ಕೂಳೂರು: ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಂಚ ವಿರಾಮ ದೊರಕಿದ್ದು, ಇದೀಗ ಮಳೆ ನೀರು ನಿಂತ ರಸ್ತೆಯೆಲ್ಲ ಹೊಂಡಮಯವಾಗಿದೆ.
ಕೂಳೂರು ಸರ್ವಿಸ್ ರಸ್ತೆ, ಕೂಳೂರು ಹೆದ್ದಾರಿ ಮೇಲ್ಸೇತುವೆ, ಪಣಂಬೂರು ರಾ. ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳಾಗಿದ್ದು, ದ್ವಿಚಕ್ರ ವಾಹನ ಚಲಾಯಿಸಲು ಕಷ್ಟಕರವಾಗಿದೆ. ಹೆದ್ದಾರಿ ಇಲಾಖೆ ಈ ಬಾರಿ ಮಳೆ ಬೀಳುವ 15 ದಿನಗಳ ಮುನ್ನವಷ್ಟೇ ತೇಪೆ ಕಾರ್ಯ ಮಾಡಿದ್ದು ಮಳೆಗೆ ಎದ್ದು ಹೋಗುವಂತಾಗಿದೆ.
ಹೆಜ್ಜೆಗೊಂದರಂತೆ ಹೊಂಡ ಸೃಷ್ಟಿಯಾಗಿದೆ. ಹೊಂಡದಲ್ಲಿ ಮಳೆ ನೀರು ನಿಂತು ಹೊಸ ಸವಾರರಿಗೆ ತಿಳಿಯದೆ ವಾಹನ ಇಳಿಸಿ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತವಾಗುವ ಭೀತಿಯಿದೆ.
ಟ್ರಾಫಿಕ್ ಜಾಮ್
ಶನಿವಾರ ಕುಳೂರು ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅದು ಮುಂದಿನ ದಿನಗಳಲ್ಲಿ ತಾಸು ಗಟ್ಟಲೆ ರಸ್ತೆಯಲ್ಲಿ ಕಾಯಬೇಕಾದ ಮುನ್ಸೂಚನೆ ನೀಡಿದೆ. ಮಳೆ ಬರುವ ತಿಂಗಳ ಮೊದಲು ಸೇತುವೆಯ ಮೇಲೆ ಡಾಮರು ಹಾಕಲಾಗಿತ್ತು.ಆದರೆ ಕಳಪೆ ಕಾಮಗಾರಿಯಿಂದ ಡಾಮರು ಒಂದಡೆ ರಾಶಿಯಾಗಿದ್ದು, ಕೃತಕ ಹಂಪ್ಸ್‌ಗಳು ಸೃಷ್ಟಿಯಾಗಿವೆ. ಸುರತ್ಕಲ್ ರೈಲ್ವೇ ಸೇತುವೆ ಬಳಿ ರೋರೋ ಘನ ಟ್ರಕ್‌ಗಳ ಭಾರ ತಾಳಲಾರದೆ ರಸ್ತೆಯಲ್ಲಿ ಹೊಂಡವಾಗಿವೆ. ಕಾನಾ ಬಾಳ ರಸ್ತೆಯು ನಿತ್ಯ ಸಂಚರಿಸುವ ಟ್ಯಾಂಕರ್‌ಗಳಿಂದಾಗಿ ಹೊಂಡಮಯವಾಗಿದೆ.
ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿ
ಮಳೆಗಾಲದ ಮುಗಿಯುವ ಮುನ್ನ ಪೂರ್ಣ ಪ್ರಮಾಣದ ದುರಸ್ತಿ ಅಸಾಧ್ಯ ವಾಗಿದ್ದು, ತಾತ್ಕಾಲಿಕವಾಗಿಯಾದರೂ ರಸ್ತೆ ಸರಿಪಡಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಪಾಲಿಕೆ ಒಳರಸ್ತೆಗಳನ್ನು ಬಹುತೇಕ ಕಾಂಕ್ರೀಟ್ ಮಾಡಲಾಗಿದ್ದು. ಈ ಭಾಗದ ರಸ್ತೆಯಲ್ಲಿ ಹೊಂಡದ ಸಮಸ್ಯೆಯಾಗಿಲ್ಲ.