Advertisement

ತವರಿನಲ್ಲಿ ಮತ್ತೆ ಪಾಟ್ನಾಗೆ ಆಘಾತಕಾರಿ ಸೋಲು

09:00 AM Oct 31, 2018 | Team Udayavani |

ಪಾಟ್ನಾ: ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡ ತವರಿನ ಚರಣದಲ್ಲಿ ಸೋಲು ಕಾಣುತ್ತಿದೆ. ರವಿವಾರ ಹರಿಯಾಣ ವಿರುದ್ಧ ಸೋತಿದ್ದ ಪಾಟ್ನಾ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ಗೆ 53-32 ಅಂಕಗಳ ಭಾರೀ ಅಂತರದಿಂದ ಶರಣಾಯಿತು. 

Advertisement

ರಾಹುಲ್‌ ಚೌಧರಿ ಅವರ ಭರ್ಜರಿ ರೈಡಿಂಗ್‌ನಿಂದಾಗಿ ತೆಲುಗು ಭಾರೀ ಮುನ್ನಡೆ ಪಡೆಯಿತು. ಪಾಟ್ನಾದ ಪರ್‌ದೀಪ್‌ ನರ್ವಾಲ್‌ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ಮೊದಲ ಅವಧಿಯ ಆಟ ಮುಗಿದಾಗ ತೆಲುಗು 25-17ರಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯ ಅವಧಿಯಲ್ಲೂ ತೆಲುಗು ಅಮೋಘವಾಗಿ ಆಡಿತು. ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗೆಲುವು ಒಲಿಸಿಕೊಂಡಿತು. ಇದು ತೆಲುಗು ಆಡಿದ ಆರನೇ ಪಂದ್ಯದಲ್ಲಿ ದಾಖಲಿಸಿದ ನಾಲ್ಕನೇ ಗೆಲುವು ಆಗಿದ್ದರೆ ಪಾಟ್ನಾ ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಜಯ ಸಾಧಿಸಲಷ್ಟೇ ಶಕ್ತವಾಗಿದೆ.

23 ಬಾರಿ ಎದುರಾಳಿ ಅಂಕಣಕ್ಕೆ ದಾಳಿ ನಡೆಸಿದ ಚೌಧರಿ ಗರಿಷ್ಠ 17 ಅಂಕ ಸಂಪಾದಿಸಿ ತಂಡದ ಭಾರೀ ಗೆಲುವಿಗೆ ಕಾರಣರಾದರು. ವಿಶಾಲ್‌ ಭಾರದ್ವಾಜ್‌ ಟ್ಯಾಕಲ್‌ನಲ್ಲಿ 9 ಅಂಕ ಪಡೆದರು. ಪಾಟ್ನಾ ಪರ ವಿಕಾಸ್‌ ಜಗ್ಲಾನ್‌ 9 ಅಂಕ ಪಡೆದರೆ ಭಾರೀ ನಿರೀಕ್ಷೆಯ ಪರ್‌ದೀಪ್‌ ಕೇವಲ 4 ಅಂಕ ಗಳಿಸಿದರು.

ಗುಜರಾತ್‌ ರಕ್ಷಣೆ ಮತ್ತು ಆಕ್ರಮಣ ಎರಡೂ ವಿಭಾಗದಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿತು. ಇದಕ್ಕೆ ಹೋಲಿಸಿದರೆ ಪುಣೇರಿ ಆಟ ಕಳಪೆಯಾಗಿತ್ತು. ಅದು ಎರಡೂ ವಿಭಾಗದಲ್ಲಿ ವಿಫ‌ಲವಾಯಿತು. ಗುಜರಾತ್‌ ಪರ 13 ಬಾರಿ ದಾಳಿ ನಡೆಸಿದ ಸಚಿನ್‌ 10 ಅಂಕ ಗಳಿಸಿದರು. ಇವರಿಗೆ ಉತ್ತಮ ನೆರವು ನೀಡಿದ ಮಹೇಂದ್ರ ರಜಪೂತ್‌ 6 ಅಂಕ ಗಳಿಸಿದರು. ಗುಜರಾತ್‌ ಪರ ರಕ್ಷಣೆಯಲ್ಲಿ ರುತುರಾಜ್‌ ಕೊರವಿ ಮಿಂಚಿ 4 ಅಂಕ ಗಳಿಸಿದರು. ಪುಣೇರಿ ಪರ ನಿತಿನ್‌ ತೋಮರ್‌ ದಾಳಿಯಲ್ಲಿ 6 ಅಂಕ ಗಳಿಸಿದರು. ಉಳಿದ ಆಟಗಾರರು ಅವರ ಸಮಕ್ಕೆ ಬರಲು ಸಾಧ್ಯವಾಗದಿರುವುದು ಸೋಲಿಗೆ ಕಾರಣವಾಯಿತು.

ಗುಜರಾತ್‌ ಜಯಭೇರಿ
ದಿನದ ಮೊದಲ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ 37-27 ಅಂಕಗಳಿಂದ ಪುಣೇರಿ ಪಲ್ಟಾನ್‌ ತಂಡವನ್ನು ಸೋಲಿಸಿದೆ. ಆಡಿರುವ 5 ಪಂದ್ಯದಲ್ಲಿ ಗುಜರಾತ್‌ಗೆ ಇದು 3ನೇ ಜಯ. 1 ಪಂದ್ಯದಲ್ಲಿ ಅದು ಸೋಲನುಭವಿಸಿದ್ದು, 1 ಪಂದ್ಯ ಟೈಗೊಂಡಿದೆ. ಮತ್ತೂಂದು ಕಡೆ 11 ಪಂದ್ಯವಾಡಿರುವ ಪುಣೇರಿ 5 ಗೆಲುವು, 5 ಸೋಲು, 1 ಟೈ ಸಾಧಿಸಿದೆ. ಸದ್ಯ ಅದು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೂ ಈ ಸ್ಥಿತಿ ಹೀಗೆಯೇ ಇರುತ್ತದೆ ಎಂದು ಊಹಿಸಲು ಕಷ್ಟ.

Advertisement
Advertisement

Udayavani is now on Telegram. Click here to join our channel and stay updated with the latest news.

Next