Advertisement

ತಾಯಿ ಮಡಿಲು ಸೇರದ ಕಿಟ್‌ ಸರ್ಕಾರಕ್ಕೆ ಪತ್ರ ಕಳ್ಸಿ ಪಟಾಫ‌ಟ್‌

12:36 PM Sep 12, 2017 | Team Udayavani |

ಧಾರವಾಡ: ಜಿಲ್ಲೆಯ ಬಾಣಂತಿಯರಿಗೆ ಪೂರೈಕೆ ಸ್ಥಗಿತಗೊಂಡಿರುವ ಮಡಿಲು ಕಿಟ್‌ಗಳನ್ನು ಶೀಘ್ರವೇ ಪುನರಾರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

Advertisement

ಜಿಲ್ಲಾಸ್ಪತ್ರೆಯಲ್ಲಿ ಮಡಿಲು ಕಿಟ್‌ ಲಭ್ಯವಾಗುತ್ತಿಲ್ಲ ಎನ್ನುವ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರು ಆಸ್ಪತ್ರೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಡಿಲು ಕಿಟ್‌ಗಳನ್ನು ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಂದ್ರ ದೊಡಮನಿ, ಕಳೆದ ಮೂರು ತಿಂಗಳಿನಿಂದ ಜಿಲ್ಲೆಗೆ ಮಡಿಲು ಕಿಟ್‌ಗಳ ಪೂರೈಕೆ ನಿಂತು ಹೋಗಿದೆ.

ಗುಣಮಟ್ಟದ ವಸ್ತುಗಳು ಕಿಟ್‌ಗಳಲ್ಲಿ ಬರುತ್ತಿಲ್ಲ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಕಿಟ್‌ ಪೂರೈಕೆ ಸ್ಥಗಿತಗೊಂಡಿದೆ. ಶೀಘ್ರವೇ ಪೂರೈಕೆಯಾಗಲಿದ್ದು, ನಂತರ ವಿತರಿಸಲಾಗುವುದು ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೈತ್ರಾ ಶಿರೂರ, ಮಗುವಿಗೆ ಜನ್ಮ ನೀಡಿದ ತಾಯಂದಿರು ಮತ್ತು ಮಗುವಿಗೆ ಅನುಕೂಲಕ್ಕಾಗಿ ಈ ಕಿಟ್‌ ಬಳಕೆಯಾಗುತ್ತದೆ.

ಬಾಣಂತಿಯರಿದ್ದಾಗ ಉಪಯೋಗವಾಗಬೇಕಿದ್ದ ಕಿಟ್‌ ನಂತರ ನೀಡಿದರೆ ಏನು ಪ್ರಯೋಜನ? ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಸೂಚಿಸಿದರು. ಇದಕ್ಕೆ ಆರೋಗ್ಯಾಧಿಕಾರಿಗಳು ಒಪ್ಪಿಕೊಂಡು ಪತ್ರ ಬರೆಯುವುದಾಗಿ ತಿಳಿಸಿದರು.

ಹೆಬ್ಬೇವಿಗೆ ಒಲವು: ಹೆಬ್ಬೇವು ಬೆಳೆಯಲು ಉತ್ತಮ ಅವಕಾಶವಿದ್ದು, ಅದಕ್ಕೆ ಜಿಪಂನಿಂದ ಉತ್ತೇಜನ ನೀಡುವಂತೆ ಜಿಪಂ ಅಧ್ಯಕ್ಷರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲ ಮಾಧ್ಯಮಗಳಲ್ಲಿ ಹೆಬ್ಬೇವು ಬೆಳೆದವರ ಸಾಧನೆ ಕುರಿತು ವರದಿಯಾಗಿದೆ. ಕೃಷಿ ಹೊಂಡಗಳ ದಡದಲ್ಲಿ ಹೆಬ್ಬೇವು ಬೆಳೆದರೆ ಹೆಚ್ಚು ಅನುಕೂಲವಿದ್ದು, ಕೂಡಲೇ ಇದನ್ನು ಉತ್ತೇಜಿಸುವುದಕ್ಕೆ ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು. 

