Advertisement
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಅಶ್ಲೀಲ ಪೆನ್‌ಡ್ರೈವ್ ಕೇಸ್‌ನ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್‌ಐಟಿ ಹಗಲಿರುಳೆನ್ನದೆ ಪಣ ತೊಟ್ಟು ನಿಂತಿದೆ. ಪ್ರಜ್ವಲ್ ಜರ್ಮನಿಗೆ ತೆರಳಿರುವುದೇ ಎಸ್‌ಐಟಿ ಬಂಧನಕ್ಕೆ ಅಡ್ಡಿಯಾಗಿತ್ತು. ಕಾನೂನು ತಜ್ಞರ ಮೊರೆ ಹೋಗಿರುವ ಎಸ್‌ಐಟಿಯು ಪಾಸ್‌ಪೋರ್ಟ್ ರದ್ದುಮಾಡಿಸಿ ಪ್ರಜ್ವಲ್ ರೇವಣ್ಣರನ್ನು ಕಟ್ಟಿಹಾಕುವ ಮಾರ್ಗ ಕಂಡುಕೊಂಡಿದೆ. ಈಗ ದೇಶದ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದುಮಾಡುವ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ. ಇದರಿಂದ ಪ್ರಜ್ವಲ್‌ಗೆ ಸಂಕಷ್ಟ ಎದುರಾಗಲಿದ್ದು, ಶೀಘ್ರದಲ್ಲಿ ಅವರು ದೇಶಕ್ಕೆ ವಾಪಸಾಗುವ ಸಾಧ್ಯತೆಗಳಿವೆ.
Related Articles
Advertisement
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದತಿಗೆ ಎಸ್‌ಐಟಿಯು ರಾಜ್ಯ ಗೃಹ ಇಲಾಖೆ ಮೂಲಕ ಭಾರತೀಯ ವಿದೇಶಾಂಗ ಇಲಾಖೆಗೆ ಪತ್ರ ರವಾನಿಸಿತ್ತು. ಸಿಎಂ ಸಿದ್ದರಾಮಯ್ಯ ಈ ಹಿಂದೆ ಪತ್ರ ಬರೆದಾಗ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಇದರ ಬೆನ್ನಲ್ಲೇ ಎಸ್‌ಐಟಿಯು ನ್ಯಾಯಾಲಯದಿಂದ ಬಂಧನ ವಾರೆಂಟ್ ಪಡೆದು ಅದರ ದಾಖಲೆ ಸಮೇತ ಪಾಸ್‌ಪೋರ್ಟ್ ರದ್ದತಿಗೆ ಮತ್ತೂಮ್ಮೆ ಕೇಂದ್ರಕ್ಕೆ ಮನವಿ ಮಾಡಿದೆ.
ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್?:
ಭಾರತದಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಕೆಲವು ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ದಿಲ್ಲಿಯ ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಂ ವಿಭಾಗದಲ್ಲಿ ಮಾತ್ರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಈ ಪಾಸ್‌ಪೋರ್ಟ್‌ನಿಂದ ಕೆಲವು ದೇಶಗಳು ವೀಸಾ ವಿಸ್ತರಿಸಿದರೆ, ಕೆಲವು ದೇಶಗಳಲ್ಲಿ ವೀಸಾ ಮನ್ನಾಕ್ಕೂ ಅವಕಾಶವಿದೆ. ಭಾರತೀಯ ವಿದೇಶಾಂಗ ಸೇವೆಗಳ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಆಯ್ದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು, ಅಧಿಕೃತ ಉದ್ದೇಶಗಳಿಗಾಗಿ ವಿದೇಶಕ್ಕೆ ಭೇಟಿ ನೀಡುವ ವ್ಯಕ್ತಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಮಕ್ಕಳು, ಪಾಲಕರು, ರಾಜತಾಂತ್ರಿಕ ಸ್ಥಾನಮಾನ ಹೊಂದಿರುವ ವ್ಯಕ್ತಿಗಳು, ವಿದೇಶಿ ಪ್ರವಾಸಗಳಿಗಾಗಿ ಭಾರತ ಸರಕಾರದಿಂದ ನೇಮಕಗೊಂಡ ಅಧಿಕಾರಿಗಳು, ಕೇಂದ್ರ ಸರಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗಳಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ಪಡೆಯಲು ಅವಕಾಶಗಳಿವೆ. ಭಾರತ ಸರಕಾರದ ಪರ ಅಧಿಕೃತವಾಗಿ ವಿದೇಶಕ್ಕೆ ಪ್ರಯಾಣಿಸುವ ಸಂದರ್ಭಲ್ಲೂ ಇದನ್ನು ಬಳಸುತ್ತಾರೆ.
ಸಾಮಾನ್ಯ ಪಾಟ್‌ಪೋರ್ಟ್‌ಗಳಿಗಿಂತ ಭಿನ್ನವಾಗಿ ಕಾಣುವ 28 ಪುಟಗಳ ಟೈಪ್ ಡಿ ಪಾಸ್‌ಪೋರ್ಟ್ ಇದಾಗಿದ್ದು, ವಯಸ್ಕರಿಗೆ ಗರಿಷ್ಠ 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಕೆಲವೊಮ್ಮೆ 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ನೀಡಲಾಗುತ್ತದೆ. ಈ ಪಾಸ್‌ಪೋರ್ಟ್ ಅಧಿಕೃತ ಸ್ಥಾನಮಾನ ಒದಗಿಸುತ್ತದೆ. ಅಧಿಕೃತ ಪ್ರವಾಸಗಳೂ ಇದರಿಂದ ಸುಗಮವಾಗಲಿದೆ.
ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ಬಂಧನ ಹೇಗೆ?:
ಪಾಸ್‌ಪೋರ್ಟ್ ರದ್ದಾದರೆ ಮೊದಲು ಆರೋಪಿ ಯಾವ ದೇಶದಲ್ಲಿದ್ದಾನೆ ಎಂಬುದರ ಮಾಹಿತಿ ಸಂಗ್ರಹಿಸಿ ಆ ದೇಶಕ್ಕೆ ಪ್ರಜ್ವಲ್ ವಿರುದ್ಧದ ಪ್ರಕರಣದ ಸಮೇತ ಮಾಹಿತಿ ನೀಡಬೇಕು. ಆ ದೇಶದ ಜತೆಗೆ ಭಾರತವು ಪರಸ್ಪರ ಕಾನೂನು ನೆರವು ಒಪ್ಪಂದ ಪಡೆದಿರಬೇಕು. ಅನಂತರ ಆರೋಪಿ ತಲೆಮರೆಸಿಕೊಂಡಿರುವ ದೇಶವು ಆತನನ್ನು ವಶಕ್ಕೆ ಪಡೆದು ಭಾರತದ ವಿದೇಶಾಂಗ ಇಲಾಖೆಗೆ ಮಾಹಿತಿ ಕೊಡುತ್ತದೆ. ಬಳಿಕ ಪ್ರಕರಣದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದು, ತನಿಖಾಧಿಕಾರಿಗಳ ತಂಡ ವಿದೇಶಿ ಅಧಿಕಾರಿಗಳಿಂದ ಪ್ರಜ್ವಲ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬಹುದು. ಮತ್ತೂಂದೆಡೆ ಆ ದೇಶವೇ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿ ಪ್ರಜ್ವಲ್ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಿಕೊಡಲೂ ಅವಕಾಶಗಳಿವೆ.