ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ಮುಂಜಾವ ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪ್ರಸ್ತುತ ಅಷ್ಟಮಠಗಳಲ್ಲಿ ಜ್ಯೇಷ್ಠ ಯತಿಗಳು. ಹಾಲಿ ಪೀಠಾಧೀಶರಲ್ಲಿ ನಾಲ್ಕನೆಯ ಬಾರಿಗೆ ಪೀಠಾರೋಹಣ ಮಾಡುತ್ತಿರುವ ಹಿರಿಯರು. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಬಳಿಕ ಹಿರಿತನ ಇವರ ಪಾಲಿಗೆ ಬಂದಿದೆ.
ಮಧ್ವಾಚಾರ್ಯರ 2ನೇ ತಲೆಮಾರಿನ ಯತಿಗಳಲ್ಲಿ ವೃಂದಾವನ ಸಿಗುತ್ತಿರುವುದೂ ಕೃಷ್ಣಾಪುರ ಮಠದಲ್ಲಿ ಮಾತ್ರ. ಕುಂದಾಪುರ ತಾಲೂಕಿನ ನೇರಂಬಳ್ಳಿ ಮಠದಲ್ಲಿ ಮಧ್ವರ ಶಿಷ್ಯ ಶ್ರೀಜನಾರ್ದನತೀರ್ಥರ ಶಿಷ್ಯ ಶ್ರೀವತ್ಸಾಂಕತೀರ್ಥರ ವೃಂದಾವನವಿದೆ.
ಶ್ರೀವಿದ್ಯಾಸಾಗರತೀರ್ಥರು ಕೃಷ್ಣಾ ಪುರ ಮಠದ ಪ್ರಸ್ತುತ 34ನೆಯ ಯತಿಗಳು. 31ನೆಯ ಯತಿಗಳಾದ ಶ್ರೀವಿದ್ಯಾಧೀಶತೀರ್ಥರು (1808-1881) ನಾಲ್ಕು ಬಾರಿ ಪರ್ಯಾಯ ಪೀಠಾರೋಹಣ ಮಾಡಿದ್ದರು. ಆ ಬಳಿಕ ಈ ಮಠದಲ್ಲಿ ಆ ಅವಕಾಶ ಸಿಗುತ್ತಿರುವುದು ಇವರಿಗೆ ಮಾತ್ರ.
ಉಡುಪಿ ತೆಂಕಪೇಟೆಯ ಟಿ.ಶ್ರೀಪತಿ ಮತ್ತು ಜಾನಕಿ ಅವರ ಪುತ್ರನಾಗಿ 15.03.1958ರಲ್ಲಿ ಜನಿಸಿದ ಇವರ ಹೆಸರು ರಮಾಪತಿ. ಇವರು ವಳಕಾಡು ಶಾಲೆಯಲ್ಲಿ ಓದುತ್ತಿರುವಾಗ 13ನೆಯ ವಯಸ್ಸಿನಲ್ಲಿ ದ್ವಂದ್ವಮಠವಾದ ಪುತ್ತಿಗೆ ಮಠದ ಶ್ರೀಸುಜ್ಞಾನೇಂದ್ರತೀರ್ಥ ಶ್ರೀಪಾದರಿಂದ 03.06.1971ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿ ಶ್ರೀವಿದ್ಯಾಸಾಗರತೀರ್ಥರಾದರು. ಸೋದೆ ಮಠದ ಶ್ರೀ ವಿಶ್ವೋತ್ತಮತೀರ್ಥರಿಂದ ವೇದಾಂತದ ಉನ್ನತ ಗ್ರಂಥಗಳನ್ನು ಅಭ್ಯಸಿಸಿದರು. ಶ್ರೀಶ್ರೀ ವಿಶ್ವೋತ್ತಮತೀರ್ಥರು ವಿಶಿಷ್ಟವಾದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದು ಶ್ರೀವಿದ್ಯಾಸಾಗರತೀರ್ಥರಿಗೂ ಅವುಗಳ ಮಹತ್ವವನ್ನು ತಿಳಿಹೇಳಿದ್ದಾರೆ.
ಇದರಿಂದಾಗಿಯೇ ಸನ್ಯಾಸಿಜೀವನದಲ್ಲಿ ಪೂರ್ಣಾಂಕ ಹೊಂದಿದ್ದಾರೆ. ಶ್ರೀಪಾದರ ವಿಶೇಷ ವೈದುಷ್ಯ ಇರುವುದು ವ್ಯಾಕರಣಶಾಸ್ತ್ರದಲ್ಲಿಯಾದರೂ ಇದು ಹೊರಗಿನ ಜಗತ್ತಿಗೆ ತಿಳಿದಿಲ್ಲ. ತಾಡವಾಲೆ ಗ್ರಂಥಗಳ ಸಂರಕ್ಷಣೆ, ಪಾಠಶೋಧನೆಗೆ ಒತ್ತು ನೀಡುತ್ತಿದ್ದಾರೆ. ಜತೆ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇವರೂ ವಿದ್ಯಾಗುರು ಶ್ರೀ ವಿಶ್ವೋತ್ತಮತೀರ್ಥರಂತೆ ಜನಜಂಗುಳಿಯಿಂದ ದೂರವಿದ್ದು ಏಕಾಂತೋಪಾಸನೆಯಲ್ಲಿ ಆಸಕ್ತರು.
1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆಗಳನ್ನು ನೆರ ವೇರಿಸಿ ಈಗ 2022-23ರ ಅವಧಿಗೆ ಪೂಜಾಕೈಂಕರ್ಯ ನಡೆಸಲು ಅಣಿಯಾಗಿದ್ದಾರೆ. ಹಿಂದಿನ ಪರ್ಯಾಯಗಳಲ್ಲಿ ಗೋಶಾಲೆ, ವೃಂದಾವನ ಸಮುಚ್ಚಯದ ಜೀರ್ಣೋದ್ಧಾರ, ಮುಖ್ಯಪ್ರಾಣ ದೇವರಿಗೆ ವಜ್ರಕವಚದ ಸಮರ್ಪಣೆಯೇ ಮೊದಲಾದ ಕಾರ್ಯಗಳನ್ನು ನಡೆಸಿದ್ದಾರೆ.