Advertisement

ಮಂಗಳೂರು : ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಸ್ಥಳಾವಕಾಶದ ಕೊರತೆ

08:49 AM Sep 17, 2022 | Team Udayavani |

ಮಂಗಳೂರು: ಬೆಳಗ್ಗಿನಿಂದ ಸಂಜೆಯವರೆಗೂ ಗ್ರಾಹಕರ ಸರದಿ ಸಾಲು; ಕುಳಿತುಕೊಳ್ಳಲು ಮಾತ್ರವಲ್ಲ ನಿಲ್ಲುವುದಕ್ಕೂ ಸ್ಥಳಾವಕಾಶದ ಕೊರತೆ. ತುಸು ವಿಶ್ರಾಂತಿಗೂ ಪರದಾಡುವ ಮಹಿಳೆಯರು, ಹಿರಿಯರು.

Advertisement

ಇದು ಮಂಗಳೂರಿನ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮುಂದೆ ಪ್ರತಿನಿತ್ಯವೆಂಬಂತೆ ಕಂಡುಬರುವ ದೃಶ್ಯ. ನವಭಾರತ್‌ ವೃತ್ತದ ಬಳಿ ಇರುವ ಮಂಗಳೂರು ಪಾಸ್‌ಪೋರ್ಟ್‌ ಕೇಂದ್ರದ ಎದುರು ಸೂಕ್ತ ಸ್ಥಳಾವಕಾಶವಿಲ್ಲ ಎಂಬ ದೂರು ಗ್ರಾಹಕರದ್ದು. ಈ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ದ.ಕ. ಜಿಲ್ಲೆ ಮಾತ್ರವಲ್ಲದೆ ಉಡುಪಿ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನಿತ್ಯವೂ 500 ರಿಂದ 600 ಮಂದಿ ಗ್ರಾಹಕರು ಆಗಮಿಸಿ ಸರದಿಯಲ್ಲಿ ನಿಲ್ಲುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅರ್ಧ ತಾಸು, ಒಂದು ತಾಸಿಗಿಂತಲೂ ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಆದರೆ ಸ್ಥಳಾವಕಾಶದ ಕೊರತೆಯಿಂದ ಮುಖ್ಯವಾಗಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತಿದೆ.

ಸಣ್ಣ ಜಗಲಿಯಲ್ಲೇ ವಿಶ್ರಾಂತಿ
ಸಾಲು ನಿಲ್ಲುವ ಜಾಗದಲ್ಲೇ ಇರುವ ಸಣ್ಣ ಜಗಲಿಯಲ್ಲಿಯೇ ಕುಳಿತುಕೊಳ್ಳಬೇಕು. ಇಲ್ಲವೇ ಅಕ್ಕಪಕ್ಕದ ಅಂಗಡಿ, ಹೊಟೇಲ್‌ಗ‌ಳ ಎದುರು ಕುಳಿತು ಕಾಯಬೇಕು. ಸಾಲು ನಿಲ್ಲುವ ಸ್ಥಳದ ಅರ್ಧ ಭಾಗಕ್ಕೆ ಫೈಬರ್‌ ಶೀಟ್‌ನ ಮೇಲ್ಛಾವಣಿ ನಿರ್ಮಿಸಲಾಗಿದ್ದರೂ ಮಳೆ, ಬಿಸಿಲಿನಿಂದ ಪೂರ್ಣ ರಕ್ಷಣೆ ಸಿಗುತ್ತಿಲ್ಲ. ವಾಹನ ನಿಲುಗಡೆಗೂ ಇಲ್ಲಿ ಸೂಕ್ತ ಸ್ಥಳಾವಕಾಶವಿಲ್ಲ ಎನ್ನುವುದು ಹಲವರ ದೂರು.

