Advertisement

ಪಾಸ್‌ಪೋರ್ಟ್‌ ಸೇವಾ ಕೇಂದ್ರ ಲೋಕಾರ್ಪಣೆ

09:24 AM Feb 15, 2019 | |

ಚಿತ್ರದುರ್ಗ: ಪಾಸ್‌ಪೋರ್ಟ್‌ ಅನ್ನು ವಿದೇಶಕ್ಕೆ ಹೋಗಲು ಮಾತ್ರ ಬಳಕೆ ಮಾಡಲಾಗುತ್ತದೆ ಎನ್ನುವ ಭಾವನೆ ಬೇಡ. ಪಾಸ್‌ಪೋರ್ಟ್‌ ಹೊಂದಿದ್ದೇವೆ ಎಂದರೆ ಭಾರತೀಯ ಪ್ರಜೆ ಎನ್ನುವ ಹೆಗ್ಗುರುತು ದಕ್ಕಲಿದೆ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ನಗರದ ಹೊಳಲ್ಕೆರೆ ರಸ್ತೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ಅಂಚೆ ಕಚೇರಿ ಪಾಸ್‌ ಪೋರ್ಟ್‌ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಮತ್ತು ಪ್ರವಾಸೋದ್ಯಮ ಇಲಾಖೆಯ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್‌ ಮಾಡಿಸಿಕೊಳ್ಳುತ್ತೇವೆ ಎನ್ನುವ ಭಾವನೆಯಿಂದ ಜನರು ಹೊರ ಬರಬೇಕು. ಅಗತ್ಯ ದಾಖಲೆಗಳಲ್ಲಿ ಪಾಸ್‌ಪೋರ್ಟ್‌ ಕೂಡ ಒಂದು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
 
ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಜಿಲ್ಲೆಗೆ ತರುವ ಮೂಲಕ ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಜಿಲ್ಲೆಯ ಮತದಾರರ ಋಣ ನನ್ನ ಮೇಲಿದ್ದು, ಹಿಂದುಳಿದ ಜಿಲ್ಲೆಗೆ ಎಷ್ಟು ಸೇವೆ ಮಾಡಿದರೂ ಕಡಿಮೆಯೇ. ಜಿಲ್ಲೆಯ ಜನತೆ ಪಾಸ್‌ಪೋರ್ಟ್‌ಗಾಗಿ ಹುಬ್ಬಳ್ಳಿ, ಬೆಂಗಳೂರಿಗೆ
ಹೋಗಬೇಕಿತ್ತು. ಇದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಸಚಿವರ ಕಚೇರಿಗೆ ಸಾಕಷ್ಟು ಸಲ ಅಲೆದಾಡಿ ಮಂಜೂರು ಮಾಡಿಸಿದ್ದೇನೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಹೋಗಲಾಡಿಸಬೇಕು. ಶೀಘ್ರದಲ್ಲೇ ಭದ್ರಾ ಮೇಲ್ದಂಡೆ ಯೋಜನೆಯಿಂದ ಹಿರಿಯೂರಿನ ವಿವಿ ಸಾಗರಕ್ಕೆ ನೀರು ಹರಿಯಲಿದೆ. ಅಲ್ಲದೆ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಭರ್ತಿ ಮಾಡಿದರೆ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ದಕ್ಷಿಣ ಕರ್ನಾಟಕ ವಲಯ ಪೋಸ್ಟ್‌ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರಕುಮಾರ್‌ ಮಾತನಾಡಿ, ಸಂಸದ ಚಂದ್ರಪ್ಪ ಅವರ ಪರಿಶ್ರಮದಿಂದಾಗಿ ಪಾಸ್‌ ಪೋರ್ಟ್‌ ಸೇವಾ ಕೇಂದ್ರ ಆರಂಭವಾಗಿದೆ. ಇದರಿಂದ ಪಾಸ್‌ಪೋರ್ಟ್‌ಗಾಗಿ ಬೆಂಗಳೂರು, ಹುಬ್ಬಳ್ಳಿ ನಗರಗಳಿಗೆ ಅಲೆಯುವುದು ತಪ್ಪಿದೆ. ಸಮಯ, ಹಣ ಎರಡೂ ಉಳಿತಾಯವಾಗಿದೆ ಎಂದು ಹೇಳಿದರು.

