Advertisement

ಉದಾಸಿ ಹ್ಯಾಟ್ರಿಕ್‌ ಕನಸಿಗೆ ಪಾಟೀಲ್‌ ರೋಡ್‌ ಬ್ರೇಕ್‌!

11:28 PM Apr 14, 2019 | Team Udayavani |

ಹಾವೇರಿ: ಉತ್ತರ ಕರ್ನಾಟಕದ ಹೆಬ್ಟಾಗಿಲು ಎನಿಸಿದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌.ಪಾಟೀಲ ನಡುವಿನ ಗುದ್ದಾಟಕ್ಕೆ ಆಖಾಡ ಸಿದ್ಧವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿಕೊಂಡಿವೆ.

Advertisement

ಕಣ ಚಿತ್ರಣ: 2004ರವರೆಗೆ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವಾಗಿದ್ದ ಹಾವೇರಿ, 2009ರಿಂದ ಹಾವೇರಿ ಲೋಕಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಬಳಿಕ ಮೂರನೇ ಚುನಾವಣೆ ಎದುರಿಸುತ್ತಿದೆ. 2009ಕ್ಕಿಂತ ಮುಂಚೆ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು.

ಕ್ಷೇತ್ರದಲ್ಲಿ ಇದುವರೆಗೆ ನಡೆದ ಒಟ್ಟು 16 ಚುನಾವಣೆಗಳಲ್ಲಿ ಕಾಂಗ್ರೆಸ್‌ 12 ಬಾರಿ ಗೆಲುವು ಸಾಧಿ ಸಿದೆ. ಬಿ.ಎಂ.ಮೆಣಸಿನಕಾಯಿ 1998ರಲ್ಲಿ ಲೋಕಶಕ್ತಿ ಪಾರ್ಟಿಯಿಂದ ಸ್ಪ ರ್ಧಿಸಿ, ಕಾಂಗ್ರೆಸ್‌ ಭದ್ರಕೋಟೆಯನ್ನು ಮೊದಲ ಬಾರಿಗೆ ಛಿದ್ರಗೊಳಿಸಿದ್ದರು. ಕ್ಷೇತ್ರದಲ್ಲಿ 2004, 2009 ಹಾಗೂ 2014ರಲ್ಲಿ ನಿರಂತರವಾಗಿ ಕಮಲ ಅರಳಿದೆ.

ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳಿದ್ದಾರೆ. ಹಾಲಿ ಸಂಸದರಾಗಿರುವ ಬಿಜೆಪಿಯ ಶಿವಕುಮಾರ ಉದಾಸಿ ಹ್ಯಾಟ್ರಿಕ್‌ ಸಾಧನೆಗೆ ಹೊರಟಿದ್ದರೆ, ಇದೇ ಮೊದಲ ಬಾರಿಗೆ ಅಖಾಡಕ್ಕಿಳಿದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಿ.ಆರ್‌.ಪಾಟೀಲ, ಬಿಜೆಪಿ ಅಭ್ಯರ್ಥಿಯ ಹ್ಯಾಟ್ರಿಕ್‌ ಗೆಲುವಿಗೆ ಬ್ರೇಕ್‌ ಹಾಕಲು ಮುಂದಾಗಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ಸೆಣಸಾಡಿದ್ದ ಬಿಜೆಪಿ, ಈ ಬಾರಿ ಹಿಂದೂ ಅಭ್ಯರ್ಥಿಯನ್ನು ಎದುರಿಸಬೇಕಾಗಿದ್ದು, ಬಣಜಿಗ ಲಿಂಗಾಯತ (ಶಿವಕುಮಾರ ಉದಾಸಿ) ಹಾಗೂ ರಡ್ಡಿ ಲಿಂಗಾಯತ (ಡಿ.ಆರ್‌. ಪಾಟೀಲ) ಅಭ್ಯರ್ಥಿ ನಡುವೆ ಪೈಪೋಟಿ ನಡೆಯಲಿದೆ.

Advertisement

ಎಚ್ಕೆ-ಬೊಮ್ಮಾಯಿಗೆ ಪ್ರತಿಷ್ಠೆ: ಬಿಜೆಪಿ, ಕ್ಷೇತ್ರದ ಉಸ್ತುವಾರಿಯನ್ನು ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿಗೆ ನೀಡಿದ್ದು, ಕ್ಷೇತ್ರದ ಗೆಲುವು ಬೊಮ್ಮಾಯಿಗೆ ಪ್ರತಿಷ್ಠೆಯ ವಿಷಯವಾಗಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಕ್ಷದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅವರು ಹವಣಿಸುತ್ತಿದ್ದಾರೆ.

ಇನ್ನು, ಕಾಂಗ್ರೆಸ್‌ನಲ್ಲಿ ಸಹೋದರ ಸಂಬಂಧಿಯಾದ ಡಿ.ಆರ್‌.ಪಾಟೀಲಗೆ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಾಜಿ ಸಚಿವ, ಶಾಸಕ ಎಚ್‌.ಕೆ.ಪಾಟೀಲಗೆ ಇದು ಪ್ರತಿಷ್ಠೆಯ ಕಣವಾಗಿದೆ. ಕ್ಷೇತ್ರದ ಗೆಲುವು ಎಚ್‌.ಕೆ.ಪಾಟೀಲರಿಗೆ ರಾಜಕೀಯವಾಗಿ ಅಷ್ಟೇ ಅಲ್ಲ, ಕೌಟುಂಬಿಕವಾಗಿಯೂ ಪ್ರತಿಷ್ಠೆಯ ವಿಚಾರವಾಗಿದೆ. ಹೀಗಾಗಿ, ಇಬ್ಬರೂ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿಕೊಂಡಿದ್ದಾರೆ.

