಂಟೆ ನಿರ್ವಹಿಸುವ ಇತರೆ ಸಿಬ್ಬಂದಿಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುವುದು ತುಂಬಾ ಸಂತೋಷದ ವಿಚಾರ. ಆರೋಗ್ಯ ಇಲಾಖೆಯ ನೌಕರರಲ್ಲಿ ಹೆಚ್ಚಿನ ಪ್ರಾಮಾಣಿಕತೆ ಅಗತ್ಯ. ಅಗತ್ಯವಾದ ಸಂದರ್ಭದಲ್ಲಿ ನಿಗದಿತ ಸಮಯ ಕೆಲಸ
ಮಾಡಬೇಕು ಎಂದರು.

Advertisement

ಪ್ರಾಸ್ತಾವಿಕ ಮಾತುಗಳಾಡಿದ ಸಂಘದ ಗೌರವ ಅಧ್ಯಕ್ಷ ನಿಜಲಿಂಗಪ್ಪ, ಸಂಘ ನೌಕರರ ಹಿತರಕ್ಷಣೆಯ ಜೊತೆಗೆ ಇಲಾಖೆ, ಜಿಲ್ಲಾಡಳಿತ, ಆಸ್ಪತ್ರೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ನೌಕರರ ಅನುಕೂಲಕ್ಕಾಗಿ ವಿಶೇಷ ಕಾರ್ಯಾಗಾರ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು. 

ಮಾಹಿತಿ ಹಕ್ಕು ಕಾಯ್ದೆ ವಿಷಯ…
ಕಾಚಾಪುರ ರಂಗಪ್ಪ ಉಪನ್ಯಾಸ ನೀಡಿದರು. ಲಿಪಿಕ ನೌಕರರ ಸಂಘದ ಅಧ್ಯಕ್ಷ ಎಸ್‌. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ, ಲಿಪಿಕ ನೌಕರರ ಸಂಘದ ಕಾರ್ಯಾಧ್ಯಕ್ಷ ಎ. ಪುಟ್ಟಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್‌. ಹಾಲೇಶಪ್ಪ, ಆರ್‌. ಶ್ರೀನಿವಾಸ್‌, ಕೆ.ಎಂ. ಪುರುಷೋತ್ತಮ, ಜಯಪ್ರಕಾಶ್‌, ಗಂಗಾಧರ, ಶಿವಾಜಿರಾವ್‌ ಇತರರು ಇದ್ದರು. ರಾಮಾಚಾರ್‌ ಪ್ರಾರ್ಥಿಸಿದರು. ವೆಂಕಟೇಶ್‌ ಸ್ವಾಗತಿಸಿದರು. ಡಾ| ಆನಂದ ಋಗ್ವೇದಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next