Advertisement

ತಜ್ಞ ವೈದ್ಯರಿಲ್ಲದೆ ರೋಗಿಗಳ ಪರದಾಟ!

09:05 AM Feb 12, 2019 | |

ಕೊಟ್ಟೂರು: ಸುಸಜ್ಜಿತ ಕಟ್ಟಡ, ಆಧುನಿಕ ಸೌಲಭ್ಯ ಹೊಂದಿರುವ ಪಟ್ಟಣದ 30 ಬೆಡ್‌ನ‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ.

Advertisement

ಕೊಟ್ಟೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ. ಆದರೆ ತಜ್ಞ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಮುಖ ವೈದ್ಯರಾದ ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಕೀಲು ಮೂಳೆ ತಜ್ಞರು, ಅರವಳಿಕೆ ಹೀಗೆ ಹಲವಾರು ತಜ್ಞರ‌ ವೈದ್ಯರ ಕೊರತೆ ಇದ್ದು, ಆದರೆ ಪ್ರಸ್ತುತ ಆಡಳಿತ ವೈದ್ಯಾಧಿಕಾರಿ ಮತ್ತು ದಂತ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಗ‌ಂಟೆಗಟ್ಟಲೇ ಕಾಯಬೇಕು: ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತು ತಪಾಸಣೆಗೊಳಗಾಗಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಆಸ್ಪತ್ರೆಯಲ್ಲಿರುವ ಬೆರಳಣಿಕೆಯಷ್ಟು ವೈದ್ಯರು ವಾರ್ಡ್‌ಗಳಲ್ಲಿ ದಾಖಲಾಗುವ ಒಳರೋಗಿಗಳನ್ನು ನೋಡಿ ಒಪಿಡಿಗೆ ಬರುವವರೆಗೂ ಹೊರ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಬೇಕಿದೆ.

ಮಾತ್ರವಲ್ಲ, ಪ್ರತಿ ಗುರುವಾರ ನೂರಾರು ಗರ್ಭಿಣಿಯರು ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ಪ್ರಸೂತಿ ತಜ್ಞರೇ ಇಲ್ಲ. ಸ್ಟಾಫ್‌ ನರ್ಸ್‌ಗಳ ಕೊರತೆಯೂ ಇದೆ. ಅಲ್ಲದೆ, ತಾಯಿ ಕಾರ್ಡ್‌ ವಿತರಣೆಯೂ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ರಾತ್ರಿ ವೇಳೆ ಕೇಳುವವರಿಲ್ಲ: ರಾತ್ರಿ ಸಂದರ್ಭದಲ್ಲಿ ಏನಾದರೂ ತುರ್ತು ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗೆ ಬಂದರೆ ಇಲ್ಲಿ ಕೇಳುವವರು ಯಾರು ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ ಇಲ್ಲ: ಆಸ್ಪತ್ರೆಗೆ ಬರುವ ಮಹಿಳೆ ರೋಗಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕುಡಿವ ನೀರಿನ ವ್ಯವಸ್ಥೆ ಇಲ್ಲ. ಆಸ್ಪತ್ರೆ ಪಕ್ಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದರೂ, ಅದನ್ನು ಆರಂಭಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣ ಹಾಗೂ ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಿಂದ ಆರಂಭಿಸಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾಜ್ಯ ಸರ್ಕಾರ ಸಮರ್ಪಕ ವೈದ್ಯರನ್ನು ನೇಮಿಸಿ ಬಡ ರೋಗಿಗಳ ಆರೋಗ್ಯ ಕಾಪಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರು, ಸ್ಟಾಪ್‌ ನರ್ಸ್‌ಗಳ ಕೊರತೆ ಇದೆ. ಆದರೂ ನಾವೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ವೈದ್ಯರ ನೇಮಕ ಕುರಿತು ಈಗಾಗಲೇ ಮೇಲಧಿಕಾರಿಗಳಿಗೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
•ಡಾ| ಪಿ.ಬಿ.ನಾಯ್ಕ , ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ.

ಹಾವು ಕಡಿತ, ವಿಷ ಸೇವನೆ, ತುರ್ತು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ತಜ್ಞ ವೈದ್ಯರು ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಾರೆ. ಹೀಗಾದರೆ ಈ ಆಸ್ಪತ್ರೆ ಏಕೆ ಬೇಕು.
•ರಾಮಣ್ಣ, ಕೊಟ್ಟೂರು.

Advertisement

Udayavani is now on Telegram. Click here to join our channel and stay updated with the latest news.

Next