Advertisement

I.N.D.I.A. ಬಿರುಕಿಗೆ ತೇಪೆ: ಬಿಹಾರ ಸೀಟು ಹಂಚಿಕೆ ಅಂತಿಮ

12:27 AM Jan 06, 2024 | Team Udayavani |

ಹೊಸದಿಲ್ಲಿ: “ಒಗ್ಗಟ್ಟು’ ಸಾಧಿಸುವ ನಿಟ್ಟಿನಲ್ಲಿ ವಿಪಕ್ಷಗಳ “ಇಂಡಿಯಾ’ ಒಕ್ಕೂಟವು ಇಟ್ಟ ಮೊದಲ ಹೆಜ್ಜೆಯು ಯಶಸ್ವಿಯಾಗಿದ್ದು, ಬಿಹಾರದಲ್ಲಿ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಅಂತಿಮಗೊಂಡಿದೆ ಎಂದು ಹೇಳಲಾಗಿದೆ.

Advertisement

ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಆಡಳಿತಾರೂಢ ಜೆಡಿಯು ಮತ್ತು ಲಾಲು ಯಾದವ್‌ ನೇತೃತ್ವದ ಆರ್‌ಜೆಡಿ ಲೋಕಸಭೆ ಚುನಾವಣೆಯಲ್ಲಿ ತಲಾ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ 5 ಮತ್ತು ಎಡಪಕ್ಷಗಳು 3 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಯಾ ಬ್ಲಾಕ್‌ನ 4ನೇ ಸಭೆಯಲ್ಲೇ ನಾಯಕರೆಲ್ಲರೂ ಸೀಟು ಹಂಚಿಕೆ ಸೂತ್ರವನ್ನು 3 ವಾರಗಳೊಳಗೆ ಪೂರ್ಣಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಅದರಂತೆ ಬಿಹಾರದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಸೀಟು ಹಂಚಿಕೆ ಬೇಗ ಮುಗಿದರೆ ಚುನಾವಣೆ ಪ್ರಚಾರವನ್ನು ಆದಷ್ಟು ಬೇಗ ಆರಂಭಿಸಬಹುದು ಎಂದು ನಿತೀಶ್‌ ಪ್ರತಿಪಾದಿಸಿದ್ದರು ಎಂದು ಅವರ ಆಪ್ತ, ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್‌ ಕುಮಾರ್‌ ಝಾ ಹೇಳಿದ್ದಾರೆ.

ಗುರುವಾರ ಸಂಜೆ ನಿತೀಶ್‌ರನ್ನು ಭೇಟಿಯಾಗಿದ್ದ ಡಿಸಿಎಂ ತೇಜಸ್ವಿ ಯಾದವ್‌, ಸಮಾನ ಸಂಖ್ಯೆಯ ಕ್ಷೇತ್ರಗಳಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ತಂದೆ ಲಾಲು ಪ್ರಸಾದ್‌ ಯಾದವ್‌ ಸಿದ್ಧಪಡಿಸಿರುವ ಸೀಟು ಹಂಚಿಕೆ ಸೂತ್ರದ ಕುರಿತು ನಿತೀಶ್‌ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. 2015ರ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲೂ ಲಾಲು ಅವರು ಇದೇ ಸೂತ್ರ ಅನುಸರಿಸಿದ್ದು, ವಿಧಾನಸಭೆಯ ಒಟ್ಟು 243 ಕ್ಷೇತ್ರಗಳ ಪೈಕಿ ಆರ್‌ಜೆಡಿ ಮತ್ತು ಜೆಡಿಯು ತಲಾ 100ರಲ್ಲಿ ಸ್ಪರ್ಧಿಸಿದ್ದವು. ಕಾಂಗ್ರೆಸ್‌ಗೆ 43 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿತ್ತು.

ನಿತೀಶ್‌ ರಾಷ್ಟ್ರೀಯ ಸಂಚಾಲಕ: ಕಾಂಗ್ರೆಸ್‌ ಗ್ರೀನ್‌ಸಿಗ್ನಲ್‌?

Advertisement

ಇಂಡಿಯಾ ಮೈತ್ರಿಕೂಟದ ರಾಷ್ಟ್ರೀಯ ಸಂಚಾಲಕರನ್ನಾಗಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ರನ್ನು ನೇಮಕ ಮಾಡಲು ಕಾಂಗ್ರೆಸ್‌ನಿಂದಲೂ ಒಪ್ಪಿಗೆ ಸಿಕ್ಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಮಾತ್ರವಲ್ಲದೇ ಡಿಎಂಕೆ, ಎನ್‌ಸಿಪಿ, ಆರ್‌ಜೆಡಿ ಸೇರಿದಂತೆ ಇತರ ಮಿತ್ರಪಕ್ಷಗಳೂ ಸಮ್ಮತಿಸಿವೆ. ಒಂದೆರಡು ದಿನಗಳಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.

ಯಾವ ಬಿಕ್ಕಟ್ಟೂ ಇಲ್ಲ, ಸೀಟು ಹಂಚಿಕೆ ಬಹುತೇಕ ಪೂರ್ಣ: ಶಿವಸೇನೆಯ ರಾವತ್‌

ಸೀಟು ಹಂಚಿಕೆ ಸೂತ್ರದ ವಿಚಾರದಲ್ಲಿ ಕಾಂಗ್ರೆಸ್‌ನೊಂದಿಗೆ ವಾಕ್ಸಮರ ನಡೆಸಿದ ಬೆನ್ನಲ್ಲೇ ಶಿವಸೇನೆ ಉದ್ಧವ್‌ ಬಣದ ನಾಯಕ ಸಂಜಯ್‌ ರಾವತ್‌ ತಣ್ಣಗಾಗಿದ್ದಾರೆ. “ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಬಿಕ್ಕಟ್ಟು, ವೈಮನಸ್ಸುಗಳಿಲ್ಲ. ನನಗಂತೂ ಅಂಥದ್ದೇನೂ ಕಾಣಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಒಕ್ಕೂಟದ ಪಕ್ಷಗಳ ನಡುವೆ ಮಾತುಕತೆ ಸಕಾರಾತ್ಮಕವಾಗಿದ್ದು, ಸದ್ಯದಲ್ಲೇ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ’ ಎಂದಿದ್ದಾರೆ. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಚಿಸಿರುವ ಉನ್ನತ ಮಟ್ಟದ ಸಮಿತಿ ಜತೆಗೂ ಸದ್ಯದಲ್ಲೇ ಮಾತುಕತೆ ನಡೆಯಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next