Advertisement

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ

01:16 AM Oct 30, 2024 | Team Udayavani |

ಹಾಸನ: ಮನೆಗೆ ಅತಿಥಿಗಳು ಬಂದಾಗ  ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಮನೆಯಿಂದ ಹೊರ ಹೋದ ಮೇಲೆ ಅದರ ಪ್ರಶ್ನೆಯೇ ಉದ್ಭವಿಸಲ್ಲ. ಯಾರ್ಯಾರು ಹೊಂದಾಣಿಕೆ ರಾಜಕಾರಣ ಮಾಡ್ತಾರೋ ಅವರೆಲ್ಲರನ್ನು ಒಬ್ಬೊಬ್ಬರಾಗಿ ಪಕ್ಷದಿಂದ ಹೊರ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಹಾಸನಾಂಬೆ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷ ಶುದ್ಧೀಕರಣ ಆಗಬೇಕೆಂದು ಅನೇಕ ಹಿರಿಯರ ಆಸೆ ಇತ್ತು. ಅವರ ಆಸೆಗೆ ತಕ್ಕಂತೆ ಶುದ್ಧೀಕರಣ ಆಗುತ್ತಿದೆ. ಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದರು. ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿ, ನಾನಂತೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಂಘಟನೆ, ಉಪಚುನಾವಣೆಯ ಜವಾಬ್ದಾರಿ ಸೇರಿದಂತೆ ಮಾಡಲು ಬೇಕಾದಷ್ಟು ಕೆಲಸವಿದೆ ಎಂದರು.

ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಯೋಗೇಶ್ವರ್‌ ನಾಮಪತ್ರ ಸಲ್ಲಿಸಿದ ನಂತರ ಗೆದ್ದೇ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್‌ನವರ ಬ್ಯಾಟರಿ ಈಗ ಡೌನ್‌ ಆಗಿದೆ. ಎನ್‌ಡಿಎ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆಯಿಂದ ಚಿತ್ರಣವೇ ಬದಲಾಗುತ್ತಿದೆ ಎಂದರು.

“ಹಚ್ಚಿರುವ ಬೆಂಕಿ ಆರಿಸಲು ಸಾಧ್ಯವಾಗಲ್ಲ’: ಸರಕಾರಕ್ಕೆ ಎಚ್ಚರಿಕೆ
ರಾಜ್ಯದಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ವಕ್ಫ್ ಬೋರ್ಡ್‌ ಕಬಳಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮಕ್ಕು ಕೊಡುವ ಕೆಲಸವನ್ನು ಸಚಿವ ಜಮೀರ್‌ ಅಹಮದ್‌ ಮಾಡುತ್ತಿರುವುದು ದುರದೃಷ್ಟಕರ. ಸರ್ಕಾರ ತಕ್ಷಣವೇ ಪರಿಸ್ಥಿತಿ ಸುಧಾರಿಸದೇ ಹೋದರೆ ಹಚ್ಚಿರುವ ಬೆಂಕಿ ಆರಿಸಲು ಸಾಧ್ಯವಾಗುವುದಿಲ್ಲ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.

ಒಬ್ಬ ಸಚಿವರೇ ಮುಂದೆ ನಿಂತು ವಕ್ಫ್ ಬೋರ್ಡ್‌ ನೆಪದಲ್ಲಿ ರೈತರ ಭೂಮಿ ಕಬಳಿಸಲು ಮುಂದಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಸಚಿವರಿಂದ ಆಗುತ್ತಿದೆ. ರೈತರ ಭೂಮಿ ಕಿತ್ತುಕೊಳ್ಳುವ ಕೆಲಸವನ್ನು ಬಿಡಬೇಕು. ಇಲ್ಲದಿದ್ದರೆ ನೀವೇ ಹಚ್ಚಿರುವ ಕಿಡಿ ರಾಜ್ಯಾದ್ಯಂತ ಜ್ವಾಲೆಯಾಗಿ ಹರಡಲಿದೆ. ಆಗ ಅದನ್ನ ಆರಿಸಲು ಸಾಧ್ಯವಾಗುವುದಿಲ್ಲ. ಕಿಡಿಯನ್ನು ಆರಂಭದಲ್ಲೇ ಆರಿಸಿ, ದೇವರು ಮೆಚ್ಚುವ ಕೆಲಸ ಮಾಡಿದರೆ ಒಳ್ಳೆಯದು ಎಂದರು.

Advertisement

ಸಂಸದ ಗೋವಿಂದ ಕಾರಜೋಳ ನೇತೃತ್ವದ ಪಕ್ಷದ ಮುಖಂಡರ ತಂಡವು, ಪರಿಶೀಲನೆಗೆ ವಿಜಯಪುರಕ್ಕೆ ಹೋಗಿದ್ದು, ಬುಧವಾರದೊಳಗೆ ವರದಿ ಕೊಡಲಿದೆ. ಆ ವರದಿ ಆಧರಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next