Advertisement

ಪದಕ ಗೆದ್ದ ಪಾಷಾಗೆ ಬ್ಯಾಂಕಿಂದ ಅಮ್ಮನ ಚಿನ್ನ ಬಿಡಿಸುವ ಚಿಂತೆ

11:35 AM Oct 04, 2017 | |

ಮಂಗಳೂರು: ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಆಸೆಗೆ ಅಡ್ಡಿಯಾದದ್ದು ಆರ್ಥಿಕ ಸಂಕಷ್ಟ. ಕೊನೆಗೆ ತಾಯಿಯೇ ತನ್ನ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸ್ಪರ್ಧೆಗೆ ಕಳುಹಿಸಿಕೊಟ್ಟರು. ಇದೀಗ 3 ಪದಕಗಳೊಂದಿಗೆ ಬೆಸ್ಟ್‌ ಲಿಫ್ಟರ್‌ ಆಗಿ ಸ್ವದೇಶಕ್ಕೆ ಹಿಂತಿರುಗಿರುವ ಮಗನ ಬಗ್ಗೆ ತಾಯಿಗೆ ಹೆಮ್ಮೆ. ಆದರೆ ಮಗನಿಗೆ ತನ್ನ ಸಾಧನೆಯ ಖುಷಿಯ ಜತೆಗೆ ತಾಯಿಯ ಚಿನ್ನವನ್ನು ಬ್ಯಾಂಕಿನಿಂದ ಬಿಡಿಸಿಕೊಳ್ಳುವ ಚಿಂತೆ !

Advertisement

ಹೌದು. ಇದು ಕಾಮನ್‌ವೆಲ್ತ್‌ ಚಾಂಪಿ ಯನ್‌ಶಿಪ್‌ನಲ್ಲಿ ಭಾಗವಹಿಸಿ ಬರೋಬ್ಬರಿ 3 ಪದಕ ಗೆದ್ದ ವಿದ್ಯಾರ್ಥಿಯ ಜಯದ ಹಿಂದಿರುವ ನೋವಿನ ಕತೆ. ನಗರದ ಸಂತ ಅಲೋಶಿಯಸ್‌ ಕಾಲೇಜಿನ ಪ್ರಥಮ ಬಿಬಿಎಂ ವಿದ್ಯಾರ್ಥಿ, ಕುಲಶೇಖರದ ಇಸ್ರಾರ್‌ ಪಾಷಾ ಅವರು ಸೆಪ್ಟಂಬರ್‌ 11ರಿಂದ 17ರ ತನಕ ದಕ್ಷಿಣ ಆಫ್ರಿಕಾದ ಪೊಚೆಫ್‌ಸೂóಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, ಒಂದು ಬೆಳ್ಳಿ ಪದಕ ಪಡೆದು 2ನೇ ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿಯೊಂದಿಗೆ ಸ್ವದೇಶಕ್ಕೆ ಮರಳಿ ದ್ದಾರೆ. ಕ್ಲಾಸಿಕ್‌ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ, ಇಕ್ಯೂಪ್‌ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಮತ್ತು ಎರಡನೇ ಬೆಸ್ಟ್‌ ಪವರ್‌ ಲಿಫ್ಟರ್‌, 205 ಕೆ.ಜಿ. ತೂಕದ ಅನ್‌ ಇಕ್ಯೂಪ್‌ ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅಲ್ಲದೇ ಇವರು 19 ವರ್ಷದೊಳಗಿನ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಪ್ರತಿನಿಧಿ. 

ಇಸ್ರಾರ್‌ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಇಂಡಿಯನ್‌ ಪವರ್‌ಲಿಫ್ಟಿಂಗ್‌ ಫೆಡರೇಶನ್‌ಗೆ ಸುಮಾರು ಒಂದು ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಅಗತ್ಯವಾಗಿ ಪಾವತಿಸಬೇಕಿತ್ತು. ಆದರೆ ಬಡ ಕುಟುಂಬದ ಹಿನ್ನೆಲೆ ಹೊಂದಿರುವ ಅವರ ಹೆತ್ತವರಿಗೆ ಇಷ್ಟೊಂದು ಹಣ ಹೊಂದಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದೇ ಅನುಮಾನವಾಗಿತ್ತು. ಆದರೆ ಮಗನ ಕ್ರೀಡಾ ಭವಿಷ್ಯವನ್ನು ಕಮರಿಸಲು ಮನಸ್ಸಿಲ್ಲದೆ ತಾಯಿ ಖತೀಜಾ ಅವರು ತಮ್ಮ ಚಿನ್ನವನ್ನು ಬ್ಯಾಂಕ್‌ ನಲ್ಲಿ ಅಡವಿಟ್ಟು 1 ಲಕ್ಷ ರೂ.ಗಳನ್ನು ಹೊಂದಿಸಿ ದ್ದಾರೆ. ತಂದೆ ಅಬ್ದುಲ್ಲ ಅವರೂ ಅಷ್ಟಿಟ್ಟು ಹಣ ಒಟ್ಟು ಮಾಡಿ ಕೊನೆಗೂ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಕನಸಾಗಿದ್ದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಬಯಕೆ ನನಸಾಗಿದ್ದೂ ಸ್ಪರ್ಧೆಯ ಮುನ್ನಾದಿನವಷ್ಟೇ. 

