Advertisement

ಭರಣಿ ಸನ್‌ ಆಫ್ ಪಾರ್ವತಮ್ಮ 

12:07 PM Aug 15, 2018 | |

ಹರಿಪ್ರಿಯಾ ಅಭಿನಯದ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ಬಗ್ಗೆ ಗೊತ್ತು. ಆದರೆ, “ಪಾರ್ವತಮ್ಮನ ಮಗ’ ಚಿತ್ರದ ಬಗ್ಗೆ ಗೊತ್ತಾ? ಅದೇ ಈ ಸುದ್ದಿಯ ವಿಶೇಷ. ಈ ಹಿಂದೆ “ಲೂಸ್‌ ಮಾದ’ ಖ್ಯಾತಿಯ ಯೋಗಿ ಅವರ ಸಂಬಂಧಿ ಮಾಧವ ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆಗ ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿರಲಿಲ್ಲ. ನಾಯಕಿಯ ಆಯ್ಕೆಯೂ ಆಗಿರಲಿಲ್ಲ. ಈಗ ಆ ಎರಡಕ್ಕೂ ಉತ್ತರ ಸಿಕ್ಕಿದೆ.

Advertisement

ಅಂದಹಾಗೆ, ಚಿತ್ರಕ್ಕೆ “ಭರಣಿ’ ಎಂದು ನಾಮಕರಣ ಮಾಡಲಾಗಿದೆ. “ಪಾರ್ವತಮ್ಮನ ಮಗ’ ಎಂಬ ಅಡಿಬರಹವೂ ಇಲ್ಲಿದೆ. ಇಲ್ಲಿ “ಭರಣಿ’ ಎನ್ನುವುದಕ್ಕಿಂತ “ಪಾರ್ವತಮ್ಮನ ಮಗ’ ಎಂಬುದು ಹೈಲೆಟ್‌. ಅಲ್ಲಿಗೆ ಇದೊಂದು ತಾಯಿ ಮಗನ ಬಾಂಧವ್ಯ ಬಿಂಬಿಸುವ ಅಪ್ಪಟ ದೇಸಿ ಚಿತ್ರ ಎಂಬುದನ್ನು ಸಾರುತ್ತದೆ. ಇನ್ನು, ಚನಾನಿ ರಾಜ ಈ ಚಿತ್ರದ ನಿರ್ದೇಶಕರು. “ಅದ್ಧೂರಿ’, “ರಾಟೆ’, “ಕಿಸ್‌’ “ಬಹದ್ದೂರ್‌’ ಮತ್ತು “ಭರ್ಜರಿ’ ಚಿತ್ರಗಳ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಇದೆ. ಇದು ಅವರ ಮೊದಲ ಚಿತ್ರ. ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಾಜಮೌಳಿ ನಿರ್ದೇಶನದ “ಯಮದೊಂಗ’ ಚಿತ್ರದಲ್ಲಿ ಕಲಾ ವಿಭಾಗದಲ್ಲಿ ಕೆಲಸ
ಮಾಡಿದ್ದಾರೆ.

ಈ ಚಿತ್ರದ ಫೋಟೋಶೂಟ್‌ಗಾಗಿಯೇ ಕೇರಳಕ್ಕೆ ಹೋಗಿದ್ದ ನಿರ್ದೇಶಕರು, ಅಲ್ಲಿ ಆನೆಯೊಂದಿಗೆ ನಾಯಕ, ನಾಯಕಿಯ ಫೋಟೋಶೂಟ್‌ ಮಾಡಿಸಿದ್ದಾರೆ. “ಆನೆ ಕೂಡ ಚಿತ್ರದ ಒಂದು ಭಾಗವಾಗಿದ್ದು, ಚಿತ್ರದ ಹೈಲೆಟ್‌ ಗಳಲ್ಲೊಂದು. ಆನೆ ಚಿತ್ರದಲ್ಲಿ ಶೇ.30 ರಷ್ಟು ಭಾಗ ಕಾಣಿಸಿಕೊಳ್ಳಲಿದೆ. ಆನೆಗಾಗಿಯೇ ಕಳೆದ ನಾಲ್ಕು ತಿಂಗಳಿನಿಂದ ಕಾಯಬೇಕಾಯಿತು. ಕಾರಣ, ಪರ್ಮಿಷನ್‌ ಸಿಗಲಿಲ್ಲ. ಕೆಲ ದಿನಗಳ ಹಿಂದಷ್ಟೇ ಪರ್ಮಿಷನ್‌ ಸಿಕ್ಕಿದ್ದರಿಂದ ಕೇರಳಕ್ಕೆ ಹೋಗಿ ಆನೆಯೊಂದಿಗೆ ಫೋಟೋಶೂಟ್‌ ಮಾಡಿಸಿಕೊಂಡು ಬಂದಿದ್ದೇವೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಚನಾನಿರಾಜ.

ಇಲ್ಲಿ ಪಾರ್ವತಮ್ಮ ಮತ್ತು ಅವನ ಮಗ ನಡುವಿನ ಪ್ರೀತಿ, ವಾತ್ಸಲ್ಯ ಮುಖ್ಯವಾಗಿರಲಿದೆ. ಜೊತೆಗೊಂದು ಪ್ರೀತಿಯೂ ಇರಲಿದೆ. ಚಿತ್ರದಲ್ಲಿ ಸ್ವಾತಿ ಕೊಂಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 45 ದಿನಗಳ ಕಾಲ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕತ್ತೆಹೊಳೆ  ಗ್ರಾಮದಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ. ಎ.ಪಿ.ಅರ್ಜುನ್‌, ಚೇತನ್‌ಕುಮಾರ್‌ ಗೀತೆ ರಚಿಸಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ವಿಕ್ರಮ್‌ ಚಕ್ರವರ್ತಿ ಸಂಗೀತವಿದೆ. ಈ ಚಿತ್ರವನ್ನು ಯೋಗೀಶ್‌ ನಿರ್ಮಾಣ ಮಾಡುತ್ತಿದ್ದಾರೆ. 

ಚಿತ್ರದಲ್ಲಿ ಚಿಕ್ಕಣ್ಣ,ಸಿತಾರಾ ಸೇರಿದಂತೆ ಇತರೆ ಕಲಾವಿದರು ನಟಿಸಲಿದ್ದಾರೆ. ಸೆಪ್ಟೆಂಬರ್‌ನಿಂದ ಚಿತ್ರೀಕರಣ ಶುರು.

Advertisement
Advertisement

Udayavani is now on Telegram. Click here to join our channel and stay updated with the latest news.

Next