Advertisement

ರೀಜನಲ್‌ ಪಾಸ್‌ಪೋರ್ಟ್‌ ಆಫಿಸರ್‌ ಭರತ್‌ ಕುಮಾರ್‌ ಕುತಟಿ ಮಾತನಾಡಿ, ಪಾಸ್‌ಪೋರ್ಟ್‌ ಸೇವಾ ಕೇಂದ್ರ ತರುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿಗೆ ಈ ಕೇಂದ್ರ ಬಂದಿದೆ ಎಂದರೆ ಅದಕ್ಕೆ ಸಂಸದ ಚಂದ್ರಪ್ಪ ಅವರೇ ಮುಖ್ಯ ಕಾರಣ ಎಂದು ಶ್ಲಾಘಿಸಿದರು. ಆನ್‌ಲೈನ್‌ ಮೂಲಕ ಪಾಸ್‌ಪೋರ್ಟಗಾಗಿ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ನಿಮ್ಮ ಮನೆಬಾಗಿಲಿಗೆ ಬರಲಿದೆ ಎಂದು ತಿಳಿಸಿದರು.

ಚಿತ್ರದುರ್ಗ ಕೋಟೆ, ಹಿರಿಯೂರು ವಾಣಿವಿಲಾಸ ಸಾಗರದ ಚಿತ್ರವನ್ನೊಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ, ಡಿವೈಎಸ್ಪಿ ವಿಜಯ ಸಂಪತ್‌ಕುಮಾರ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ| ಎಸ್‌. ತಿಪ್ಪೇಸ್ವಾಮಿ, ಚಿತ್ರದುರ್ಗ ವಿಭಾಗದ ಅಂಚೆ ಅಧಿಕ್ಷಕ ಶಿವರಾಜ್‌ ಖೀಂಡಿಮ…, ಸಹಾಯಕ ಅಧೀಕ್ಷಕ ಆರ್‌.
ಗಂಗಪ್ಪ, ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಬಿ.ಇ. ವಿಜಯ ಕುಮಾರ್‌ ಭಾಗವಹಿಸಿದ್ದರು.

ಕಡತ ಹಿಡಿದುಕೊಂಡು ಅಲೆದಾಡಿರುವೆ ಪ್ರತಿ ಜಿಲ್ಲೆಗೆ ಒಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮಂಜೂರು ಮಾಡಬೇಕೆಂಬ ನಿಯಮವಿದೆ. ಆದರೆ ಕೇಂದ್ರ ಸರ್ಕಾರದಲ್ಲಿ ಈ ನಿಯಮಗಳು ಕೆಲಸ ಮಾಡುವುದಿಲ್ಲ. ನಿತ್ಯ ಓಡಾಟ ಮಾಡಿದರೆ ವಿಳಂಬ ಆಗುತ್ತದೆ. ಕೇಳದೇ ಇದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಎಡೆಬಿಡದೆ ಕಡತ ಹಿಡಿದುಕೊಂಡು ಕಚೇರಿಯಿಂದ ಕಚೇರಿ ಅಲೆದಿದ್ದರಿಂದ ಇಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮಂಜೂರಾಗಿದೆ ಎಂದು ಸಂಸದ ಚಂದ್ರಪ್ಪ ತಿಳಿಸಿದರು.

 ಹಾಸನ, ಮೈಸೂರು, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಪಾಸ್‌ ಪೋರ್ಟ್‌ ಸೇವಾ ಕೇಂದ್ರ ಮಂಜೂರಾಗುವುದು ದೊಡ್ಡ ವಿಷಯವಲ್ಲ. ಏಕೆಂದರೆ ಆ ನಗರಗಳು ಬಹಷ್ಟು ಅಭಿವೃದ್ಧಿ ಹೊಂದಿ ದೊಡ್ಡದಾಗಿ ಬೆಳೆದಿವೆ. ಅಲ್ಲದೆ ಅಲ್ಲಿನ ನಾಯಕರು ಕೂಡ ದೊಡ್ಡವರು. ಹಾಗಾಗಿ ಅಲ್ಲಿಗೆ ಯೋಜನೆಗಳು ಸುಲಭವಾಗಿ ಬರುತ್ತವೆ. ಆದರೆ ಹಿಂದುಳಿದ ಜಿಲ್ಲೆಯನ್ನು ಯಾರೂ ಕೇಳುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next