ಒಳಗೆಯೂ ಸ್ಥಳಾವಕಾಶವಿಲ್ಲ
ಸ್ಥಳಾವಕಾಶದ ಕೊರತೆಯ ಜತೆಗೆ ನಿಧಾನಗತಿಯ ಸೇವೆಯ ಬಗ್ಗೆಯೂ ಗ್ರಾಹಕರಿಂದ ದೂರಿದೆ. ತಾಸುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ನಾನು ನನ್ನ ಕುಟುಂಬಿಕರೊಂದಿಗೆ ಪಾಸ್‌ಪೋರ್ಟ್‌
ಕೇಂದ್ರಕ್ಕೆ ಮಧ್ಯಾಹ್ನ 12.15ಕ್ಕೆ ಹೋಗಿದ್ದೆ.

ಅಪರಾಹ್ನ 3.30ಕ್ಕೆ ಹೊರಗೆ ಬಂದಿದ್ದೇನೆ. ಪಾಸ್‌ಪೋರ್ಟ್‌ ಕೇಂದ್ರವನ್ನು ವಿಶಾಲಗೊಳಿಸಿ ಉತ್ತಮ ಸೇವೆ ದೊರೆಯುವಂತೆ ಮಾಡಬೇಕು ಎಂದು ವಸಂತಿ ಸಾಲಿಯಾನ್‌ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ವೈಟಿಂಗ್‌ ಲಾಂಜ್‌ ವ್ಯವಸ್ಥೆ ಇದೆ
ಆನ್‌ಲೈನ್‌ನಲ್ಲಿ ನೋಂದಣಿಯಾದವರಿಗೆ ನಿರ್ದಿಷ್ಟ ದಿನದಂದು ನಿಗದಿತ ಸಮಯಕ್ಕೆ ಹಾಜರಾಗಲು ಸೂಚಿಸಲಾಗುತ್ತದೆ. ಅದರಂತೆ ಟೋಕನ್‌ ವ್ಯವಸ್ಥೆ ಇದೆ. ಆದರೆ ಕೆಲವು ಮಂದಿ ಅರ್ಜಿದಾರರು ಸಂಜೆಗೆ ಸಮಯ ನಿಗದಿಯಾಗಿದ್ದರೂ ಬೆಳಗ್ಗೆಯೇ ಬರುತ್ತಾರೆ. ಕಚೇರಿಯ ಒಳಗೆ ಸಾಮಾನ್ಯವಾಗಿ ಅರ್ಜಿದಾರರಿಗೆ ಮಾತ್ರ ಪ್ರವೇಶ ಅವಕಾಶವಿದೆ. ಅರ್ಜಿದಾರರು ಹಿರಿಯ ನಾಗರಿಕರಾಗಿದ್ದು ಅವರಿಗೆ ಸಹಾಯಕರಾಗಿ ಬರುವ ಇನ್ನೋರ್ವರಿಗೆ ಅವಕಾಶ ನೀಡಲಾಗುತ್ತದೆ. ಕಚೇರಿ ಹೊರಗೆ ಯಾರೂ ನಿಂತುಕೊಳ್ಳುವ ಅಗತ್ಯವಿಲ್ಲ. ಕಚೇರಿ ಕಟ್ಟಡದಲ್ಲಿ ವೈಟಿಂಗ್‌ ಲಾಂಜ್‌ ಇದ್ದು ಅಗತ್ಯ ವ್ಯವಸ್ಥೆ ಇದೆ. ಸೇವೆ ನೀಡುವಲ್ಲಿಯೂ ಯಾವುದೇ ವಿಳಂಬ ಆಗುತ್ತಿಲ್ಲ ಎಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರೇ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಆದಾಯದ ಮೂಲ. ಆದರೆ ಅಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳುವುದಕ್ಕೂ ಜಾಗವಿಲ್ಲ. ಇಲ್ಲಿಗೆ ಎಲ್ಲರೂ ಯುವಕರೇ ಬರುವುದಿಲ್ಲ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಕೂಡ ಬರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು.
– ದಿಲ್‌ರಾಜ್‌ ಆಳ್ವ, ಸಾಮಾಜಿಕ ಕಾರ್ಯಕರ್ತರು

Advertisement

Udayavani is now on Telegram. Click here to join our channel and stay updated with the latest news.

Next