ಪಟಿಯಾಲಾ: ಪಂಜಾಬ್ ನ ಪಟಿಯಾಲದಲ್ಲಿ ಶಿವಸೇನೆ ಮತ್ತು ಖಲಿಸ್ಥಾನ ಬೆಂಬಲಿಗರ ನಡುವೆ ಶುಕ್ರವಾರ (ಏಪ್ರಿಲ್ 29) ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಂಜಾಬ್ ಗೃಹ ಖಾತೆ ಇಲಾಖೆ ಘೋಷಿಸಿದೆ.
ಪಟಿಯಾಲಾದಲ್ಲಿ ಶನಿವಾರ (ಏಪ್ರಿಲ್ 30) ಬೆಳಗ್ಗೆ 9-30ರಿಂದ ರಾತ್ರಿ 9ರವರೆಗೆ ಇಂಟರ್ನೆಟ್ ಸರ್ವೀಸ್ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ ಪಟಿಯಾಲಾದಲ್ಲಿ ಶಿವಸೇನೆ ಮತ್ತು ಖಲಿಸ್ಥಾನ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲೋಸುಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪಟಿಯಾಲಾ ವಲಯದ ಐಜಿಪಿ ರಾಕೇಶ್ ಅಗರ್ವಾಲ್ ತಿಳಿಸಿದ್ದರು.
ಎರಡು ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದರು. ಘರ್ಷಣೆ ನಂತರ ಘಟನಾ ಸ್ಥಳಕ್ಕೆ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶ ನೀಡಿದ್ದರು.
ಮುಂಜಾಗ್ರತಾ ಕ್ರಮವಾಗಿ ಪಟಿಯಾಲಾದಲ್ಲಿ ಶುಕ್ರವಾರ ಸಂಜೆ 6ಗಂಟೆಯಿಂದ ಶನಿವಾರ ಬೆಳಗ್ಗೆ 7ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪಟಿಯಾಲಾ ಡೆಪ್ಯುಟಿ ಕಮಿಷನರ್ ಎಎನ್ ಐಗೆ ತಿಳಿಸಿದ್ದಾರೆ.