ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸಲು ಮುಂಬೈಗೆ ತೆರಳಿದ್ದ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ ಗೆ ಹಾಕಲಾಗಿದೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಆರೋಪಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆ ಪ್ರಕರಣದ ಕುರಿತಂತೆ ತಂದೆ ಕೆಕೆ ಸಿಂಗ್ ಪಾಟ್ನಾ ಪೊಲೀಸರಿಗೆ ನೀಡಿರುವ ದೂರಿನ ಆಧಾರದ ಮೇಲೆ ತಿವಾರಿ ನೇತೃತ್ವದ ಬಿಹಾರ ಪೊಲೀಸರ ತಂಡ ತನಿಖೆ ನಡೆಸಲು ಮುಂಬೈಗೆ ಆಗಮಿಸಿತ್ತು.
ಈ ಬಗ್ಗೆ ಡಿಜಿಪಿ ಪಾಂಡೆ ಅವರು ಟ್ವೀಟ್ ಮಾಡಿದ್ದು, ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಭಾನುವಾರ (ಆಗಸ್ಟ್ 02-2020) ಬಿಹಾರದಿಂದ ಹೊರಟು ಮುಂಬೈ ತಲುಪಿದ್ದರು. ಆದರೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರಿ 11ಗಂಟೆಗೆ ತಿವಾರಿ ಅವರನ್ನು ಬಲವಂತವಾಗಿ ಕ್ವಾರಂಟೈನ್ ಮಾಡಿರುವುದಾಗಿ” ದೂರಿದ್ದಾರೆ.
ಮತ್ತೊಂದು ವರದಿ ಪ್ರಕಾರ, ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ನಡೆಸದಂತೆ ಬಿಹಾರ ಪೊಲೀಸ್ ಅಧಿಕಾರಿಯನ್ನು ತಡೆಯಲಾಗಿದ್ದು, ಅಲ್ಲದೇ ಐಪಿಎಸ್ ಅಧಿಕಾರಿ ತಿವಾರಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ, ಕ್ವಾರಂಟೈನ್ ಅಲ್ಲ ಎಂದು ತಿಳಿಸಿದೆ.
Related Articles
ತಿವಾರಿ ಅವರು ಮನವಿ ಮಾಡಿಕೊಂಡರೂ ಕೂಡಾ ಅಧಿಕೃತ ವಸತಿ ನೀಡದೇ ಅವರು ಗುರ್ಗಾಂವ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಳ್ಳುವಂತೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಜೂನ್ (2020) 24ರಂದು ಸುಶಾಂತ್ ಸಿಂಗ್ ರಜಪೂತ್ (34ವರ್ಷ) ಬಾಂದ್ರಾ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ತಂದೆ ಕೆಕೆ ಸಿಂಗ್ ಅವರು ಪ್ರಕರಣದ ಬಗ್ಗೆ ಬಿಹಾರದಲ್ಲಿ ಎಫ್ ಐಆರ್ ದಾಖಲಿಸಿದ್ದರು, ಇದರಲ್ಲಿ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.