Advertisement
ಪರ್ಯಾಯದ ವಿಧಿ, ವಿಧಾನಗಳು* ಶುಕ್ರವಾರ ಮಧ್ಯರಾತ್ರಿಯ ಬಳಿಕ ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಬಂದ ಶ್ರೀ ಈಶಪ್ರಿಯತೀರ್ಥರು, ಉಡುಪಿ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರ ಪೂಜೆ ನಡೆಸಿದರು.
Related Articles
Advertisement
ಪಲಿಮಾರು ಶ್ರೀಗಳಿಂದ ನೈರ್ಮಲ್ಯ ವಿಸರ್ಜನ ಪೂಜೆ: ಶ್ರೀಕೃಷ್ಣ ಮಠದಲ್ಲಿ ನಿರ್ಗಮನ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಶುಕ್ರವಾರ ಮಧ್ಯರಾತ್ರಿಯಿಂದಲೇ ಪರ್ಯಾಯ ಪೀಠದಲ್ಲಿ ಕುಳಿತುಕೊಂಡು, ಭಕ್ತರಿಗೆ ಪ್ರಸಾದ ವಿತರಿಸಿದರು. ಪ್ರಾತಃಕಾಲ ಸ್ನಾನ ಮಾಡಿ, ಶ್ರೀಕೃಷ್ಣನಿಗೆ ನೈರ್ಮಲ್ಯ ವಿಸರ್ಜನೆ ಪೂಜೆ ನಡೆಸಿದರು. ಅದಮಾರು ಮಠದ ವಿಶ್ವಪ್ರಿಯತೀರ್ಥರೂ ಉಪಸ್ಥಿತರಿದ್ದು, ಪೂಜೆಗೆ ಸಹಕರಿಸಿದರು.
ಅದಮಾರು ಕಿರಿಯ ಶ್ರೀಗಳಿಗೆ ಸ್ವಾಗತ: ಈಶಪ್ರಿಯತೀರ್ಥರು ಶ್ರೀಕೃಷ್ಣ ಮಠವನ್ನು ಪ್ರವೇಶಿಸುವಾಗ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರು ಇದಿರುಗೊಂಡು ಮಠದೊಳಗೆ ಕರೆದೊಯ್ದರು. ಮಧ್ವಸರೋವರದಲ್ಲಿ ಪಾದಪ್ರಾಕ್ಷಾಳನ ನಡೆಸಿದ ಬಳಿಕ ದೇವರ ದರ್ಶನ ಮಾಡಿಸಿದರು. ಶ್ರೀಕೃಷ್ಣಮಠದ ಗರ್ಭಗುಡಿಯ ಹೊರಗೆ ಇರುವ ಆಚಾರ್ಯ ಮಧ್ವರ ಪ್ರತಿಮೆ ಎದುರು ಪಲಿಮಾರು ಮಠಾಧೀಶರು ಅಕ್ಷಯಪಾತ್ರೆ, ಬೀಗದ ಕೀಲಿಗಳನ್ನು ಅದಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಈ ವೇಳೆ, ಮಂಗಲದ ಸಂಕೇತವಾಗಿ ವೈದಿಕರು ವೇದಗಳ ವಿವಿಧ ಸೂಕ್ತಗಳನ್ನು ಪಠಿಸಿದರು.
ಸರ್ವಜ್ಞ ಪೀಠಾರೋಹಣ: ಸರ್ವಜ್ಞ ಪೀಠಾರೋಹಣ ಮಾಡುವ ಸಂದರ್ಭದಲ್ಲಿ ಮೊದಲಿಗೆ ಪಲಿಮಾರು ಶ್ರೀಪಾದರು ಅದಮಾರು ಹಿರಿಯ ಶ್ರೀಗಳನ್ನು ಪೀಠದಲ್ಲಿ ಕುಳ್ಳಿರಿಸಿದರು. ಬಳಿಕ, ಹಿರಿಯ ಶ್ರೀಗಳು ತಮ್ಮ ಪಟ್ಟಶಿಷ್ಯ ಈಶಪ್ರಿಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿದರು. ಅಲ್ಲಿಂದ ನೇರವಾಗಿ ಬಡಗುಮಾಳಿಗೆಯಲ್ಲಿ ನಿರ್ಮಿಸಲಾದ ಅರಳು ಗದ್ದಿಗೆಯಲ್ಲಿ ವಿವಿಧ ಮಠಾಧೀಶರು ಅಲಂಕೃತರಾದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥರಿಗೆ ಶ್ರೀ ಈಶ ಪ್ರಿಯತೀರ್ಥರು ಗಂಧಾದಿ ಉಪಚಾರಗಳನ್ನು ಮಾಡಿದರು.
ಇತರ ಮಠಾಧೀಶರು ಶ್ರೀ ಈಶ ಪ್ರಿಯತೀರ್ಥರಿಗೆ ಪಟ್ಟದ ಕಾಣಿಕೆಯನ್ನು ಸಮರ್ಪಿಸಿದರು. ನೈರ್ಮಲ್ಯ ವಿಸರ್ಜನೆ ಪೂಜೆಯ ಬಳಿಕ ನಡೆಯಬೇಕಾದ ಉಷ:ಕಾಲ ಪೂಜೆ, ಪಂಚಾಮೃತ ಅಭಿಷೇಕ, ಕಲಶಪೂಜೆ ಮೊದಲಾದ ಪೂಜೆಗಳನ್ನು ಇತರ ಮಠಾಧೀಶರು ನಡೆಸಿದರೆ, ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯತೀರ್ಥರು ಅರ್ಚನೆ, ಅವಸರ ಸನಕಾದಿ ಪೂಜೆ, ಮಹಾಪೂಜೆಗಳನ್ನು ಪ್ರಥಮ ಬಾರಿಗೆ ನಡೆಸಿದರು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಅಖಂಡ ಭಜನೆ ಸಮಾಪನ: ಶ್ರೀಕೃಷ್ಣ ಮಠದ ಕನಕಗೋಪುರದ ಬಳಿ ಎರಡು ವರ್ಷಗಳ ಹಿಂದೆ ಜನವರಿ 18ರ ಸೂರ್ಯೋದಯದ ವೇಳೆ ಆರಂಭಗೊಂಡ ಅಖಂಡ ಭಜನ ಕಾರ್ಯಕ್ರಮವು ಶನಿವಾರ ಸೂರ್ಯೋದಯದ ವೇಳೆ ಸಮಾಪನಗೊಂಡಿತು. ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಪಲಿಮಾರು ಮಠದ ಪಟ್ಟದ ದೇವರಾದ ಶ್ರೀ ರಾಮಚಂದ್ರ ದೇವರಿಗೆ ಮಂಗಳಾರತಿ ಬೆಳಗುವ ಮೂಲಕ ಅಖಂಡ ಭಜನೆ ಮುಕ್ತಾಯಗೊಂಡಿತು.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಸಾವಿರಾರು ಭಜನಾ ಮಂಡಳಿಗಳ ಸದಸ್ಯರು ಹರಿ ನಾಮ ಸಂಕೀರ್ತನ ಯಜ್ಞದಲ್ಲಿ ಪಾಲ್ಗೊಂಡಿದ್ದರು. ತಿರುಪತಿ ಮತ್ತು ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಭಜನಾ ಮಂಡಳಿಗಳ ಸಹಕಾರದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.