Advertisement

ಅಧಿಕಾರಿಗಳ ವಿರುದ್ಧ ಪಾಟೀಲ ಗರಂ

10:41 AM Oct 31, 2017 | Team Udayavani |

ಶಹಾಬಾದ: ಸಾರ್ವಜನಿಕರ ದುಡ್ಡು ಲಪಟಾಯಿಸುತ್ತಿದ್ದರೂ ನಿಮಗೆ ನೋವಾಗುವುದಿಲ್ಲ. ಬಿಟ್ಟಿ ಹಣ ಎಂದು ತಿಳಿದುಕೊಂಡಿದ್ದಿರಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ| ಶರಣಪ್ರಕಾಶ ಪಾಟೀಲ ಅಧಿಕಾರಿಗಳ ವಿರುದ್ಧ ಹರಿಹಾಯ್ದರು ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಹಣ ದುರುಪಯೋಗ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವ ಬದಲು ಅವರಿಗೆ ರಕ್ಷಣೆ ನೀಡಿದ್ದಿರಿ. ಕೇಸ್‌ ದಾಖಲಿಸಲು ಹಿಂದೇಟು ಹಾಕಿದ್ದು ನೋಡಿದರೆ ನೀವು ಇದರಲ್ಲಿ ಭಾಗಿಯಾಗಿದ್ದಿರಿ. ಕೂಡಲೇ ಅವರ ವಿರುದ್ಧ ಬೇಲ್‌ ರದ್ದುಪಡಿಸಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೆನೆ ಎಂದು ಎಚ್ಚರಿಕೆ ನೀಡಿದರು.

ಜನನ ಹಾಗೂ ಮರಣ ಪ್ರಮಾಣ ಪತ್ರ ನೀಡಲು ದುಡ್ಡು ಪಡೆದುಕೊಂಡಿದ್ದಾರೆ. ಅಲ್ಲದೇ ನಗರಸಭೆಗೆ ಖಾತೆಗೆ ಹಣ ಕಟ್ಟಿಲ್ಲ ಎಂದು ದೂರು ಬಂದಿದೆ. ಇದು ನಿಜವೇ ಎಂದು ನೈರ್ಮಲ್ಯ ಅಧಿಕಾರಿ ಅಭಯಕುಮಾರ ಅವರನ್ನು ಕೇಳಿದರು. ಅದಕ್ಕೆ ಅವರು ನಿಜ ಸರ್‌. ಒಂದು ವರ್ಷದಿಂದ ನಗರಸಭೆಗೆ ಹಣ ಪಾವತಿಸಿಲ್ಲ ಎಂದು ಉತ್ತರಿಸಿದರು. ಕೂಡಲೇ ಅವರನ್ನು ಅಮಾನತು ಮಾಡಿ. ಸೂಕ್ತ ತನಿಖೆ ನಡೆಸಿ ಎಂದು ಆದೇಶಿಸಿದರು. ಪೌರಕಾರ್ಮಿಕರ ಕೊರತೆಯಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ ಹಾಗೂ ನೈರ್ಮಲ್ಯ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಒಂದು ವಾರದಲ್ಲಿ ಸಚಿವ ಸಂಪುಟದಲ್ಲಿ ಪೌರಾಕರ್ಮಿಕರನ್ನು ತೆಗೆದುಕೊಳ್ಳುವಂತೆ ಜಿಒ ಪಾಸ್‌ ಆಗಲಿದೆ. ಒಂದು ವೇಳೆ ತಡವಾದರೆ ನ್ಯಾಯಾಲಯದ ಆದೇಶ ಪ್ರಕಾರ ಪಾಲನೆ ಮಾಡಿ. ಈ ಕೂಡಲೇ ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು, ಚಾಲಕರು ಹಾಗೂ ಪಂಪ್‌ ಆಪರೇಟರ್‌ಗಳನ್ನು ನೇಮಿಸಿಕೊಳ್ಳಲು ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಿದರು.