ಆರ್ಥಿಕ ಸಹಕಾರ ದೊರೆತಿಲ್ಲ
ಹೆತ್ತವರ ಶ್ರಮಕ್ಕೆ ಇದೀಗ ಮಗ ಮೂರು ಪದಕಗಳನ್ನು ಅರ್ಪಿಸಿದ್ದಾರೆ. ಮಗನ ಸಾಧನೆಗೆ ತಾಯಿ ಖತೀಜಾ ಅವರೂ ಹೆಮ್ಮೆ ಪಡುತ್ತಿದ್ದಾರೆ. ಆದರೆ ಇಸ್ರಾರ್‌ ಮಾತ್ರ ಪದಕ ಪಡೆದಿರುವ ಖುಷಿಯ ನಡುವೆ ಬ್ಯಾಂಕ್‌ನಲ್ಲಿಟ್ಟಿರುವ ತಾಯಿಯ ಚಿನ್ನವನ್ನು ಬಿಡಿಸಿಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ. “ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ನನ್ನ ಶ್ರಮ ವ್ಯರ್ಥವಾಗಿಲ್ಲ ಎಂಬ ಖುಷಿಯಿದೆ. ಇದಕ್ಕೆ ಹೆತ್ತವರ ಪ್ರೋತ್ಸಾಹವೇ ಕಾರಣ. ಪದಕ ಗೆದ್ದು ಬಂದರೂ ನನಗೆ ಸರಕಾರದಿಂದಾಗಲೀ, ಇತರ ಸಂಘ- ಸಂಸ್ಥೆಗಳಿಂದಾಗಲಿ ಯಾವುದೇ ಆರ್ಥಿಕ ಸಹಕಾರ ದೊರೆತಿಲ್ಲ. ತಾಯಿಯ ಚಿನ್ನ ವನ್ನು ಅಡವಿಟ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿದೆ’ ಎನ್ನುತ್ತಾರೆ ಇಸ್ರಾರ್‌ ಪಾಷಾ.

ಭರವಸೆಯ ಕ್ರೀಡಾಪಟು
ಬಿಕರ್ನಕಟ್ಟೆ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ಶುಭಕರ ಶೆಟ್ಟಿ ಅವರಿಂದ ತರಬೇತಿ ಪಡೆಯುತ್ತಿರುವ ಇಸ್ರಾರ್‌ ಅವರಿಗೆ ಕರ್ನಾಟಕ ಪವರ್‌ಲಿಫ್ಟಿಂಗ್‌ ಅಸೋಸಿಯೇಶನ್‌ನ ಸತೀಶ್‌ ಕುಮಾರ್‌ ಕುದ್ರೋಳಿ ಅವರು ನಿರಂತರ ವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. 10ನೇ ತರಗತಿಯಿಂದ ಪವರ್‌ಲಿಫ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಚಿನ್ನ, ಬೆಳ್ಳಿ ಪದಕಗಳನ್ನು ಪಡೆದು ಭರವಸೆಯ ಕ್ರೀಡಾ ಪಟು ಎನಿಸಿಕೊಂಡಿದ್ದಾರೆ. 

Advertisement

ಖುಷಿಯ ನಡುವೆ ಬೇಸರ
ತೀವ್ರ ಪೈಪೋಟಿ ಇದ್ದರೂ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಸ್ಥಾನದೊಂದಿಗೇ ಇಸ್ರಾರ್‌ ಆಯ್ಕೆಯಾಗಿದ್ದರು. ಆದರೂ ಫೆಡರೇಶನ್‌ಗೆ ಲಕ್ಷ ಪಾವತಿಸಲೇ ಬೇಕಿತ್ತು. “ಪದಕ ಗೆದ್ದರೂ, ನಗದು ಬಹುಮಾನಗಳಿಲ್ಲದ ಕಾರಣ, ಗೆದ್ದ ಪದಕದ ನಡುವೆ ತಾಯಿಯ ಚಿನ್ನವನ್ನು ಅಡವಿಟ್ಟ ಬೇಸರವಿದೆ. ಅದಿನ್ನೂ ಬ್ಯಾಂಕಿನಲ್ಲಿಯೇ ಇರುವು ದರಿಂದ ಲಕ್ಷ ಹೊಂದಿಸುವುದೂ ಚಿಂತೆಯಾಗಿದೆ’ಎನ್ನುತ್ತಾರೆ ಪಾಷಾ.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next