ನಿರ್ಣಾಯಕ ಅಂಶ: ಕ್ಷೇತ್ರದಲ್ಲಿ ಲಿಂಗಾಯತ, ಪರಿಶಿಷ್ಟ, ಕುರುಬ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕ. ಕಾಂಗ್ರೆಸ್‌ ಈ ಮೊದಲು ಕ್ಷೇತ್ರವನ್ನು ಮುಸ್ಲಿಂ ಅಲ್ಪಸಂಖ್ಯಾತರ ಕ್ಷೇತ್ರವನ್ನಾಗಿಸಿಕೊಂಡು ಬಂದಿತ್ತು. 56 ವರ್ಷಗಳ ಬಳಿಕ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಹೀಗಾಗಿ, ಹಿಂದೂ-ಮುಸ್ಲಿಂ ಅಭ್ಯರ್ಥಿ ಎಂಬ ಸ್ಪರ್ಧೆಗೆ ತೆರೆ ಬೀಳಲಿದ್ದು, ಹಿಂದೂ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಬಣಜಿಗ ಲಿಂಗಾಯತ. ಕಾಂಗ್ರೆಸ್‌ ಅಭ್ಯರ್ಥಿ ರಡ್ಡಿ ಲಿಂಗಾಯತ ಆಗಿರುವುದರಿಂದ ಈ ಬಾರಿ ಲಿಂಗಾಯತ ಅಭ್ಯರ್ಥಿಗಳ ನಡುವೆ ಸೆಣಸಾಟ ನಡೆಯಲಿದೆ.

ಪಂಚಮಸಾಲಿ, ಸಾದರ, ಬಣಜಿಗ ಸೇರಿದಂತೆ ಎಲ್ಲ ಉಪಪಂಗಡಗಳನ್ನು ಒಟ್ಟಾಗಿಸಿದರೆ ಲಿಂಗಾಯತರೇ ಬಹುಸಂಖ್ಯಾತರು. ಈ ಮತಗಳು ಈ ಬಾರಿ ಎರಡೂ ಕಡೆ ವಿಭಜನೆಯಾಗಲಿವೆ. ಪರಿಶಿಷ್ಟ, ಕುರುಬ ಹಾಗೂ ಮುಸ್ಲಿಂ ಮತಗಳು ಎತ್ತ ಹೆಚ್ಚು ವಾಲುತ್ತವೆಯೋ ಆ ಅಭ್ಯರ್ಥಿ ಗೆಲುವು ಸಾಧಿ ಸುತ್ತಾನೆ.

ಕ್ಷೇತ್ರವ್ಯಾಪ್ತಿ: ಹಾವೇರಿ ಲೋಕಸಭಾ ಕ್ಷೇತ್ರ ಹಾವೇರಿ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಗದಗ ಜಿಲ್ಲೆಯ ಶಿರಹಟ್ಟಿ, ಗದಗ ಮತ್ತು ರೋಣ ವಿಧಾನಸಭಾ ಕ್ಷೇತ್ರಗಳು, ಹಾವೇರಿ ಜಿಲ್ಲೆಯ ಹಾವೇರಿ, ಬ್ಯಾಡಗಿ, ಹಿರೇಕೆರೂರು, ರಾಣಿಬೆನ್ನೂರು, ಹಾನಗಲ್ಲ ವಿಧಾನಸಭಾ ಕ್ಷೇತ್ರಗಳು ಕ್ಷೇತ್ರವ್ಯಾಪ್ತಿಗೆ ಸೇರುತ್ತವೆ.

ಹಾನಗಲ್ಲ, ಹಾವೇರಿ, ಬ್ಯಾಡಗಿ, ರೋಣ, ಶಿರಹಟ್ಟಿಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಗದಗ ಹಾಗೂ ಹಿರೇಕೆರೂರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ರಾಣಿಬೆನ್ನೂರಿನಲ್ಲಿ ಪಕ್ಷೇತರ ಶಾಸಕ ಆರ್‌.ಶಂಕರ್‌, ಈಗಾಗಲೇ ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದು, ನಿರ್ಧಾರ ಪ್ರಕಟಿಸಿಲ್ಲ.

ಮತದಾರರು
ಒಟ್ಟು – 17,02,618
ಮಹಿಳೆಯರು – 8,33,317
ಪುರುಷರು – 8,69,230

ಜಾತಿವಾರು ಲೆಕ್ಕಾಚಾರ
ಬಣಜಿಗ – 1, 90,000.
ಪಂಚಮಸಾಲಿ ಲಿಂಗಾಯತ – 1, 85,000.
ಸಾದರ ಲಿಂಗಾಯತ – 1, 90,000.
ಮುಸ್ಲಿಮರು – 2, 85,000.
ಕುರುಬ – 1, 90,000.
ಪರಿಶಿಷ್ಟ ಜಾತಿ – 1, 70,000.
ಪರಿಶಿಷ್ಟ ಪಂಗಡ – 1, 90,000.
ಇತರರು – 3,00,000.

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next