 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 4.55 ಕೋಟಿ ರೂ. ಅನುದಾನದಲ್ಲಿ ಸುಮಾರು 55 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ ಖಾತೆಯಲ್ಲಿ ಮಾತ್ರ ಹಣವಿಲ್ಲ. ಅದು ಎಲ್ಲಿಗೆ ಹೋಯಿತು. ಈ ಬಗ್ಗೆ ವಿವರಣೆ ನೀಡಿ ಎಂದು ಕೇಳಿದರು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ವಾರದಲ್ಲಿ ವರದಿ ನೀಡಬೇಕು. ಅಲ್ಲದೇ ಸರೋಜಿನಿ ಪಾಟೀಲ ಹಣ ದುರುಪಯೋಗ ಮಾಡಿಕೊಂಡಿದ್ದರಿಂದ ಅವರು ಅಮಾನತಾಗಿದ್ದಾರೆ. ಆದರೆ ಆ ಹಣ ಯಾವ ಗುತ್ತಿಗೆದಾರರ ಖಾತೆಗೆ ಹೋಗಿದೆ. ಆ ಗುತ್ತಿಗೆದಾರರ ಲೈಸೆನ್ಸ್‌ ರದ್ದು ಮಾಡಿ ಕಪ್ಪು ಪಟ್ಟಿಗೆ ಹಾಕಿ. ಹಾಗೇ ವಿವಿಧ ಇಲಾಖೆಗಳಿಗೆ ಈ ಆದೇಶ ಪ್ರತಿ ಕಳುಹಿಸಿ. ಅವರು ಅಲ್ಲಿ ಕಾಮಗಾರಿ ಕೈಗೊಂಡಿದ್ದರೆ ಅವರ ಹಣವನ್ನು ತಡೆ ಹಿಡಿಸಿ ಎಂದು ಪಿಡಿ ಅವರಿಗೆ ಆದೇಶಿಸಿದರು.

ವಿವಿಧ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಕಡತಗಳು ಮಾಯವಾಗಿವೆ ಎಂದು ಕೋಪಗೊಂಡ ಸಚಿವರು ಹಾಗೂ ಜಿಲ್ಲಾಧಿಕಾರಿ ವೆಂಕಟೇಶ ಅವರು ಕಡತ ಯಾರಿಗೆ ಸಂಬಂಧಪಟ್ಟಿರುವುದೋ ಅವರೇ ಹೊಣೆಗಾರರು. ಆ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ ಎಂದು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್‌
ಸಮಸ್ಯೆ ಆಗದಂತೆ ಕೂಡಲೇ ಟೆಂಡರ್‌ ಕರೆದು ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಅಲ್ಲದೇ ಕಳೆದ ಮೂರು ವರ್ಷದಲ್ಲಿ ನಗರಸಭೆ ಖಾತೆಯಿಂದ ಹಣ ಯಾವ ಯಾವ ಖಾತೆಗೆ ಹಣ ಹೋಗಿದೆ ಎಂದು ಪರಿಶೀಲಿಸಿ ಎಂದು ಎಇಇ ಮ. ರಿಯಾಜ್‌ ಅವರಿಗೆ ಸೂಚಿಸಿದರು.

Advertisement

ಇಇ, ಪೌರಾಯುಕ್ತರು ಹಾಗೂ ಎಇಇ ಸೇರಿ ಕಳೆದ ಐದು ವರ್ಷದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಯಾವುದು ಆಗಿದೆ. ಯಾವುದು ಆಗಿಲ್ಲ. ಈ ಬಗ್ಗೆ ಪರಿಶೀಲಿಸಿ. ಯಾವ ಕಾಮಗಾರಿ ಆಗಿಲ್ಲ ಎಂಬುದನ್ನು ದಾಖಲೆ ಮಾಡಿ. ನಂತರ ಇದನ್ನು ಮತ್ತೆ ಮರು ಪರಿಶೀಲಸುವಂತೆ ಸೇಡಂ ಸಹಾಯಕ ಆಯುಕ್ತರಿಗೆ ಆದೇಶಿಸಿದರು. ಎಡಿಬಿಯವರು ಸುಮಾರು 2500 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಿದ್ದಾರೆ. ಆ ಮನೆಗಳಿಗೆ ಕರ ವಸೂಲಾತಿ ಮಾಡಿ. ನಗರಸಭೆ ವಾಣಿಜ್ಯ ಮಳಿಗೆಗಳನ್ನು ಬೇಗನೆ ಹರಾಜಿನ ಮೂಲಕ ವಿತರಣೆ ಮಾಡುವಂತೆ ಸೂಚಿಸಿದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ, ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕುಸಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ, ಪೌರಾಯುಕ್ತ ಬಿ. ಬಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next