Advertisement

ಬಿಜೆಪಿಯವ್ರು ಪಶ್ಚಾತ್ತಾಪ ಯಾತ್ರೆ ಮಾಡಲಿ

07:27 AM Nov 03, 2017 | Team Udayavani |

ಬೆಂಗಳೂರು: ಬಿಜೆಪಿಯವರು ಪರಿವರ್ತನಾ ರ್ಯಾಲಿ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆಂದು ಲೇವಡಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಪಕ್ಷದ ನಾಯಕರು ಮೊದಲು ಅವರ ಮನಸ್ಸು ಪರಿವರ್ತನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದೋರು ಪರಿವರ್ತನೆ ರ್ಯಾಲಿ ಉದ್ಘಾಟನೆ ಮಾಡಿದ್ದಾರೆ. ಹಿಂದುತ್ವ ಹೆಸರಿನಲ್ಲಿ ಧರ್ಮಗಳ ನಡುವೆ ಸಂಘರ್ಷ ಮೂಡಿಸಿ ಸಮಾಜದ ಶಾಂತಿ ಹಾಳು ಮಾಡುತ್ತಿರುವ ಬಿಜೆಪಿಯವರು ಮೊದಲು  ಪರಿವರ್ತನೆಯಾಗಬೇಕು. ಹೀಗಾಗಿ, ಪಶ್ಚಾತ್ತಾಪ ಯಾತ್ರೆ ಮಾಡುವುದು ಒಳ್ಳೆಯದು ಎಂದು ಹೇಳಿದರು. ಬಿಜೆಪಿಯವರು ಅಧಿಕಾರ ದಲ್ಲಿದ್ದಾಗ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ರೆಡ್ಡಿ ಬ್ರದರ್ಸ್‌ಗೆ ಸಂಪತ್ತು ಲೂಟಿ ಮಾಡಲು ಬಿಟ್ಟರು. ಇದಕ್ಕೆ ಯಡಿಯೂರಪ್ಪ ಕುಮ್ಮಕ್ಕೂ ಇತ್ತು ಎಂದು ಟೀಕಿಸಿದರು.

ಬಿಜೆಪಿಯ ಭ್ರಷ್ಟಾಚಾರ ಜನ ಮರೆತಿಲ್ಲ:
ಪರಿವರ್ತನಾ ರ್ಯಾಲಿ ಉದ್ಘಾಟಿಸಲು ಬಂದಿರುವ ಅಮಿತ್‌ ಶಾ ಜೈಲಿಗೆ ಹೋಗಿ ಬಂದವರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೂ ಜೈಲಿಗೆ ಹೋಗಿ ಬಂದಿದ್ದಾರೆ. ಪರಿವರ್ತನೆ ರ್ಯಾಲಿಯಲ್ಲಿ ನಾವಿಬ್ಬರೂ ಜೈಲಿಗೆ ಹೋಗಿ ಬಂದಿದ್ದೇವೆ ಎಂದು ಹೇಳಿಕೊಂಡು ತಿರುಗುತ್ತಾರಾ ಅಥವಾ ನಮ್ಮ ಶಾಸಕರು ಬ್ಲೂಫಿಲಂ ನೋಡಿದ್ರು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನರೆಡ್ಡಿ ಸೇರಿ ನಾವೆಲ್ಲ ಲೂಟಿ ಮಾಡಿದ್ವಿ ಅಂತ ಹೇಳ್ತಾರಾ? ಎಂದು ಲೇವಡಿ ಮಾಡಿದರು. ಮತ್ತೂಮ್ಮೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲು ಜನರು ಈಗಾಗಲೇ
ತೀರ್ಮಾನ ಮಾಡಿಯಾಗಿದೆ ಎಂದರು. 

