ಕಲಬುರಗಿ: ರಾಜಕೀಯ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಕುಟುಂಬದವರಿಗೆ ಬಹುಕೋಟಿ ಬೆಲೆಬಾಳುವ ಎಂಎಸ್‌ಕೆ ಮಿಲ್ ವಾಣಿಜ್ಯ ನಿವೇಶನಗಳು ಮಂಜೂರಾಗುವಂತೆ ನೋಡಿಕೊಂಡಿರುವ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಕುಡಾಗೆ ನಷ್ಟ ಮಾಡಿರುವ ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಎಂ.ರಾಚಪ್ಪ ಹಾಗೂ ವಿಷಯ ನಿರ್ವಾಹಕ ಸುಬ್ಟಾರವ್ ಜೊತೆಗೇ ಶಾಸಕ ದತ್ತಾತ್ರೇಯ ಪಾಟೀಲರ ವಿರುದ್ಧವೂ ಸೂಕ್ತ ತನಿಖೆ ಮಾಡುವ ಮೂಕ ಪ್ರಾಧಿಕಾರಕ್ಕೆ ಆಗಿರುವ ಆರ್ಥಿಕ ನಷ್ಟದ ಮೊತ್ತವಾದಂತಹ 4.30 ಕೋಟಿ ವಸೂಲಿ ಮಾಡಬೇಕು. ವಾಣಿಜ್ಯ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಬ್ಲಾಕ್ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ದೂರು ಸಲ್ಲಿಸಲಾಯಿತು.
ನಿವೇಶನ ಸಂಖ್ಯೆ 88 ಹಾಗೂ 88/1 ಇವುಗಳನ್ನ ಕಡಿಮೆ ಲಾಭದಲ್ಲಿಯೇ ಮಂಜೂರು ಮಾಡಲಾಗಿದೆ. ಪ್ರಾಧಿಕಾರಕ್ಕೆ ಇದರಿಂದಾಗಿ 4.30 ಕೋಟಿ ರೂ. ನಷ್ಟವಾಗಿದೆ. ಪ್ರಾಧಿಕಾರದ ಸಭೆಯಲ್ಲಿ ಇನ್ನು ಪ್ರಶ್ನಿಸಿ ಮರುಹರಾಜು ಮಾಡಬೇಕಿತ್ತು. ಅಥವಾ ನಿಯಮಗಳಂತೆ ಬಡ್ಡಿ ಸಮೇತ ನಿಗದಿತ ದಿನದಲ್ಲಿ ಹಣ ವಸೂಲಿಗೂ ಅವಕಾಶಗಳಿದ್ದರೂ ಯಾವುದನ್ನೂ ಮಾಡದೆ ಶಾಸಕರ ಪ್ರಭಾವಕ್ಕೆ ಮಣಿದು ಅವ್ಯವಹಾರ ಎಸಗಲಾಗಿದೆ.
ಅಂದಿನ ಕುಡಾ ಆಯುಕ್ತ ರಾಚಪ್ಪ, ವಿಷಯ ನಿರ್ವಾಹಕರು ಸೇರಿ ಇಂತಹ ಅವ್ಯವಹಾರಕ್ಕೆ ಬೆಂಬಲ ನೀಡಿದ್ದಾರೆ. ಅಫಜಲಪುರ ತಾಲೂಕಿನ ಅಂಕಲಗಾದಲ್ಲಿ ದಿ.ಮಲ್ಲಿಕಾರ್ಜುನ ಪಾಟೀಲ್ ಹೆಸರಲ್ಲಿದ್ದಂತಹ 112 ಎಕರೆ ಜಮೀನನ್ನು ತಮ್ಮ ಹೆಸರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅವರು ತಮ್ಮನ್ನು ದಿ. ಮಲ್ಲಿಕಾರ್ಜುನ ಇವರ ದತ್ತು ಪುತ್ರ ಎಂದು ಹೇಳಿಕೊಂಡಿದ್ದಾರೆ.
ವಿಚಿತ್ರವೆಂದರೆ ಇವರೇ ತಾವೇ ದತ್ತು ಪತ್ರ ಬರೆದಿದ್ದಾರೆ. ಒಪ್ಪಿಗೆ ಪತ್ರ ಕೂಡಾ ತಾವೇ ಬರೆಯುತ್ತಾರೆ. ತಾವೇ ವಾರ್ಸಾಕ್ಕೂ ಕೋರುತ್ತಾರೆ. ಅಫಜಲಪುರ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಇಂತಹ ಸೂಕ್ಷ್ಮಗಳನ್ನು ಗಮನಿಸದೆ, ವಿಲ್ ಡೀಡ್ ಇಲ್ಲದ. ಸೂಕ್ತ ದತ್ತುಪತ್ರ ದಾಖಲೆಲ್ಲದ ಈ ಪ್ರಕರಣದಲ್ಲಿ ಶಾಸಕರ ಕೋರಿಕೆಯಂತೆ ಜಮೀನು ವರ್ಗಾವಣೆ ಮಾಡುತ್ತಾರೆ. ಇಲ್ಲಿ ಭೂಸುಧಾರಣೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ವಾಣಿಶ್ರೀ ಸಗರಕರ್, ಬಾಂಬೆ ಶೇಠ್, ಈರಣ್ಣ ಝಳಕಿ, ಚಂದ್ರಿಕಾ ಪರಮೇಶ್ವರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.