ತುಮಕೂರು: ಸ್ಥಳೀಯ ಸರ್ಕಾರ ರಚನೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಿದೆ. ಗ್ರಾಪಂ, ತಾಪಂ ಮತ್ತು ಜಿಪಂ ಗ್ರಾಮೀಣ ಪ್ರದೇಶಗಳ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ಇತ್ತೀಚೆಗೆ ಪಂಚಾಯಿತಿ ಆಡಳಿತವ್ಯವಸ್ಥೆಯಲ್ಲಿ ಈವರೆಗೆ ಪ್ರಮುಖ ಸ್ಥಾನ ಪಡೆದಿರುವ ತಾಪಂ, ಅನುದಾನ ಕೊರತೆಯಿಂದ ಹಲ್ಲು ಕಿತ್ತ ಹಾವಿನಂತಾಗಿದೆ.
ಹೌದು, ಈಗಾಗಲೇ ಗ್ರಾಪಂ ಚುನಾವಣೆ ಮುಗಿದಿದೆ. ಇನ್ನೇನು ತಾಪಂ, ಜಿಪಂ ಚುನಾವಣೆಗಳು ನಡೆಯ ಬೇಕಿದೆ. ಈ ವೇಳೆಯಲ್ಲಿ ಪಂಚಾಯಿತಿ ಆಡಳಿತದ ವ್ಯವಸ್ಥೆ ಬಗ್ಗೆ ವ್ಯಾಪಕ ಚರ್ಚೆಗಳು ಕೇಳಿಬರುತ್ತಿದ್ದು, ತಾಪಂ ಆಡಳಿತ ಬೇಕೇ, ಬೇಡವೇ ಎನ್ನುವ ಚರ್ಚೆ ಆರಂಭಗೊಂಡಿದೆ. ಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆಯೂ ಇದೆ. ಈಗಾಗಲೇ ಚುನಾವಣಾ ಆಯೋಗ ಜಿಪಂ ಮತ್ತು ತಾಪಂ ಚುನಾವಣೆ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಕ್ಷೇತ್ರ ಪುನರ್ ವಿಂಗಡಣೆ ನಡೆದಿದೆ. ಗ್ರಾಮಗಳು ಅಭಿವೃದ್ಧಿಯಾಗ ಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ಅಧಿಕಾರ ಇರಬೇಕು ಎನ್ನುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಜಿಲ್ಲಾ ಪರಿಷತ್ ಜಿಲ್ಲಾ ಮಟ್ಟದಲ್ಲಿ ಮಂಡಳ ಪಂಚಾಯಿತಿಗಳು ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದವು. ಜಿಲ್ಲಾ ಪರಿಷತ್ ಹಾಗೂ ಮಂಡಲ್ ಪಂಚಾಯಿತಿ ನಡುವೆ ಸೇತುವೆಯಾಗಿ ತಾಲೂಕು ಅಭಿವೃದ್ಧಿ ಅಧಿಕಾರಿ ಕೆಲಸ ನಿರ್ವಹಿಸುತ್ತಿದ್ದರು.
ತಾಪಂ ಅಧ್ಯಕ್ಷರಿಗೆ ಹೆಚ್ಚು ಅಧಿಕಾರ: ಜಿಲ್ಲಾ ಪರಿಷತ್ ಹೋಗಿ ಪಂಚಾಯತ್ ರಾಜ್ ವ್ಯವಸ್ಥೆ ಬಂದು ಜಿಪಂ, ತಾಪಂ ಮತ್ತು ಗ್ರಾಪಂ ಕಾರ್ಯಾರಂಭಗೊಂಡವು. ಗ್ರಾಪಂ ಆಡಳಿತದ ವೈಖರಿ ಬಗ್ಗೆ ನಿಗಾ ಇಡುವ ಅಧಿಕಾರ ತಾಪಂಗಳಿಗೆ ಇತ್ತು. ಜೊತೆಗೆ, ವಿವಿಧ ಅನುದಾನಗಳು ಬಂದು ತಾಪಂ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲು ಅನುವಾಗಿತ್ತು. ಅನುದಾನ ಬಳಸಿ ಕೊಂಡು ತಾಪಂ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿತ್ತು.ತಾಪಂ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಪ್ರತಿ ತಿಂಗಳು 5ನೇ ತಾರೀಖೀನಂದು ತಾಲೂಕು ಅಧಿಕಾರಿಗಳ ಪ್ರಗತಿ ಬಗ್ಗೆ ಪರಿಶೀಲಿಸಲು, ಕೆಡಿಪಿ ಸಭೆ ನಡೆಸುವ ಅಧಿಕಾರ ಅಧ್ಯಕ್ಷರಿಗೆ ಇದೆ. ಜೊತೆಗೆ, ಗ್ರಾಪಂ ಆಡಳಿತ ವೈಖರಿ ಬಗ್ಗೆ ನಿಗಾವಹಿಸುವ ಅಧಿಕಾರ ತಾಲೂಕು ಪಂಚಾ ಯಿತಿಗಳಿಗೆ ಇದ್ದು, ಗ್ರಾಪಂ ಮತ್ತು ಜಿಪಂ ನಡುವೆ ಸೇತುವೆಯಾಗಿ ತಾಪಂ ಕಾರ್ಯನಿರ್ವ ಹಿಸುತ್ತಿರುವುದರಿಂದ ತಾಪಂ ಇರಬೇಕು. ಅದನ್ನು ಬಲಿಷ್ಠಗೊಳಿಸಬೇಕು ಎಂಬ ಮಾತು ಕೇಳಿಬರುತ್ತಿದೆ.
ತಾಪಂಗಳಿಗೆ ಈ ಹಿಂದೆ ಹೆಚ್ಚಿನ ಅನುದಾನ ಬರುತ್ತಿತ್ತು. ಈಗ ಯಾವುದೇ ಅನುದಾನ ಬರುತ್ತಿಲ್ಲ. ಬರುತ್ತಿರುವ ಅನುದಾನವೂ ಕಡಿಮೆ. ತಾಪಂ ಸದಸ್ಯರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸಮಾಡಲು ಸಾಧ್ಯವಾಗದ ಸ್ಥಿತಿ ಇದೆ. ತಾಪಂಗಳಿಗೆ ಹೆಚ್ಚಿನ ಅನುದಾನ ನೀಡಿ, ಅಧಿಕಾರ ನೀಡಬೇಕು. ಸರ್ಕಾರ ಇದನ್ನು ನೀಡದಿದ್ದರೆ, ತಾಪಂಗಳ ಅವಶ್ಯಕತೆಗಳು ಇಲ್ಲ ಎನ್ನುವ ವಾದವೂ ಇದೆ.