ರ್ಯಾಲಿ ವಾಹನ ವಿವಾದ: ಬಿಜೆಪಿಯವರ ಪರಿವರ್ತನೆ ಯಾತ್ರೆಗೆ ಬಳಸುತ್ತಿರುವ ವಾಹನದ ನೋಂದಣಿ ಫ‌ಲಕ ವಿವಾದಕ್ಕೆ ಕಾರಣವಾಗಿದೆ. ವಾಹನದ ಹಳದಿ ಬಣ್ಣದ ನಂಬರ್‌ ಪ್ಲೇಟ್‌ ಮೇಲೆ ಬಳಿ ಬಣ್ಣದ ನಂಬರ್‌ ಪ್ಲೇಟ್‌ ಅಂಟಿಸಲಾಗಿದೆ ಎಂದು ಆರೋಪದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಯವರ ಗಮನ ಸೆಳೆದಾಗ, ಹಳದಿ ಬಣ್ಣದ ನಂಬರ್‌ ಪ್ಲೇಟ್‌ ಮೇಲೆ ಬೇರೆ ಬಣ್ಣದ ಪ್ಲೇಟ್‌ ಅಂಟಿಸುವುದು ನಿಯಮ ಬಾಹಿರ. ಮೋಟಾರ್‌ ವೆಹಿಕಲ್‌ ಆ್ಯಕ್ಟ್ 1989 ಪ್ರಕಾರ ಉಲ್ಲಂಘನೆ. ಹೀಗಾಗಿ, ಪರಿಶೀಲಿಸಲು
ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ಸಿಎಂ ತಿಳಿಸಿದರು.

ಕಾನೂನು-ಸುವ್ಯವಸ್ಥೆಗೆ ಭಂಗ ತಂದರೆ ಕ್ರಮ
ಪರಿವರ್ತನಾ ಯಾತ್ರೆ ಅಥವಾ ಟಿಪ್ಪು ಜಯಂತಿ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಪಿಯವರು ಪರಿವರ್ತನಾ ರ್ಯಾಲಿ ಮಾಡಿಕೊಳ್ಳಲಿ, ಆದರೆ ಆ ನೆಪದಲ್ಲಿ ಕಾನೂನು-ಸುವ್ಯವಸ್ಥೆಗೆ ಭಂಗ ತಂದರೆ, ಟಿಪ್ಪು ಜಯಂತಿ ಸಂದರ್ಭದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಮಹಿಳೆಯೊಬ್ಬರು ಪೊಲೀಸ್‌ ಇತಿಹಾಸದಲ್ಲಿ ಮಹಾನಿರ್ದೇಶಕರಾಗಿದ್ದಾರೆ. ಬಿಜೆಪಿಯವರಿಗೆ ಶಾಂತಿ ಕದಡುವುದೇ ಕೆಲಸ. ಅದಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಪೊಲೀಸರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಗೃಹ ಸಚಿವರ ಸಭೆ: ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಪರಿವರ್ತನೆ ರ್ಯಾಲಿ ಹಾಗೂ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. 

ಫ್ಲಾಶ್‌ ಬ್ಯಾಕ್‌ಗೆ ಹೋಗಲಿ 
ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಏನು ಹೇಳಿದರು, ಬಿಜೆಪಿ ಪಕ್ಷ ಹಾಗೂ ನಾಯಕರ ಬಗ್ಗೆ ಏನೆಲ್ಲ ತುಚ್ಛವಾಗಿ
ಮಾತನಾಡಿದ್ದರು ಎಂಬುದನ್ನು ತಿಳಿಯಲು ಫ್ಲಾಶ್‌ ಬ್ಯಾಕ್‌ಗೆ ಹೋಗಲಿ. ಯಡಿಯೂರಪ್ಪ ಕಾಲೆಳೆಯೋರು ಅವರ
ಪಕ್ಷದಲ್ಲೇ ಇದ್ದಾರೆ. ಅನಂತಕುಮಾರ್‌, ಈಶ್ವರಪ್ಪ, ಅಶೋಕ್‌, ಅದ್ಯಾರೋ ಸಂತೋಷ್‌ ಇದ್ದಾರಂತಲ್ಲಾ ಅವರೇ ಸಾಕು.

 ●ಸಿದ್ದರಾಮಯ್ಯ, ಮುಖ್ಯಮಂತ್ರಿ

ಬಿಜೆಪಿಯವರು ಪರಿವರ್ತನಾ ರ್ಯಾಲಿ ಬದಲಿಗೆ ಪಶ್ಚಾತ್ತಾಪ ರ್ಯಾಲಿ ಮಾಡಬೇಕಿತ್ತು. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾಗ ಏನೆಲ್ಲ ಮಾಡಿದರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಅವರ ನಾಟಕಕ್ಕೆ ಯಾರೂ ಬೆಲೆ ಕೊಡುವುದಿಲ್ಲ. 
●ರಾಮಲಿಂಗಾರೆಡ್ಡಿ, ಗೃಹ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next