ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯದಲ್ಲಿ 50 ವರ್ಷದ ಮಹಿಳೆಯೊಬ್ಬರನ್ನು ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಆಕೆಯ ಅಮೆರಿಕದ ಪಾಸ್ ಪೋರ್ಟ್ ಫೋಟೊಕಾಪಿ ಹಾಗೂ ಇತರ ದಾಖಲೆಗಳು ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ಸೋಮವಾರ (ಜುಲೈ 29) ತಿಳಿಸಿದ್ದಾರೆ.
ಇಲ್ಲಿಂದ ಸುಮಾರು 450 ಕಿಲೋ ಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಹಿಗಳಿಗೆ ಮಹಿಳೆ ಕೂಗುತ್ತಿರುವ ಶಬ್ದ ಕೇಳಿಸಿತ್ತು. ನಂತರ ಅವರು ಕಾಡಿನಲ್ಲಿ ಮಹಿಳೆಯೊಬ್ಬರನ್ನು ಸರಪಳಿಯಿಂದ ಕಟ್ಟಿ ಹಾಕಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿರುವುದಾಗಿ ವರದಿ ವಿವರಿಸಿದೆ.
ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ್ದ ಮಹಿಳೆಯನ್ನು ರಕ್ಷಿಸಿದ್ದು, ಆಕೆಯನ್ನು ಸಾವಂತ್ ವಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯ ಮಾನಸಿಕ ಹಾಗೂ ದೈಹಿಕ ಸ್ಥಿತಿ ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದು, ಆಕೆಯ ಬಳಿ ಇದ್ದ ಹಲವು ಮೆಡಿಕಲ್ ಪ್ರಿಸ್ ಕ್ರಿಪ್ಶನ್ ದೊರೆತಿರುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನ ವಿಳಾಸ ಹೊಂದಿರುವ ಆಧಾರ್ ಕಾರ್ಡ್, ಅಮೆರಿಕ ಪಾಸ್ ಪೋರ್ಟ್ ನ ಫೋಟೋಕಾಪಿ ಪತ್ತೆಯಾಗಿದೆ. ಈಕೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದೆ. ಆಕೆಯ ವೀಸಾ ಅವಧಿ ಮುಕ್ತಾಯಗೊಂಡಿದ್ದು, ಮಹಿಳೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆಕೆಯ ಪೌರತ್ವವನ್ನು ಕಂಡುಹಿಡಿಯುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಯಾವುದೇ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲಾ, ಕಳೆದ ಹಲವಾರು ದಿನಗಳಿಂದ ಆಕೆಗೆ ಊಟೋಪಚಾರ ಇಲ್ಲದೆ ತೀವ್ರ ನಿತ್ರಾಣಗೊಂಡಿದ್ದಾಳೆ. ಆಕೆಯನ್ನು ಎಷ್ಟು ದಿನಗಳಿಂದ ಮರಕ್ಕೆ ಕಟ್ಟಿ ಹಾಕಲಾಗಿತ್ತು ಎಂಬುದು ತಿಳಿದಿಲ್ಲ. ಆಕೆಯ ಆರೋಗ್ಯ ಸುಧಾರಣೆಯ ನಂತರ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.