ಹೊಸದಿಲ್ಲಿ: ಭಾರತ ಮತ್ತು ಚೀನ ನಡುವಿನ ಸಿಕ್ಕಿಂ ಗಡಿ ಪ್ರದೇಶ ಸಂಘರ್ಷಕ್ಕೆ ಬ್ರೇಕ್ ಬೀಳುವ ಲಕ್ಷಣಗಳೇ ಇಲ್ಲ. ಕಳೆದೆರಡು ತಿಂಗಳಿಂದ ಕಾಲ್ಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ಟಿಬೆಟ್ ಗಡಿಯಲ್ಲಿ ಸಮರಾಭ್ಯಾಸ ನಡೆಸಿದ ಬೆನ್ನಲ್ಲೇ ಈಗ ಮತ್ತೆ ಭಾರತವನ್ನು ಬೆದರಿಸುವ ಯತ್ನ ನಡೆಸಿದೆ.
“ಡೋಕ್ಲಾಮ್‌ನಲ್ಲಿ ಅನಗತ್ಯವಾಗಿ ಸೇನೆ ನಿಯೋಜಿಸಿ ಅತಿಕ್ರಮಣಕ್ಕೆ ಮುಂದಾದರೆ ಸಹಿಸುವುದಿಲ್ಲ. ಕೂಡಲೇ ಸೇನಾ ಪಡೆ ವಾಪಸ್ ಕರೆಯಿಸಿಕೊಳ್ಳಿ. “ನೀತಿ’ಯನ್ನೇ ದಾಳವಾಗಿಸಿಕೊಂಡು ರಾಜಕೀಯ ಲಾಭಕ್ಕೆ ಮುಂದಾಗುವುದಾದರೆ ಎಲ್ಲಾ ಪರಿಣಾಮಗಳನ್ನೂ ಎದುರಿಸಲು ಸಿದ್ಧರಾಗಿ. ನಮ್ಮ ಸಹನೆ ಅನಿರ್ದಿಷ್ಟಾವಧಿಯದ್ದು ಎಂದು ಭಾವಿಸಬೇಡಿ’ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಮೂಲಕ ಮತ್ತೆ ವಾಗ್ಯುದ್ಧಕ್ಕೆ ಎಳೆದಿರುವ ಚೀನಾ, ಬೀಜಿಂಗ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಡೋಕ್ಲಾ ಮ್‌ನಲ್ಲಿ ನಡೆಯುತ್ತಿರುವ ಪ್ರತಿ ಚಟುವಟಿಕೆ ಗಳನ್ನೂ ಚೀನಾ ಗಮನಿಸುತ್ತಿದೆ. ಭಾರತೀಯ ಸೇನೆ ಕಾನೂನು ಬಾಹಿರವಾಗಿ ಅತಿಕ್ರಮಣ ನಡೆಸುತ್ತಿರು ವುದನ್ನು ಗಮನಿಸಿದ್ದೇವೆ. ಇದನ್ನು ರಾಜತಾಂತ್ರಿಕ ಅಧಿಕಾರಿಗಳೇ ಗಮನಿಸಿ ಶಾಕ್ ಆಗಿದ್ದಾರೆ ಎಂದು ಹೇಳಿದೆ.
ಗಡಿಯಲ್ಲಿ 73 ರಸ್ತೆಗಳ ನಿರ್ಮಾಣ: ಭಾರತ ಹಾಗೂ ಚೀನಾ ಗಡಿ ಪ್ರದೇಶದುದ್ದಕ್ಕೂ ಕಾರ್ಯಾ ಚರಣೆಗೆ ಅನುಕೂಲವಾಗುವಂತೆ 73 ರಸ್ತೆಗಳು ನಿರ್ಮಾಣ ವಾಗುತ್ತಿವೆ ಎಂದು ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಲೋಕಸಭೆಗೆ ತಿಳಿಸಿದರು. ಸಿಕ್ಕಿಂ ಗಡಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಮಾಹಿತಿ ನೀಡಿದರು.
ಕ್ಯಾತೆ ತೆಗೆಯುವುದು ಚೀನದ ಅಭ್ಯಾಸ. ಆದರೆ ಈ ಬಾರಿ ಸಿಕ್ಕಿಂನಲ್ಲಿ ಚೀನಾ ಎಂದಿನಂತೆ ನಡೆದುಕೊಳ್ಳದೇ, ಬಹಳ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ನಾವು ವಿವಾದವನ್ನು ತಣ್ಣಗಾಗಿಸಲು ಯತ್ನಿಸುತ್ತಲೇ ಇದ್ದೇವೆ.
– ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