Advertisement

ಕೂಲಿಗೆ ವ್ಯವಸ್ಥೆ ಮಾಡ್ರಿ: ನರೇಗಾ ಯೋಜನೆಯಡಿ ಕೂಲಿಗೆ ವ್ಯವಸ್ಥೆ ಮಾಡಿದರೂ, ಜನರು ಹುಬ್ಬಳ್ಳಿ-ಧಾರವಾಡಕ್ಕೆ ಕೆಲಸಕ್ಕೆ ಬರುತ್ತಿದ್ದಾರೆ. ಇದಕ್ಕೇನು ಕ್ರಮ ಕೈಗೊಂಡಿದ್ದಿರಿ? ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನರೇಗಾ ಉಸ್ತುವಾರಿ ಅಧಿಕಾರಿ ಮಾದರ್‌, ನಗರ ಪ್ರದೇಶದಲ್ಲಿ 500 ರೂ. ಕೂಲಿ ಸಿಗುತ್ತಿದೆ.

ಹೀಗಾಗಿ ಬರುತ್ತಿದ್ದಾರೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಇಒ ಸ್ನೇಹಲ್‌, ನೋಡಿ, ಈ ತರದ ಉತ್ತರ ಬೇಡ. ಹಳ್ಳಿಗರಿಗೆ ಸ್ಥಳೀಯವಾಗಿ ಏನೋ ತೊಂದರೆ ಇದ್ದಿರಬಹುದು. ಏನು ಕಾರಣ ಎನ್ನುವುದನ್ನು ಹಳ್ಳಿಗಳಿಗೆ ಹೋಗಿ ಸಮೀಕ್ಷೆ ನಡೆಸಿ ಎರಡು ದಿನದಲ್ಲಿ ನನಗೆ ವರದಿ ಕೊಡಿ ಎಂದು ಸೂಚಿಸಿದರು. 

ಟ್ಯಾಂಕ್‌ ನೆಲಸಮಕ್ಕೆ ಕ್ರಮ: ಇನ್ನು ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಬಿರುಕು ಬಿಟ್ಟು ಬೀಳುವ ಸ್ಥಿತಿ ತಲುಪಿರುವ ಅನೇಕ ಗ್ರಾಮಗಳಲ್ಲಿನ ಓವರ್‌ ಹೆಡ್‌ ಟ್ಯಾಂಕ್‌ ಗಳನ್ನು ನೆಲಸಮಗೊಳಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಸಿಇಒ ಸ್ನೇಹಲ್‌ ರಾಯಮಾನೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಕೆಲವು ಗ್ರಾಮಗಳಲ್ಲಿ ಟ್ಯಾಂಕ್‌ ಗಳು ಬೀಳುವ ಸ್ಥಿತಿಯಲ್ಲಿವೆ.

ಮಕ್ಕಳ ಮೇಲೆ ಬಿದ್ದರೆ ಹೇಗೆ? ಈ ಕುರಿತು ಕ್ರಮ ಕೈಗೊಳ್ಳಿ ಎಂದರು. ಇದಕ್ಕೆ ಅಧಿಕಾರಿಗಳು ಇದು ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದರು. ಕೂಡಲೇ ಮಧ್ಯ ಪ್ರವೇಶಿಸಿದ ಸ್ನೇಹಲ್‌, ಜಿಲ್ಲೆಯಲ್ಲಿ ಇಂತಹ  ಪ್ರಕರಣಗಳು ತುಂಬಾ ಕಡಿಮೆ. ಟ್ಯಾಂಕ್‌ ಬೀಳುವವರೆಗೂ ಕಾಯಲು ಆಗುವುದಿಲ್ಲ. ಮೊದಲು ಈ ಕುರಿತು ವರದಿ ಕೊಡಿ. ನೆಲಸಮಗೊಳಿಸೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next