ಮಹಾನಗರ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಿಲ್ಲಿ ಘಟಕದ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ, ನಾಟ್ಯ ವೈಭವ, ಯಕ್ಷಗಾನ ಬಯಲಾಟ ಮತ್ತು ಸಮ್ಮಾನ ಸಮಾರಂಭ ಕಾರ್ಯಕ್ರಮಗಳ ‘ಪಟ್ಲ ವಿಶ್ವ ಯಕ್ಷ ಸಂಭ್ರಮ’ ನವದಿಲ್ಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಅಳಿಕೆ ರಾಮಯ್ಯ ರೈ ವೇದಿಕೆಯಲ್ಲಿ ಮಂಗಳವಾರ ನಡೆಯಿತು.
ದಿಲ್ಲಿ ಸರಕಾರದ ಜಿಎಸ್‌ಟಿ ಕಮಿಷನರ್ ಹಿರಿಯಡ್ಕ ರಾಜೇಶ್ ಪ್ರಸಾದ್ ಸಮಾರಂಭ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದಿ ವೀಕ್ ಪತ್ರಿಕೆಯ ಸ್ಥಾನೀಯ ಸಂಪಾದಕ ಕೆ.ಎಸ್. ಸಚ್ಚಿದಾನಂದ ಮೂರ್ತಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ದಿಲ್ಲಿ ಶಾಸಕಿ ಪ್ರಮೀಳಾ ಠೊಕಸ್ ಭಾಗವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಟ್ರಸ್ಟ್ ನ ದೆಹಲಿ ಘಟಕದ ಗೌರವಾಧ್ಯಕ್ಷ ಟಿ. ಶಿವ ಪ್ರಸಾದ್ ಶೆಟ್ಟಿ, ದೆಹಲಿ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್‌ನ ಪ್ರೇಮನಾಥ್ ರೈ, ಕರ್ನಾಟಕ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಹಯವದನ ಉಪಾಧ್ಯಾಯ, ಉದ್ಯಮಿ ಶೇಖರ್ ಬಂಗೇರಾ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರವು ಕೃಷ್ಣಭಟ್, ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ. ನಾಗರಾರಿ ಮತ್ತು ಟ್ರಸ್ಟ್‌ನ ವಿವಿಧ ಘಟಕಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಭೀಷ್ಮ ಸೇನಾಧಿಪತ್ಯ ತಾಳಮದ್ದಳೆಯಲ್ಲಿ ಡಾ|ಎಂ. ಪ್ರಭಾಕರ ಜೋಶಿ, ಡಾ| ಪುರುಷೋತ್ತಮ ಬಿಳಿಮಲೆ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಮಾಧವ ಬಂಗೇರ ಅವರು ಅರ್ಥದಾರಿಗಳಾಗಿದ್ದರು. ರಾಕೇಶ್ ಪೂಂಜಾ ಮತ್ತು ಹರ್ಷಿತ್ ಮಾರ್ಲಾ ಅವರು ಸಂಪಾದಿಸಿದ ‘ಪಟ್ಲ ಯಾನ’ ಪುಸ್ತಕವನ್ನು ಮನೀಶ್ ಸಿಸೋಡಿಯಾ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭ ಯಕ್ಷಗಾನ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಡಾ| ಪ್ರಭಾಕರ ಜೋಷಿ, ಉಮೇಶ್ ಶೆಟ್ಟಿ ಉಬರಡ್ಕ ಮತ್ತು ಉದಯೋನ್ಮುಖ ಪ್ರತಿಭೆ ಬಿಂದಿಯಾ ಶೆಟ್ಟಿ ಅವರಿಗೆ ಯಕ್ಷಧ್ರುವ ಪಟ್ಲ ಫೌಂಡೇಷನ್ ದಿಲ್ಲಿ ಘಟಕದಿಂದ ಸಮ್ಮಾನಿಸಲಾಯಿತು.ಟ್ರಸ್ಟ್‌ನ ದಿಲ್ಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಬಾಲಕೃಷ್ಣ ನಾಯ್ಕ ವಂದಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಪೃಥ್ವಿ ಕಾರಿಂಜೆ ನಿರೂಪಿಸಿದರು.