Advertisement

ಪಾಸ್‌ಪೋರ್ಟ್‌ ಕೇಂದ್ರ ಲೋಕಾರ್ಪಣೆ

06:10 PM Mar 01, 2018 | Team Udayavani |

ತುಮಕೂರು: ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ನಿರೀಕ್ಷೆಯಾದ ಪಾಸ್‌ಪೋರ್ಟ್‌ ಸೇವಾಕೇಂದ್ರದ ಕನಸು ಇಂದು ನನಸಾಗಿದೆ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ತಿಳಿಸಿದರು.

Advertisement

ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಪಿಆ್ಯಂಡ್‌ಟಿ ಕ್ವಾರ್ಟರ್ಸ್‌ನಲ್ಲಿ ಬುಧವಾರ ಅಂಚೆ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ತುಮಕೂರು ಈಗ ಎಲ್ಲಾಕ್ಷೇತ್ರದಲ್ಲಿ ಬೆಳವಣಿಗೆ ಯಾಗುತ್ತಿದೆ. ಎಲ್ಲಾ ಯೋಜನೆಗಳು ಚುರುಕು ಗೊಂಡಿವೆ. ಇಲ್ಲಿ ಪಾಸ್‌ ಪೋರ್ಟ್‌ ಆರಂಭಿಸಲು ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಿದೆ. ಜೊತೆಗೆ ಇಲ್ಲಿಯ ಶಾಸಕರು ಮತ್ತು ಅಧಿಕಾರಿಗಳು ಸಹಕರಿಸಿದ್ದರಿಂದ ಇಷ್ಟು ಬೇಗ ಇಲ್ಲಿ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು.

ಎಲ್ಲರಿಗೂ ಅನುಕೂಲ: ವಿದೇಶಕ್ಕೆ ಪ್ರವಾಸಕ್ಕೆ ಹೋಗಲು ಪಾಸ್‌ ಪೋರ್ಟ್‌ ಮಾಡಿಸುವುದಷ್ಟಕ್ಕೇ ಅಲ್ಲದೆ ಶೈಕ್ಷಣಿಕ ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳು ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು, ಜೊತೆಗೆ ಪ್ರಮುಖ ಗುರುತಿನ ಚೀಟಿಯಾಗಿ ಪಾಸ್‌ ಪೋರ್ಟ್‌ ಪಡೆಯಬಹುದಾಗಿದೆ. ಈ ಸೇವೆ ಈಗ ಜಿಲ್ಲೆಯಲ್ಲಿಯೇ ಆರಂಭವಾಗಿದೆ ಇದರ ಉಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. 

ಅತ್ಯಮೂಲ್ಯ ದಾಖಲೆ: ಇನ್ನೂ ಮುಂದೆ ತುಮಕೂರು ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಪಾಸ್‌ಪೋರ್ಟ್‌ ಪಡೆಯಲು ಅನುಕೂಲವಾಗಿದೆ. ಈ ಹಿಂದೆ ರ್ಸಾಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಪಾಸ್‌ಪೋರ್ಟ್‌ ಪಡೆಯಲು ಬೆಂಗಳೂರಿಗೆ ಹೋಗ ಬೇಕಾಗಿತ್ತು. ಅಲ್ಲಿ ಒಂದು ಸಣ್ಣ ತಪ್ಪಾಗಿದ್ದರೂ ಕೆಲಸ ಆಗುತ್ತಿರಲಿಲ್ಲ. ಅದರ ಬದಲು ಇಲ್ಲಿಯೇ ಪಾಸ್‌ಪೋರ್ಟ್‌ ಪಡೆಯಬಹುದಾಗಿದೆ. ಪಾಸ್‌ಪೋರ್ಟ್‌ ಒಂದು ಅತ್ಯಮೂಲ್ಯವಾದ ದಾಖಲೆಯಾಗಿದ್ದು ಪಾಸ್‌ಪೋರ್ಟ್‌ ಕೇವಲ ವಿದೇಶ ಪ್ರವಾಸಕ್ಕಾಗಿ ಅಲ್ಲದೆ ಅತ್ಯಂತ ಪ್ರಮುಖವಾದ ಒಂದು ಗುರುತಿನ ಚೀಟಿಯೂ ಆಗಿದೆ ಎಂದು ಅವರು ತಿಳಿಸಿದರು.

