ಯಲಹಂಕ: ತಾಲೂಕಿನ ರಾಜಾನುಕುಂಟೆ ಸಮೀಪದ ಅದ್ದಿಗಾನಹಳ್ಳಿಯ ಪಟಾಲಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ (ಸೋಮವಾರ) ಒಂದು ವಾರ ನಡೆಯಲಿದೆ.
ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಪಟಾಲಮ್ಮ ದೇವಿ ಜಾತ್ರಾ ಮಹೋತ್ಸವ ಏ.30ರವರೆಗೆ ನಡೆಯಲಿದೆ. ಪ್ರತಿ ವರ್ಷದಂತೆ ಆರತಿ, ರಥೋತ್ಸವ, ಬಾಯಿಬೀಗ, ಪಲ್ಲಕ್ಕಿ ಉತ್ಸವ, ಸೇರಿದಂತೆ ಪ್ರತಿ ದಿನ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಇದರೊಂದಿಗೆ ಸಾರ್ವಜನಿಕರ ಮನರಂಜನೆಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ರಾಜಾನುಕುಂಟೆ, ತಿಮ್ಮಸಂದ್ರ, ತರಹುಣಸೆ, ಮಾರಗೊಂಡನಹಳ್ಳಿ, ಚೊಕ್ಕನಹಳ್ಳಿ, ಅಗ್ರಹಾರ ಸೇರಿ ಸುತ್ತಮುತ್ತಲ ಏಳು ಗ್ರಾಮಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಳ್ಳಲಿದ್ದಾರೆ. ಈ ವೇಳೆ ವಿವಿಧ ಭಕ್ತ ಮಂಡಳಿಗಳು ಪಾನಕ, ನೀರುಮಜ್ಜಿಗೆ ವಿತರಣೆ ಮಾಡಲಿವೆ.
ಏ.22ರ ಸೋಮವಾರ ಆಂಜನೇಯ ಸ್ವಾಮಿ ಮತ್ತು ಇತರ ದೇವರುಗಳಿಗೆ ಆರತಿ, 23ರಂದು ಪಟಾಲಮ್ಮ ದೇವಿಗೆ ಅಭಿಷೇಕ, ಪೂಜಾ ಮಹೋತ್ಸವ, 24ರಂದು ಪಟಾಲಮ್ಮ ದೇವಿಗೆ ಆರತಿಯೊಂದಿಗೆ ಏಳು ಗ್ರಾಮಗಳಿಂದ ರಥೋತ್ಸವ ನಡೆಯಲಿದ್ದು, ರಾತ್ರಿ ದೇವಿ ಸನ್ನಿದಿಯಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳಲಿದೆ.
ಏ.25ರಂದು ಆರತಿ, ಬಾಯಿಬೀಗ, 26ರಂದು ದೇವಿಯ ಹೂವಿನ ಪಲ್ಲಕ್ಕಿ ಉತ್ಸವ,ನಾದಸ್ವರ, ಬಾಣಬಿರುಸು, ಸಿಡಿಮದ್ದು ಪ್ರದರ್ಶನ ನಡೆಯಲಿದೆ.