ಪಾಸ್‌ಪೋರ್ಟ್‌ ನಿಯಮ ಸಡಿಲ: ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಪಾಸ್‌ಪೋರ್ಟ್‌ ಪಡೆಯುವುದು ಅತ್ಯಂತ ಕ್ಲಿಷ್ಟದಾಯಕವಾಗಿತ್ತು. ಆದರೆ ಕೇಂದ್ರ ಸರ್ಕಾರ ಪಾಸ್‌ಪೋರ್ಟ್‌ ಪಡೆಯುವ ನಿಯಮಗಳಲ್ಲಿ ಸಡಿಲಿಕೆಯನ್ನು ತಂದು ತಮ್ಮ ತಮ್ಮ ಜಿಲ್ಲೆಗಳಲ್ಲಿಯೇ ಅಂಚೆ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ತೆರೆಯುತ್ತಿದೆ. ರಾಜ್ಯದಲ್ಲಿ ತುಮಕೂರು ಸೇವಾ ಕೇಂದ್ರ 5ನೆಯದು ಎಂದು ಹೇಳಿದರು.

Advertisement

ಇಂದು ಹೊರ ದೇಶಗಳಿಗೆ ಹೋಗುವುದು ಸರ್ವೇಸಾಮಾನ್ಯವಾಗಿದ್ದು, ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿ ಪ್ರಪಂಚದ ಯಾವುದೇ ದೇಶಕ್ಕೆ ಹೋಗಬೇಕಾದರೆ ಪಾಸ್‌ಪೋರ್ಟ್‌ ಅತ್ಯವಶ್ಯಕವಾಗಿದೆ. ತುಮಕೂರು ಇಂದು ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಲು ಪಾಸ್‌ ಪೋರ್ಟ್‌ ಇಲ್ಲಿಯೇ ಪಡೆಯಬಹುದಾಗಿದೆ ಎಂದರು.

ಆನ್‌ಲೈನ್‌ನಲ್ಲಿ ಅರ್ಜಿ: ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಭರತ್‌ಕುಮಾರ್‌ ಮಾತನಾಡಿ, ಅನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ದಾಖಲಾತಿಗಳ ಪರಿಶೀಲನೆಗೆ ಪಾಸ್‌ಪೋರ್ಟ್‌ ಸೇವಾಕೇಂದ್ರಕ್ಕೆ ಸಂದರ್ಶನಕ್ಕೆ ಬರಬೇಕಿದ್ದು ನಂತರ ಪರಿಶೀಲನೆಗಾಗಿ ಪೊಲೀಸ್‌ ಇಲಾಖೆಗೆ ಕಳುಹಿಸಲಾಗುವುದು. 

ಪೊಲೀಸ್‌ ಇಲಾಖೆಯಿಂದ ಶೀಘ್ರ ಪರಿಶೀಲನೆಯಾದಲ್ಲಿ 10-15 ದಿನಗಳೊಳಗಾಗಿ ಅಭ್ಯರ್ಥಿಗಳ ಮನೆ ಬಾಗಿಲಿಗೆ ಪಾಸ್‌ಪೋರ್ಟ್‌ ತಲುಪಲಿದೆ ಎಂದರು. ರಾಜ್ಯದಲ್ಲಿ ಬಳ್ಳಾರಿ, ಹಾಸನ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಅಂಚೆ ಪಾಸ್‌ ಪೋರ್ಟ್‌ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದೆಂದರು.
 
 ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕರಾದ ಡಾ. ಎಸ್‌. ರಫೀಕ್‌ ಅಹಮದ್‌ ವಹಿಸಿದ್ದರು. ಉಪಮೇಯರ್‌ ಫ‌ರ್ಜಾನಾ ಖಾನಂ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌, ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಡಾ.ದಿವ್ಯಾ ವಿ. ಗೋಪಿನಾಥ್‌, ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್‌ರಾವ್‌ ಮುಂತಾದವರು ಭಾಗವಹಿಸಿದ್ದರು. ದಕ್ಷಿಣ ಕರ್ನಾಟಕ ಪೋಸ್ಟ್‌ಮಾಸ್ಟರ್‌ ಜನರಲ್‌ ರಾಜೇಂದ್ರ ಕುಮಾರ್‌ ಅವರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next